Author: ನಮ್ರತಾ ಶೆಟ್ಟಿ

  • ಮಗನಿಗೊಂದು ಪತ್ರ

    ಮಾಸಿದ ಸೀರೆಯ ತೂತುಗಳು, ಸುಕ್ಕು ಚರ್ಮದ ಗೆರೆಗಳು, ಬೆಳ್ಳಿ ತಂತಿಯಂತಿರುವ ಕೂದಲುಗಳು ನಿನ್ನ ಕಾಣದೆ ಕಳೆದ ದಿನಗಳ ಲೆಕ್ಕವ ಹೇಳುತ್ತಿದೆ. ಕಣ್ಣುಗಳು ಮಂಜು ಮಂಜಾಗಿ ಬಹು ದಿನಗಳಾಗಿವೆ. ಬಲವೇ ಇಲ್ಲದ ನಿನ್ನ ಎತ್ತಾಡಿಸಿದ ಈ ಕೈಗಳು ಕಾದು ಕುಂತಿವೆ ನಿನ್ನ ಬಿಗಿ ಹಿಡಿತಕ್ಕೆ.

    ಸುತ್ತಲೂ ಸಾವಿರ ಮಂದಿ ಇದ್ದರೂ, ನನ್ನ ಕಣ್ಣು ಹುಡುಕುವುದು ಮಗನೇ ನೀನ್ನೆಲ್ಲಿ ಎಂದು. ಸಂಸಾರದ ಹೊರೆ ಹೊತ್ತು ಈ ಬೆನ್ನು ಸಂಪೂರ್ಣ ಬಾಗಿದೆ. ನಿನ್ನ ಆಸ್ತಿ, ಐಶ್ವರ್ಯದಲ್ಲಿ ನನಗಿಲ್ಲ ಆಸೆ. ನಾ ಬಯಸುವುದು ನಿನ್ನಿಂದ ಒಂದಿಷ್ಟು ಪ್ರೀತಿಯನಷ್ಟೇ. ನೀ ಸಾಕಿದ ನಾಯಿ ಮರಿಗಾದರೂ ನಿನ್ನ ಮನೆಯಲ್ಲಿ ಒಂದಿಷ್ಟು ಜಾಗ ಕೊಟ್ಟಿರುವ ಆದರೆ ನಿನ್ನೀ ತಾಯಿಗೆ ಮನೆ-ಮನದಲೆಲ್ಲೂ ಜಾಗವಿಲ್ಲದೆ ಇನ್ನೆಲ್ಲೋ ದೂರ ಕಳಿಸಿರುವೆ.

    ಮುಸ್ಸಂಜೆ ಮಬ್ಬಲ್ಲಿ ಕುಳಿತಿರುವೆ ನಾನು. ಇನ್ನೇನು ಕತ್ತಲು ಕವಿಯುವ ಹೊತ್ತಾಗುತ್ತಿದೆ. ತುತ್ತು ಇಟ್ಟ ನಿನ್ನೀ ತಾಯಿಯ ಚಿತ್ತವ ಅರಿತು ಇತ್ತೊಮ್ಮೆ ಬಂದು ಕೈ ಹಿಡಿದು ಆಲಂಗಿಸು. ಮತ್ತಾವ ಸೂರ್ಯಾಸ್ತಕ್ಕೂ ಸಿದ್ಧ ನಾನು.

  • ಶಬರಿ

    ತುಂಬಿದ ಬಸಿರು, ಅಂಬಲಿಗೂ ಅಲೆದಾಟ. ಹೊಟ್ಟೆಯಲ್ಲಿ ಹೊತ್ತಿರುವುದು ಕೂಸನಷ್ಟೇ ಅಲ್ಲ, ಹಸಿವನ್ನು, ಹಾಗೆಯೇ ನೋವಿನ ಮೂಟೆಯನ್ನೂ ಕೂಡ. ಹಸಿವ ನೀಗಿಸಲೂ ಕಷ್ಟವಿರುವಾಗ ಎಲ್ಲಿಯ ಬಸುರಿಯ ಬಯಕೆ? ಹೇಗೋ ಅರೆ ಹೊಟ್ಟೆಯಲ್ಲಿ ದಿನ ಕಳೆಯುತ್ತಿದ್ದಾಳೆ ಶಬರಿ. ಅವಳ ಜೀವನದಲ್ಲಿ ಎಲ್ಲವೂ ಕನಸಿನಂತೆ ನಡೆದು ಹೋಯಿತು. ಕನಸ್ಸೆಂದು ಹೇಳಲೂ ಸಾಧ್ಯವಿಲ್ಲ. ಏಕೆಂದರೆ ಕುರುಹು ಅವಳ ಗರ್ಭದಲ್ಲಿ ಕೂತಿತ್ತು. ಹೊಂಗೆ ಮರದಡಿಯಲ್ಲಿ ಹಳೆಯ ನೆನಪುಗಳ ಹೆಣೆಯಲಾರಂಭಿಸಿದಳು ಶಬರಿ.

