• ಅವತರಿಸು ತಾಯಿ

    ಅದೊಂದು ಪೌರ್ಣಿಮೆ ರಾತ್ರಿ, ದೂರದ ದೊಡ್ಡ ಬಯಲಲ್ಲಿ ದೇವಿ ಮಹಾತ್ಮೆ ಯಕ್ಷಗಾನ. ಮಧ್ಯರಾತ್ರಿ ಮೈಸಾಸುರನ ರಂಗ ಪ್ರವೇಶದ ಹೊತ್ತು. ಕೊಂಬು, ಚಂಡೆ, ಮದ್ದಳೆಗಳ ಸದ್ದು ಜೋರಾಗಿಯೇ ಇತ್ತು. ಜನರೆಲ್ಲ ಯಕ್ಷಗಾನದಲ್ಲಿ ತಲ್ಲೀನರಾಗಿದ್ದರು. ಪಂಜಿನ ಮಧ್ಯದಲ್ಲಿ ಮೈಸಾಸುರನು ರೌದ್ರಾವತಾರದಲ್ಲಿ ಆಗಮನ. ಅದೇ ಸಮಯದಲ್ಲಿ ಅಲ್ಲೇ ಸ್ವಲ್ಪದೂರದಲ್ಲಿ ಒಂದು ಪೊದೆಯ ಬಳಿ ನರರೂಪ ರಾಕ್ಷಸನೊಬ್ಬ ಅಮಾಯಕ ಹೆಣ್ಣನ್ನು ಅಟ್ಟಿಸಿಕೊಂಡು ಬಂದು, ತನ್ನ ರಕ್ಕಸ ಗುಣವನ್ನು ಪ್ರದರ್ಶಿಸ ತೊಡಗಿದ.

    ಅತ್ತ ಅಸುರನ ಅಟ್ಟಹಾಸ, ಇತ್ತ ಅಬಲೆಯ ಅಸಹಾಯಕತೆಯ ಅಶ್ರುಧಾರೆ. ಆಕೆ ಅದೆಷ್ಟೇ ಪ್ರಯತ್ನಿಸಿದರೂ ಅಷ್ಟಬಂಧನದಿಂದ ಹೊರಬರಲಾಗಲೇ ಇಲ್ಲ. ಇತ್ತ ಮಂದಿಯೆಲ್ಲಾ ಮೈಸಾಸುರನ ಕುಣಿತದ ಅಬ್ಬರದಲ್ಲಿ ಮೈ ಮರೆತಿದ್ದರು. ನಾರಿಯ ಕೂಗೂ ಅದಾರಿಗೂ ಕೇಳಿಸಲೇ ಇಲ್ಲ. ಅದಾಗಲೇ ರಂಗದಲ್ಲಿ ದೇವಿಯು ಅವತಾರವೆತ್ತಿ ಮೈಸಾಸುರನ ವಧೆಗೆ ಸಿದ್ದಳಾಗಿದ್ದಳು. ಆದರಿಲ್ಲಿ ಹುಣ್ಣಿಮೆ ಚಂದ್ರನೂ ಮೂಕ ಪ್ರೇಕ್ಷಕನಾಗಿದ್ದಾನೆ.