    ಆಗಿದ್ದು ಪ್ರೇಮ ವಿವಾಹ, ಸಿಕ್ಕಿದ್ದು ಊರಿಂದ ಬಹಿಷ್ಕಾರ. ಎಲ್ಲವೂ ಇತ್ತು, ಯಾವುದಕ್ಕೂ ಕಡಿಮೆ ಇರಲಿಲ್ಲ. ಅಪ್ಪ-ಅಮ್ಮನ ಮುದ್ದಿನ ಶಬರಿ ನಾನು. ಅಣ್ಣಂದಿರ ಪ್ರೀತಿಯ ಶಬರಿ ನಾನು. ಹೂವಿನಂತೆ ಬೆಳೆದೆ, ಕಷ್ಟಗಳ ಸುಳಿವೂ ನನ್ನೆಡೆಗೆ ಸುಳಿದಿದ್ದು ನೆನಪಾಗುತ್ತಿಲ್ಲ. ಅಣ್ಣಂದಿರು ಸದಾ ನನ್ನನ್ನು ಕಾಳಜಿ ವಹಿಸುತ್ತಿದ್ದರು. ನನ್ನೆಲ್ಲಾ ಆಸೆಗಳನ್ನು ಪೂರೈಸುತ್ತಿದ್ದರು. ಇಂತಹ ಅಣ್ಣಂದಿರನ್ನು ಪಡೆದ ನಾನು ಅದೆಷ್ಟು ಪುಣ್ಯವಂತೆ ಎಂದು ಅದೆಷ್ಟೋ ಬಾರಿ ಅಂದುಕೊಳ್ಳುತ್ತಿದ್ದೆ. ನಾನು ಕೂಡ ಎಂದಿಗೂ ಅವರಿಗೆ ನೋವಾಗುವಂತೆ ನಡೆದುಕೊಳ್ಳುತ್ತಿರಲಿಲ್ಲ. ಹೀಗಿರುವಾಗ ಆಗಂತುಕನ ಆಗಮನ ಹಾದಿ ತಪ್ಪಿಸಿತು ನನ್ನನ್ನು. ನೂರು ಬಾರಿ ಅವರು ಹಿಂದೆ ಹಿಂದೆ ಬಂದರೂ ನೋಟ ಬದಲಿಸದ ನಾನು ನೂರಾ ಒಂದನೇ ಬಾರಿ ಅರಿಯದೆ ಅಡ್ಡದಾರಿ ಹಿಡಿದೆ. ಅವರು ನಿಜವಾಗಲು ಆಗಂತುಕರೇ, ನಮ್ಮ ಊರಿನವರೂ ಅಲ್ಲ. ಯಾವುದೋ ಊರಿಂದ ಸರಕಾರಿ ಕಾಮಗಾರಿಯ contract ವಹಿಸಿಕೊಂಡು ನಮ್ಮೂರಿಗೆ ಬಂದರು, ನನ್ನೊಂದಿಗೆ contract ಮಾಡಿಕೊಂಡರು. ಮನೆಯಲ್ಲಿ ವಿಷಯ ತಿಳಿಸಿದೆ. ಯಾರೂ ಒಪ್ಪಲಿಲ್ಲ. ಬದಲಿಗೆ ಹಲವು ಬಾರಿ ಬುದ್ಧಿ ಹೇಳಿದರು. ಆದರೆ ಪ್ರೀತಿಯ ಉತ್ತುಂಗದಲ್ಲಿದ್ದ ನನ್ನ ಕಿವಿಗೆ ಅದಾವುದೂ ಬಡಿಯಲೇ ಇಲ್ಲ. ಜಾಗವಿಲ್ಲ ನಿನಗೆ ಈ ಮನೆಯಲ್ಲಿ ಹೋಗು ಎಂದರು. ಸರಿ ಎಂದು ಹೊರಟು ನಿಂತೆ. ನನಗೊ ಆತ್ಮಗೌರವ, ಅವರ ಪ್ರೀತಿ, ಎಲ್ಲವನ್ನೂ ಬಿಟ್ಟು ಬದುಕುವ ಶಕ್ತಿ ತುಂಬಿಸಿತು. ಹೊರಟೆ ಊರಿಂದಾಚೆ. ನನ್ನ ಮನೆಯಂಗಳದ ಹೂವುಗಳು, ನನ್ನ ಮನೆಯ ಕಿಟಿಕಿ ಬಾಗಿಲುಗಳು ಯಾವುದೂ ನಾ ಹೊರಡುವುದ ತಡೆಯಲಿಲ್ಲ, ಎಲ್ಲಿಗೆ ಎಂದು ಕೇಳಲಿಲ್ಲ. ಕೇಳಿದ್ದರೂ ಉತ್ತರ ನಮ್ಮಿಬ್ಬರಲ್ಲಿಯೂ ಇರಲಿಲ್ಲ. ಒಂದು ಪಾಳು ಮಂಟಪದಲ್ಲಿ, ಹಸಿರು ಕೋಟೆಯ ಮಧ್ಯದಲ್ಲಿ ಅರಶಿಣ ದಾರ ಕತ್ತಿಗೆ ಬಿತ್ತು. ಅವರಿಗೂ ಸಹ ಅವರ ಮನೆಗೆ ನನ್ನ ಕರೆದೊಯ್ಯುವ ಧೈರ್ಯ ಇರಲಿಲ್ಲ. ಹೊರಟೆವು ಬಹುದೂರ…. ಬೆಟ್ಟಗುಡ್ಡಗಳ ದಾಟಿ ದೂರದಲ್ಲೊಂದು ಗುಡಿಸಲು ಕಟ್ಟಿದೆವು. ಮನೆಯೊಂದಿಗೆ ನಾವೂ ನಮ್ಮ ಬದುಕನ್ನು ಕಟ್ಟಿಕೊಂಡೆವು. ಮನೆ ಎಂದೂ ಚಿಕ್ಕದು ಅನ್ನಿಸಲಿಲ್ಲ ಏಕೆಂದರೆ ಮನಸ್ಸು ವಿಶಾಲವಾಗಿತ್ತು, ನಗುವು ತುಂಬಿತ್ತು. ಹಲವು ಸಂತಸದ ದಿನಗಳು ಕಳೆದೆವು ಈ ಮನೆಯಲ್ಲಿ. ತಿಂಗಳುಗಳು ಉರುಳಿದವು.

    ಅದೊಂದು ದಿನ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಬಂದು, ನನ್ನವರನ್ನು ಬೇಗ ಊರಿಗೆ ಬನ್ನಿ ನಿಮ್ಮ ತಾಯಿ ಆರೋಗ್ಯ ಸರಿಯಿಲ್ಲ ಈ ಕೂಡಲೆ ಬನ್ನಿ ಎಂದ. ಅವರೂ ಭಿನ್ನ ಯೋಚಿಸದೆ ಹೊರಟು ನಿಂತರು. ಆ ಅಪರಿಚಿತ ಯಾರು? ಅವನಿಗೆ ನಾವಿರುವ ಜಾಗ ಹೇಗೆ ತಿಳಿಯಿತು? ಎಂದು ಕೇಳುವ ಯೋಚನೆಯೂ ನನಗೆ ಬರಲಿಲ್ಲ ನನ್ನ ಚಿಂತೆಯಲ್ಲಿ. ಏಕೆಂದರೆ ನನ್ನೊಳಗೆ ಆಗ ತಾನೆ ನಮ್ಮ ಕನಸ್ಸು ಚಿಗುರೊಡೆದಿತ್ತು. ಹೌದು ನನಗೆ ಮೂರು ತಿಂಗಳಾಗಿತ್ತು. ಆದರೂ ಮನಸ್ಸಿಲ್ಲದ ಮನಸ್ಸಿನಿಂದ ಅವರನ್ನು ಕಳುಹಿಸಿದೆ. ಕತ್ತಲಾಯಿತು ಆ ರಾತ್ರಿ ಇಡೀ ನಿದ್ದೆ ಹತ್ತಲಿಲ್ಲ. ಕತ್ತಲ ಭಯ ಕವಿದಿತ್ತು ನನ್ನಲ್ಲಿ. ಏಕೆಂದರೆ ಎಂದೂ ಒಬ್ಬಳೇ ಇದ್ದವಳಲ್ಲ, ಆದರೆ ಅಂತಹ

    ಅದೆಷ್ಟೋ ರಾತ್ರಿ ಕಳೆದರೂ ನನ್ನವರ ಸುಳಿವಿರಲಿಲ್ಲ. ಇನ್ನು ಕಾಯುವುದರಲ್ಲಿ ಅರ್ಥವಿಲ್ಲ ಎಂದು ಹೇಗೋ ಅವರ ಸ್ನೇಹಿತರೊಬ್ಬರು ನನಗೆ ಪರಿಚಯವಿದ್ದುದರಿಂದ ಅವರ ಸಹಾಯದಿಂದ ನನ್ನ ಅತ್ತೆಯ ಮನೆಯನ್ನು ತಲುಪಿದೆ. ಆದರೆ ಅಲ್ಲಿ ನನ್ನ ಗಂಡ ಇರಲಿಲ್ಲ. ವಯಸ್ಸಾದ ನನ್ನ ಅತ್ತೆಗೆ ನನ್ನ ಪರಿಚಯ ಹೇಳಿ, ನನ್ನ ಗಂಡನ ಬಗ್ಗೆ ವಿಚಾರಿಸಿದಾಗ ಅವರ ತಿರಸ್ಕಾರ ಮುಖದಿಂದ ಬಂದ ಉತ್ತರ ನನ್ನ ಮಗ ನನ್ನ ಬಳಿ ಬಾರದೆ ವರ್ಷ ಕಳೆಯಿತು ಎಂದು. ನಿಂತ ಕಾಲು ನಡುಗಲಾರಂಭಿಸಿತು. ಕುಸಿದೆ, ಅಲ್ಲೇ ನೆಲದಲ್ಲಿ ಕುಸಿದು ಕುಳಿತೆ. ಅಂತಹ ಸ್ಥಿತಿಯಲ್ಲೂ ಒಂದು ಲೋಟ ನೀರು ಕೂಡ ಕೇಳುವವರಿರಲಿಲ್ಲ. ನಾನು ಒಂಟಿ ಮಹಿಳೆ ಎಲ್ಲಿ ಹುಡುಕಲಿ, ಅದರಲ್ಲೂ ಹೊಟ್ಟೆಯಲ್ಲಿ ಕೂಸು. ದುಃಖದಿಂದ ಮನೆಗೆ ಮರಳಿದೆ. ತಿಂಗಳುಗಳು ಕಳೆಯಿತು. ಇನ್ನೂ ಕಾಯುತ್ತಿದ್ದೇನೆ. ಆ ಶಬರಿ ರಾಮನ ಕಾದಂತೆ ಕಾಯುತ್ತಿದ್ದೇನೆ. ಹೊಸ ಜೀವ ಕಣ್ಣು ಬಿಡುವ ಮೊದಲು ನಿಮ್ಮ ಆಗಮನವಾಗಲಿ ಎಂದು ಪ್ರತಿದಿನ ಆ ದಯೆಯೇ ಇಲ್ಲದ ದೇವರನ್ನು ಕೇಳುತ್ತಿದ್ದೇನೆ ಎಂದು ಹೇಳುತ್ತಾ, ತನ್ನ ಕಣ್ಣೀರನ್ನು ತಾನೇ ವರೆಸಿಕೊಳ್ಳುತ್ತಾ, ಹೊಂಗೆ ಮರದಡಿಯಿಂದ ಮನೆ ಕಡೆ ಭಾರವಾದ ಹೆಜ್ಜೆಯಿಂದ ನಡೆದಳು.