    ಕೊನೆಗೂ ದೇವಿ ಮೈಸಾಸುರನ ಹತ್ಯೆ ಮಾಡಿ, ಜನರ ರಕ್ಷಣೆ ಮಾಡಿದಳು. ಆದರೆ ಇತ್ತ ಈ ಹೆಣ್ಣು ಮಗಳು ಪರಿಪರಿಯಾಗಿ ಬೇಡಿದರೂ ತಾಯಿ ಕೈ ಹಿಡಿಯಲಿಲ್ಲ, ಅವತಾರವೆತ್ತಲಿಲ್ಲ. ಒಂದು ಕಡೆ ರಾಕ್ಷಸನ ಸಂಹಾರ, ಇನ್ನೊಂದೆಡೆ ಅಮಾಯಕಿಯನ್ನು ಅದೇ ಮೈಸಾಸುರನ ಸ್ವಾಗತಿಸಿದ ಪಂಜಿನಿಂದ ದಹನ. ಆ ಬೆಂಕಿಯ ಜ್ವಾಲೆಯ ತಾಪಕ್ಕೆ ಮೈಯ ಕಾವು ಏರಿ ತಕ್ಷಣ ಎಚ್ಚರಗೊಂಡೆ. ಕಂಡಿದ್ದು ಘೋರ ಕನಸ್ಸು ಎಂದು ತಿಳಿಯಿತು. ಬೆಂಕಿ ಆರಿತ್ತು, ಬೆಳಕು ಹರಿದಿದ್ದು. “ಕಲಿಯುಗದಲ್ಲಿ ಅಸುರ ಸಂಹಾರಕ್ಕೆ ಆ ದೇವಿ ಅದೆಂದು ಅವತಾರವೆತ್ತಿ ಬರುವಳೋ?” ಎಂದು ಮನದೊಳಗೆ ಮರುಗುತ್ತ ಎದ್ದು ನಡೆದೆ.

  • ಜಲಕನ್ಯೆ

    ದೂರ ತೀರದಲಿ ನೀರ ಚಿಲುಮೆಯಲಿ,

    ನಾರಿ ನಡೆದು ಬರಲು…

    ಕೋರೆಗಣ್ಣಿಂದ ನೋಡಿ ನಿನ್ನಂದ,

    ಸೂರೆಗೊಂಡೆ ನಾನು…

    ನೆರಳ ಹಿಂದರಸಿ ಬಂದೆ ನನ್ನರಸಿ,

    ಬೊಗಸೆ ನೀರ ಕೇಳಿ…

    ನನ್ನ ಕರೆಯನಾ ಮೀರಿ ಝರಿಯ ನಡುವಲ್ಲಿ,

    ಸರಸರನೆ ಹೊರಟೆಯೇನು ಕುವರಿ…

    ಅಚರವು ಇನ್ನೆಲ್ಲ ಈ ಹರಿವ ನೀರ ತೊರೆದು…

    ಮರೆಯಾದರೂನು, ಮರೆಯೆನು ನಾನು ವಿರಹ ಬೇಗೆಯಲ್ಲಿ.

    ಕಾಯುತಿರುವೆ ಇಲ್ಲೆ ಮತ್ತೆ ಬರುವವರೆಗೂ.

    ಚೂರು ಕರುಣೆ ತೋರು, ಬೇಗ ಬಂದು ಸೇರು.

    ಮರು ಜೀವ ಕೊಡಿಸು ಗೆಳತಿ….

  • ಬೆಳ್ಳಿ ತಂತಿಗಳು

    ಕಡು ಕಪ್ಪು ಮೋಡಗಳ ಮಧ್ಯದಲ್ಲಿ ಕೋಲ್ ಮಿಂಚಿನಂತೆ ಮಿರಮಿರನೆ ಮಿಂಚುತ್ತಿರುವ ಬಿಳಿಯ ಕೂದಲುಗಳು ವಯಸ್ಸಿನ ಓಟವನ್ನು ಒತ್ತಿ ಒತ್ತಿ ಹೇಳುತ್ತಿದೆ. ಆದರೆ ಮನಸ್ಸು… ಈಗಲೂ ತಾಯ ತೆಕ್ಕೆಯಲ್ಲಿ ತೊದಲು ನುಡಿಯುವ ಮಗುವಾಗಿರಲು ಬಯಸುತ್ತಿದೆ. ಏನನ್ನೆಲ್ಲಾ ಬದುಕಲ್ಲಿ ಒಪ್ಪಿಕೊಂಡ ಮನಸ್ಸಿಗೆ ಬಿಳಿಕೂದಲನ್ನು ಸ್ವೀಕರಿಸಲಾಗುತ್ತಿಲ್ಲ.