    ಕಾಡಲ್ಲಿ ಮೂಕಪ್ರಾಣಿಗಳು ಜನ್ಮ ನೀಡುವಂತೆ ಈ ತಾಯಿಯು ಹೆತ್ತಳು. ಅರೆಬೆಂದದ್ದನ್ನು ತಿಂದ, ಅರೆಹೊಟ್ಟೆಯಲ್ಲಿ ಬಸಿರನ್ನು ಕಳೆದವಳ ಮಗು ಹೇಗೆ ಆರೋಗ್ಯವಾಗಿ ಇದ್ದೀತು. ಭೂಮಿಗೆ ಬಂದ ಕೂಡಲೆ ಕೂಸು ಅಳಲಿಲ್ಲ. ಅತ್ತಿದ್ದು ಶಬರಿ. ಅವಳೊಡನೆ ವಿಧಿಯಾಡಿದ ಆಟಕ್ಕೆ ಬಿಕ್ಕಿ ಬಿಕ್ಕಿ ಅತ್ತಳು. ತಾಯಿಯ ಕರುಳ ಕೂಗಿಗೆ ಕುಡಿಯೂ ಸ್ಪಂದಿಸಿ ರೋಧಿಸಲಾರಂಭಿಸಿತು. ಶಬರಿಯ ಖುಷಿಗೆ ಪಾರವೇ ಇರಲಿಲ್ಲ. ಕಂದನ ಆಗಮನ ಅವಳ ಜೀವನದ ದಿಕ್ಕನ್ನೇ ಬದಲಿಸಿತು. ಅದೇ ಸಮಯಕ್ಕೆ ಬಹುದಿನಗಳಿಂದ ಕಾಣೆಯಾಗಿದ್ದ ಅವಳ ಗಂಡನ ಆಗಮನವಾಯಿತು. ಶಬರಿಗೆ ಸ್ವರ್ಗವೇ ಧರೆಗಿಳಿದ ಖುಷಿ. ಒಂದೆಡೆ ಗಂಡ, ಇನ್ನೊಂದೆಡೆ ಮಗು, ಇನ್ನೇನು ಬೇಕು ಎಂಬ ಭಾವ. ಸಂತಸದ ಆನಂದ ಬಾಷ್ಪದೊಂದಿಗೆ ಗಂಡನ ಕತ್ತಿನ ಪಟ್ಟಿ ಹಿಡಿದು ಕೇಳಿದಳು, ಏಕೆ ನನ್ನನ್ನು ತೊರೆದು ಹೋದಿರಿ? ಬಸುರಿ ಹೆಂಗಸಿನ ನೆನಪೇ ಆಗಲಿಲ್ಲವೇ? ಎಂದು. ಅವನು ಸ್ವಲ್ಪ ಹೊತ್ತು ಸ್ಥಬ್ದನಾದ. ಬಹಳ ದಣಿದಿದ್ದ. ಮಾತನಾಡುವ ಸ್ಥಿತಿಯಲ್ಲೂ ಇರಲಿಲ್ಲ. ಆದರೂ ಹೆಂಡತಿ, ಮಗುವನ್ನು ನೋಡಿ ಅದೆಲ್ಲಿಂದಲೋ ಹೊಸ ಶಕ್ತಿ ಹುಟ್ಟಿತ್ತು. ತನ್ನ ಕಾಣೆಯಾದ ಕಥೆಯನ್ನು ವಿವರಿಸಿದ. ಹೊರಟ್ಟಿದ್ದು ನಾನು ನನ್ನ ಮನೆಗೆ ತಾಯಿಯ ನೋಡಲೆಂದೇ, ಆದರೆ ಆಗಿದ್ದು ನನ್ನ ಅಪಹರಣ ಎಂದ. ಅಪಹರಣವೇ…? ಯಾರು ಮಾಡಿದ್ದು ಎಂದು ಶಬರಿ ಬಹು ದುಃಖದಿಂದ ವಿಚಾರಿಸಿದಳು. ಆಗ ಅವಳ ಗಂಡನಿಂದ ಬಂದ ಉತ್ತರ, ಹೌದು ಅಪಹರಣ. ಮಾಡಿದ್ದು ಮತ್ಯಾರು ಅಲ್ಲ ನಿನ್ನ ಒಡಹುಟ್ಟದವರು. ನಿನ್ನನ್ನು ಅವರಿಂದ ದೂರ ಮಾಡಿದ್ದಕ್ಕೆ ನನಗೆ ಸಿಕ್ಕ ವನವಾಸ. ಆದರೆ ನನ್ನ ಮಗುವನ್ನು ನೋಡುವ ಋಣ ನನಗಿತ್ತು ಅನ್ನಿಸುತ್ತಿದೆ, ಹಾಗಾಗಿ ನಾನು ಹೇಗೋ ತಪ್ಪಿಸಿಕೊಂಡು ಬಂದೆ ಎಂದು ದುಃಖ ತುಂಬಿದ ದನಿಯಿಂದ ನುಡಿದ.

    ಶಬರಿಗೆ ದುಃಖ, ಆತಂಕ, ದ್ವೇಷ, ಆವೇಶ ಎಲ್ಲಾ ಭಾವನೆಗಳು ಒಟ್ಟಿಗೆ ಉಮ್ಮಳಿಸಿತು. ಕೂಗಿ ಕೂಗಿ ಅತ್ತಳು. ತನ್ನ ಒಡಹುಟ್ಟಿದವರು ತನಗೆ ಮಾಡಿದ ಅನ್ಯಾಯಕ್ಕೆ. ಅವಳಿಗೇ ಅರಿಯದ ವಿಷಯವೆಂದರೆ ಅದೇ ಅರೆಘಳಿಗೆಯಲ್ಲಿ ತನ್ನ ಈ ನರಕಯಾತನೆಗೆ ಕಾರಣವಾದವರ ಮೇಲಿನ ಕೋಪ ಕರಗಿತು. ಅದ್ಯಾಕೋ ಅವರ ಮುಂದೆ ಹೋಗಿ, ಅವರನ್ನು ಪ್ರಶ್ನಿಸಬೇಕು ಎಂದು ಅವಳಿಗೆ ಅನ್ನಿಸಲಿಲ್ಲ. ಬದಲಿಗೆ ತನ್ನ ಪರಿಪೂರ್ಣ ಕುಟುಂಬ ಕಂಡು ಆನಂದಗೊಂಡಳು. ಮುಂದೆ ಈ ಸಂತಸ ಹೀಗೆ ಇರಲು ನಾವು ಪ್ರತಿದಿನ ಪ್ರಾರ್ಥಿಸುವ ಎಂಬ ಭಾವ ಮೂಡಿತು. ಮಗುವಿನ ಜನನ ಶಬರಿಯ ಹೊಸ ಬದುಕಿಗೆ ದಾರಿ ದೀಪವಾಯಿತು.

  • ನನಗ್ಯಾಕೆ ಹೀಗೆ ಅಮ್ಮಾ…

    ಅಮ್ಮಾ, ಕಾಲ ಇಷ್ಟು ಬೇಗ ಹೇಗೆ ಬದಲಾಯಿತು? ನನ್ನ ಪೀಳಿಗೆಗೂ, ನಿನ್ನ ಪೀಳಿಗೆಗೂ ಇಷ್ಟು ಅಂತರ ಯಾಕೇ? ನಿಜಕ್ಕೂ ನಂಬೋಕಾಗಲ್ಲ. ನೀನು ಯಾವಾಗ್ಲೂ ಹೇಳ್ತಿದ್ದೆ ಪ್ರತಿದಿನ ಶಾಲೆಗೆ ತುಂಬಾ ಖುಷಿ ಖುಷಿಯಾಗಿ, ಕುಣಿತಾ, ನಲಿತಾ ಹೋಗ್ತಾ ಇದ್ದೆ ಅಂತಾ. ನಿನಗೆ ನಿನ್ನ ಶಾಲೆ ಅಂದರೆ ತುಂಬಾ ಇಷ್ಟ. ಸ್ನೇಹಿತರ ಜೊತೆ ಬಹಳ ಸಮಯ ಕಳೀತಾ ಇದ್ದೆ. ಹಾಗೆಯೇ ನಿಮ್ಮ ಕಾಲದಲ್ಲಿ ತಪ್ಪು ಮಾಡಿದ್ರೆ ಟೀಚರ್ ಬೆತ್ತದಲ್ಲಿ ಹೊಡಿತಾ ಇದ್ರು. ಹೀಗೆ ಹಲವು ಬಾರಿ ನಿನ್ನ ಬಾಲ್ಯದ ಶಾಲೆಯ ನೆನಪುಗಳನ್ನ ಹಂಚಿಕೊಳ್ತಾ ಇದ್ದೆ. ಆದರೆ ಅಂದಿಗೂ, ಇಂದಿಗೂ ಅದೆಷ್ಟು ಅಂತರ???

    ನನಗೂ ನನ್ನ ಗೆಳೆಯರೊಂದಿಗೆ ಶಾಲೆಯಲ್ಲಿ ಸವಿ ನೆನಪುಗಳನ್ನ ಪೋಣಿಸೋಕೆ ಇಷ್ಟ. ಆದರೆ ಈಗಿನ ಶಾಲೆಗಳಲ್ಲಿ ಒಡನಾಡಿಗಳೊಂದಿಗೆ ಒಡನಾಟಕ್ಕೆಲ್ಲ ಸಮಯಾನೆ ಇಲ್ಲ, ಒತ್ತಡದ ಓದು ಮಾತ್ರ ಇಲ್ಲಿ. ನಿಮ್ಮ ಕಾಲದ “ಬೆತ್ತದ ಬಡಿಗೆಗಳು ಸ್ವಲ್ಪ ಹೊತ್ತು ಉರಿಕೊಟ್ಟು, ಬರೆಯಾಗಿ, ಮಾಸಿಹೊಗ್ತಾ ಇತ್ತು”. ಆದರೆ ಈಗಿನ ಶಿಕ್ಷಣದ ಮನಸಿನ ಮೇಲಿನ ಬರೆಗಳು ನಮ್ಮ ಮಾನಸಿಕ ಬೆಳವಣಿಗೆಯನ್ನೇ ಮೊಟಕುಗೊಳಿಸ್ತಾ ಇದೆ. ನಿನ್ನ ಮನೆಯಲ್ಲಿ ಯಾವತ್ತಾದ್ರು ನಿನ್ನ ಓದು ಓದು ಅಂತ ಅಜ್ಜ, ಅಜ್ಜಿ ಈಗ ನೀನು ನನಗೆ ಒತ್ತಡ ಹಾಕೋ ಅಷ್ಟು ಹಾಕ್ತಾ ಇದ್ರಾ? ಶಾಲೆಯಲ್ಲಿ ಪ್ರೆಶರ್ ಕುಕ್ಕರ್ ನಲ್ಲಿ ಬೆಂದು ಕರಗಿದ್ದು ಸಾಕಾಗಿಲ್ಲ ಅಂತ ನೀನು ಮತ್ತೆ ಬೇಯಿಸಿ ನನ್ನನ್ನು ಪಾಯಸಾ ಮಾಡತ್ತೀಯ. ಪ್ಲೀಸ್ ಅಮ್ಮ ಇಷ್ಟು ಒತ್ತಡ ಬೇಡ. ಹೊರೋಕಾಗೊಲ್ಲ. ನಿನ್ನ ಕಾಲದಲ್ಲಿ ನಿನಗೆ ಇದ್ದಷ್ಟು ಶಕ್ತಿ ನನ್ನ ಮೂಳೆಗಳಿಗಿಲ್ಲ. ಯಾಕೆಂದರೆ, ನಾನು ಫಾಸ್ಟ್ ಫುಡ್ ತಿಂದು ಬೆಳೆದವನು. ಅರ್ಥಮಾಡಿಕೋ ಅಮ್ಮ.