    ಕನ್ನಡಿಯ ಮುಂದೆ ನಿಂತು ನೋಡಿದಾಗಲೆಲ್ಲ ಇಣುಕಿಣುಕಿ ನೋಡಿ, ವ್ಯಂಗ್ಯ ನಗುವ ಬೀರಿ, ನನ್ನ ಕೆಣಕುವ ಯತ್ನ ಮಾಡುತ್ತಿವೆ ಈ ಬೆಳ್ಳಿ ತಂತಿಗಳು. ಬಾಲ್ಯದ ನೆನಪುಗಳು ಇನ್ನೂ ಹಸಿಯಾಗಿ ಇದ್ದಂತಿದೆ, ಆದರೆ ಆಗಲೇ ಮಧ್ಯವಯಸ್ಸು ದಾಟಿಯಾಗಿದೆ. ತಿರುಗಿ ನೋಡಿದರೆ ಸಾಧಿಸಿದ್ದು ಏನು ಇಲ್ಲ ಎಂದೆನಿಸುತ್ತದೆ. ಬೆಳ್ಳಿ ಕೂದಲುಗಳು ನನ್ನನ್ನು ಬಡಿದೆಬ್ಬಿಸಿದಂತಿದೆ.

    ಇಷ್ಟು ದಿನ ಬೆತ್ತಲ ಪ್ರಪಂಚದಲ್ಲಿ ಮುಖಕ್ಕೆ ಬಣ್ಣ ಹಚ್ಚಿ ಮಾರುವೇಷದಲ್ಲಿ ಬದುಕ್ಕಿದ್ದಾಯಿತು, ಇನ್ಮುಂದೆ ಕೂದಲಿಗೆ ಬಣ್ಣ. ಹೀಗೆ ಬಣ್ಣ ಬಳಿದುಕೊಂಡು, ಬಳಿಸಿಕೊಂಡು, ಮತ್ತೊಬ್ಬರಿಗೆ ಹಚ್ಚುವುದರಲ್ಲಿ ಜೀವನದ ಅಮೂಲ್ಯ ಸಮಯವನ್ನು ಕಳೆದಿದ್ದಾಯಿತು. ಬಾಹ್ಯಸೌಂದರ್ಯ ಸುಕ್ಕಾದರೂ, ಅಂತರಂಗ ತುಕ್ಕು ಹಿಡಿಯಲು ಎಂದೂ ಬಿಡಬಾರದು. ಇನ್ನಾದರು ಸಾರ್ಥಕತೆಯ ಸಂತಸದ, ಸತ್ವಭರಿತ ಸಮಯಕ್ಕಾಗಿ ಸೆಣೆಸಾಡುವೆ.

  • ನೀನಲ್ಲಿ ನಾನಿಲ್ಲಿ

    ನೀನಲ್ಲಿ ನಾನಿಲ್ಲಿ, 

    ಬಾರದಿರಲಿ ಮುಂದೆಂದೂ ಬಾಳಲ್ಲಿ. 

    ಬಲು ಕಷ್ಟ ಈ ವಿರಹ, 

    ಇನ್ನೆಷ್ಟು ದಿನ ಈ ತರಹ….

    ಕರಿ ಮುಗಿಲ ಮೇಲೆ,

    ಬರೆದಿರುವ ಸಾಲೆ…

    ನನ್ನೊಲವಿನ ಓಲೆ…

    ತುಂಬಿರುವೆ ಪ್ರೀತಿ ಪ್ರತಿ ಪದದಲೂ, 

    ಮತ್ತೆ ಮತ್ತೆ ಓದು ನನ್ನ ನೆನೆಯಲು.

  • ನೀರವ ಮೌನ

    ಈ ನೋವು ಏತಕೆ ನಾನರಿಯೆನು…

    ಹರಿವ ನೀರೆಂದು ಒಂದೆಡೆ ನಿಂತಿಲ್ಲ.

    ಬೀಸುವ ಗಾಳಿಯು ಬೇಸರಗೊಂಡಿಲ್ಲ.

    ಸುಡುವ ಸೂರ್ಯನು, ಸಮಯವ ಮರೆತಿಲ್ಲ.

    ಭೋರ್ಗರೆವ ಅಲೆಗಳು ದಡ ಸೇರಲು ದಣಿದಿಲ್ಲ.

    ಸುತ್ತೆಲ್ಲ ಸಂಭ್ರಮದ ಸುಗ್ಗಿ ಸಾಗಿರಲು,