    ನನಗೆ ನೆನಪಿದೆ ನೀನು ಹೇಳ್ತಾ ಇದ್ದೆ, ನೀನು ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಯಲ್ಲಿ ಕಳೀತಾ ಇದ್ದ ದಿನಗಳನ್ನ, ಮರದಿಂದ ಹಣ್ಣನ್ನ ಕಿತ್ತು ತಿನ್ನತಾ ಇದ್ದಿದ್ದನ್ನ, ತರಹ ತರಹದ ಆಟನಾ ಆಡ್ತಾ ಇದ್ದಿದ್ದನ್ನ. ಆದರೆ “ನನಗ್ಯಾಕೆ ಹೀಗೆ ಅಮ್ಮ??” ವರ್ಷಕ್ಕೆ ಒಂದು ಸಲ ಅಜ್ಜಿ ಅಜ್ಜನ ಹತ್ರ ಕರಕೊಂಡು ಹೋಗೋಕೂ ನಿನಗೂ, ಅಪ್ಪನಿಗೂ ಸಮಯ ಇಲ್ಲ. ಹಾಗೂ ಯಾವತ್ತಾದ್ರೂ ಹೋದ್ರೂನು ಮಾಲ್-ಗೆ ವಿಂಡೋ ಶೋಪಿಂಗ್ ಹೋದಂತೆ, ಒಂದಿನ ಅವರಿಗೆಲ್ಲಾ ಮುಖ ತೋರಿಸಿ ವಾಪಸ್ಸು ಪಂಜರ ಸೇರೋದು. ನನಗೂ ಸಾಕಾಗಿದೆ ಇಲ್ಲಿನ ಹೊಗೆ, ಧೂಳು ನುಂಗಿ ನುಂಗಿ. ನನಗೂ ಮರ ಹತ್ತಿ ಹಣ್ಣು ಕಿತ್ತು, ಆ ಹಣ್ಣಿನ ರಸನ ಸವಿಯೋಕೆ ಬಿಡಿ. ನಾನು ಮಣ್ಣಿನ ಘಮ ಸ್ವಲ್ಪ ಅನುಭವಿಸಬೇಕು. ಅಜ್ಜಿಯ ಪ್ರೀತಿಯ ಅಡುಗೆ ರುಚಿ ನೋಡ್ತೀನಿ. ಇದೇ ಮ್ಯಾಗಿ, ನೂಡಲ್ಸ್ ಸ್ಯಾಂಡವಿಚ್ ನನಗೂ ಸಾಕಾಗಿದೆ ಅಮ್ಮ. ಹಾಗೆಯೇ ಇದೇ ವಿಡಿಯೊ ಗೇಮ್ಸ್, ಯುಟ್ಯೂಬ್ ಬೇಜಾರಾಗ್ತಾ ಇದೆ. ನಾನು ಚಿನ್ನಿ ದಾಂಡು, ಲಗೋರಿ, ಮರಕೋತಿ, ಎಲ್ಲಾ ಆಡ್ತೀನಿ. ಬಿಡುವು ಮಾಡಕೊ ಅಮ್ಮ.

    ಎಲ್ಲಾ ಅಮ್ಮ ಅಮ್ಮ ಅಂತ ನಿನಗೆ ಹೇಳ್ತಾ ಇದಿನಿ ಅನಕೋ ಬೇಡ. ನಿನಗೆ ಹೇಳೋದು ಯಾಕೆ ಅಂದರೆ ಅಪ್ಪನಿಗೆ ಹೀಗೆಲ್ಲಾ ಹೇಳಿದ್ರೆ ಅವನು ಕೇಳಲ್ಲ. ಆದರೆ ನೀನು, ಎಲ್ಲಾ ಕೇಳ್ತಿಯಾ, ಹಾಗೇ ಚಾಚೂ ತಪ್ಪದೆ ಹೇಳ್ತಿಯಾ. ನೀನು ಒಂಥರಾ ಮಧ್ಯವರ್ತಿ ಇದ್ದ ಹಾಗೆ ನಿನಗೆ ಹೇಳಿದ್ರೆ ಅಪ್ಪನವರೆಗೂ ತಲಪೇ ತಲುಪತ್ತೆ ಅಂತಾ ಗೊತ್ತು. ಪ್ಲೀಸ್… ಅಮ್ಮಾ… ನನ್ನ ಕಾಲನೂ ಮುಂದಿನ ಪೀಳಿಗೆಗೆ ಮಾದರಿ ಆಗೋ ಹಾಗೆ ಮಾಡು.

  • ಬೆಳಗುತಿರಲಿ

    ಆರುತಿರುವ ಹಣತೆಯೊಂದು,

    ಕಾಯುತಿಹುದು ಎಣ್ಣೆಗೆಂದು.

    ಕೊನೆಯವರೆಗೂ ಛಲವ ಬಿಡದೆ,

    ಉರಿಯುತಿಹುದು ಧೃತಿಗೆಡದೆ.

    ಮಂದ ಬೆಳಕು, ನೊಂದ ಮನಕೂ,

    ಮುಂದೆ ಬರುವ ಕೈಗಳು ಬೇಕು.

    ಪರಿಪರಿಯ ಪತಂಗಗಳೆಲ್ಲಾ,

    ಸುತ್ತ ಸುತ್ತಿ, ಹಾರಿಹವು ಮೆಲ್ಲ.

    ಅರಿಯುತ್ತಿಲ್ಲ ಹೋರಾಟವಿದು,

    ತನ್ನ ಉಳಿವಿಗಾಗಿಯೋ? ಜಗವ ಬೆಳಗಲೆಂದೋ?

    ಒಟ್ಟಿನಲ್ಲಿ ಹಣತೆ ಬೆಳಗುತಿರಲಿ.

    ಬಣ್ಣ ಹೊಳೆಯುತಿರಲಿ.

  • ಕರೊನಾ ಕಂಬಿಯಲಿ

    ಬಂಧನದ ಬೇಸರ ಬೇಡ.

    ಬೆರೆತಿರುವ ಬವಣೆ ಬಕದಂತೆ ಪಸರಿಸಿದೆ,

    ಬಡಿದೋಡಿಸಲು ಬಂಡಾಯದ ಬಂಧನವಿದು.

    ಬಡವ ಬಲ್ಲಿದನೆಂಬ ಭೇಧ-ಭಾವ ಇದಕ್ಕಿಲ್ಲ.

    ಬೆರೆಯಲೊಂದು ಸಮಯ ನಿನ್ನವರೊಂದಿಗೆ,

    ಬಿಡುವಿಲ್ಲದ ಬದುಕಲ್ಲಿ ಬಂದ್ ಎರಗಿ ಬಂದು.

  • ಅಲ್ಪ ವಿರಾಮ

    ಮನೆಯಲ್ಲಿರಲು ಮರುಕವೇಕೆ? ನಿಮಗೆ ನೆಮ್ಮದಿಯಿಂದ ಸುರಕ್ಷಿತವಾಗಿರಲು ಮನೆಯಾದರೂ ಇದೆ. ಆದರೆ ಅದೆಷ್ಟು ಜನ ಬೀದಿಯಲ್ಲಿ ಮಲಗುವವರಿಗೆ ಎಲ್ಲಿಯ stay home?? ಎಲ್ಲಿಯ stay safe??

    ಒಂದು ಹೊತ್ತು ಊಟಕ್ಕೂ ಕಷ್ಟವಿರುವ ಅವರೆಂದೂ ಸಾಗರದಾಚೆಯ ಯಾನವನ್ನು ಕನಸಲ್ಲೂ ಕಂಡಿರಲಿಕ್ಕಿಲ್ಲ. ಆದರೂ ಸಿರಿವಂತರ ಸುತ್ತಾಟದಿಂದ ಹೊತ್ತು ತಂದುದರ ನೇರ ಪರಿಣಾಮವನ್ನು ಹೋರಲಾರೆ ಎಂದು ಹೇಳವ ಶಕ್ತಿ ಯೂ ಅವರಿಗಿಲ್ಲ. ಹೀಗಿರುವಾಗ, ಎಲ್ಲವನ್ನು ಹೊಂದಿರುವ ನೀವುಗಳು ಇನ್ನೆಲ್ಲಿಗೆ ಹೊರಟಿರುವಿರಿ? ಪ್ರಪಂಚದ ಓಟ, ಕಾಲಚಕ್ರದ ವೇಗ, ಎಲ್ಲವನ್ನು ಮೀರಿದ ವೇಗದಲ್ಲಿ ಓಡಿ ಓಡಿ ದಣಿದ ಕಾಲುಗಳಿಗೆ ಸದ್ಯಕ್ಕೆ ಒಂದು ಅಲ್ಪ ವಿರಾಮದ ಅವಶ್ಯಕತೆ ಇದೆ. ಇದರಿಂದ ಕೊರೊನಾ  ತಡೆಗಟ್ಟುವುದಷ್ಟೇ ಅಲ್ಲದೆ ವಾಹನ ದಟ್ಟಣೆಯಿಲ್ಲದೆ ಮಾಲಿನ್ಯವೂ ನಿಯಂತ್ರಿತವಾಗಿ, ಪ್ರಕೃತಿಮಾತೆ ಒಂದಿಷ್ಟು ದಿನ ನೆಮ್ಮದಿಯಿಂದ ಉಸಿರಾಡಲಿ.

  • ದುರ್ಬೀಜ

    ಬಿತ್ತ ಬೀಜ ದುರ್ಬೀಜ ಎಂದು ಅರಿಯಲು ಹಲವು ವರ್ಷಗಳೇ ಸಂದವು. ಬೆಳೆದು ನಿಂತ ಮರವನ್ನು ಕಿತ್ತೊಗೆಯವ ಧೈರ್ಯ, ಶಕ್ತಿ ನನ್ನಲ್ಲಿ ಇಲ್ಲ. ಏಕೆಂದರೆ, ಆ ಮರ ಈಗಾಗಲೇ ಬೆಳೆದು ಹೆಮ್ಮರವಾಗಿ ಬಹು ದೂರ ಬೇರ ಹಬ್ಬಿಸಿಕೊಂಡಿದೆ ಮತ್ತು ಇಂದು ಅದೇನೇ ಆಗಿದ್ದರೂ ನನ್ನದೇ ದೇಹದ ಭಾಗವೇ ಅಲ್ಲವೇ…

    ಭಾವನೆಗಳ ಬೇಲಿಯಲ್ಲಿ ಬಂಧಿಯಾಗಿರುವೆ ನಾನು. ಮನಸ್ಸು ಕರುಳ ಸಂಬಂಧವನ್ನು ಕೂಗಿ ಹೇಳುತ್ತಿದೆ. ಆದರೆ ಬುದ್ಧಿ, ಭೂಮಿಯ ಭಾರವನ್ನು ಹಗುರಾಗಿಸಿ, ಋಣವ ತೀರಿಸು ಎನ್ನುತ್ತಿದೆ. ಬುದ್ಧಿ ಮನಸ್ಸಿನ ನಡುವಿನ ಹೋರಾಟದಲ್ಲಿ ಗೆಲುವು ಯಾರದ್ದಾದರೂ ಸಂಭ್ರಮಿಸುವ ಸ್ಥಿತಿಯಲ್ಲಿ ನಾನಿಲ್ಲಿ ಇಂದು.

    ಪ್ರೀತಿ ವಾತ್ಸಲ್ಯದ ಅಮೃತಧಾರೆಯನ್ನೆರೆದೆ ನಿನಗೆ, ಅರಿಯಲಿಲ್ಲ ಅದೆಂದು ವಿಷವಾಗಿ ತಿರುಗಿತೆಂದು. ಅದೇನೇ ಇದ್ದರೂ ಈ ದುರ್ಬೀಜ ಸುತ್ತೆಲ್ಲ ಪಸರಿಸುವ ಮೊದಲು ನಾನೊಂದು ಧೃಡ ನಿರ್ಧಾರ ತೆಗೆದುಕೊಂಡು ಈ ಮಣ್ಣಿನ ಋಣ ತೀರಿಸಬೇಕು.

  • ಭರವಸೆಯ ಬೆನ್ನೇರಿ

    ಭರವಸೆಯ ಬೆನ್ನೇರಿ ಸಾಗಿ ಬಂದಿರುವೆ ನಾನು. ಲೋಕದ ಲೇವಡಿಗಳು ನನ್ನ ನೆಂದೂ ಕುಗ್ಗಿಸಲಿಲ್ಲ. ಬರಡು ಭೂಮಿಯಲ್ಲೂ ಬೆಳೆ ಬೆಳೆಯುವ ಛಲ ಒಂದಿಷ್ಟು ಕಡಿಮೆಯಾಗಿಲ್ಲ.

    ಪ್ರಸ್ತುತವನ್ನು ಪ್ರೀತಿಸಿ ಬದುಕುವ ನನಗೆ, ಭೂತಕಾಲವೆಂದೂ ಭಾರವೆನಿಸಲಿಲ್ಲ. ಭವಿಷ್ಯದ ಭಯ ಕಾಡಲಿಲ್ಲ. ಪ್ರತಿನಿತ್ಯ ಬದುಕು ಕಲಿಸುವ ಪಾಠ ನನ್ನ ಬಾಳ ದಾರಿಗೆ ನಕ್ಷೆ ಇದ್ದಂತೆ. ಕಷ್ಟಗಳ ಹೊರೆ ನನ್ನ ಬೆನ್ನ ಬಗ್ಗಿಸಿರಬಹುದು, ಗುರಿ ಸಾಧಿಸುವ ಭರವಸೆಯ ಸೆಲೆಯನ್ನಲ್ಲ.

  • ಕಾಂಚಾಣ

    ಮಣ್ಣಾಗುವುದು ಈ ದೇಹವಯ್ಯ..

    ಅದೆಷ್ಟು ಇನ್ನೂ ಮೋಹವಯ್ಯ?

    ತೀರದ ಬಯಕೆಯ ಹಂಬಲವೇಕೆ?

    ಸೋರುವ ಮಡಿಕೆಯು ತುಂಬುವುದೇನು?

    ಹರನೂ ಅರಿಯನು ನಿನ್ನಾಸೆಯ ಆಳ,

    ಅರೆ ನಿದ್ದೆಯಲೂ ನೀ ಹಾಕುವೆ ಗಾಳ.

    ಕಿತ್ತು ತಿನ್ನುವ ಕಡು ಬಡತನ ಒಂದು ಕಡೆ, ಕಿತ್ತೊಗೆಯುವ ದರ್ಪ ಇನ್ನೊಂದೆಡೆ. ಕಮರಿದ ಕನಸ್ಸು, ಕುಟುಕು ಕಾಯುತ್ತಿರುವ ಕೂಸು. ಕುರುಡು ಕಾಂಚಾಣದ ತುಳಿತಕ್ಕೆ ಕುಗ್ಗಿ ಕುಗ್ಗಿ ಒಂದೊತ್ತು ಕೂಳಿಗೂ ಕಷ್ಟ. ಬಡತನದ ಕಹಿ ಅರಗಿಸಲಾಗದ ಸ್ಥಿತಿ ಒಂದೆಡೆಯಾದರೆ, ಕಾಸಿನ ಕೇಕೆ ಇನ್ನೊಂದೆಡೆಗೆ. ಕಟ್ಟ ಕಡೆಯಲ್ಲಿ ಎಲ್ಲರೂ ಬದುಕುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ಕಠೋರ ಸತ್ಯ ಎಂದು ಅರ್ಥವಾಗುವುದೊ ಈ ಕೆಡವಿ ಬಾಳುವ ಕುಡಿಗಳಿಗೆ…

  • ಬೋಳು ಮರದ ಬುಡದಲ್ಲಿ

    ಒಂಟಿ ಬೋಳು ಮರದಡಿಯ ವಾಸ ನನ್ನದು. ಹೊಟ್ಟೆಯಲ್ಲಿ ಹಸಿವು, ಹಣೆಯ ಮೇಲೆ ಬಿಸಿಲು. ಹಸಿವು ನೀಗಿಸಲು ಹಣ್ಣುಗಳಿಲ್ಲ ಮರದಲ್ಲಿ, ಧಗೆಯ ತಣಿಸಲು ಎಲೆ ಹೂ ಹಂದರವಿಲ್ಲ. ಕಣ್ ತಂಪಾಗಿಸುವ ವಸಂತ ಋತು ಚಿಗುರಿನ ಸಿಂಗಾರದ ತೇರ ಕಾಣದೆ ವರ್ಷಗಳೇ ಕಳೆದಿದೆ. ಕಿವಿ ಇಂಪಾಗಿಸುವ ಗಿಜುಗುಡುವ ಗುಬ್ಬಿ ಗೀಜುಗಳ ಗೂಡುಗಳಿಲ್ಲ. ಮರೆಯಲ್ಲಿ ನಿಂತು ದಣಿವಾರಿಸಿಕೊಳ್ಳಲು ಬರುವ ಜಾನುವಾರುಗಳೂ ಇಲ್ಲ.

    ಗೆದ್ದಲಹುಳುಗಳ ದಿಬ್ಬಣ ಇತ್ತಕಡೆ ಸಾಗಿ ಬರುತ್ತಿರುವಂತಿದೆ. ಆದರೂ ಬೋಳು ಮರದ ತಾಯಿ ಬೇರಿನಲ್ಲಿ ಒಂದು ತೊಟ್ಟು ಜೀವ ಜಲ ಇನ್ನೂ ಹರಿದಿದೆ. ಹಾಗಾಗಿ ಮರವಿನ್ನೂ ನಿಂತಿದೆ, ನಾನು ನಿಂತಿದ್ದೇನೆ.

    ಇಬ್ಬರೂ ಪ್ರತಿ ದಿನವೂ ಕಾಯುವುದು ಪೌರ್ಣಿಮೆಯ ಚಂದ್ರನ ಬೆಳದಿಂಗಳೂಟಕ್ಕೆ, ಆ ಚುಮು ಚುಮು ಗಾಳಿಯ ಚುಂಬನಕ್ಕೆ. ಇದೇ ನಮ್ಮಿಬ್ಬರಿಗೂ ರಸದೌತಣ ಹಾಗೂ ಮರುಹುಟ್ಟಿನ ಆಶಾಕಿರಣ.