Author: ನಮ್ರತಾ ಶೆಟ್ಟಿ

  • ರಂಗು

    ಬಹು ದಿನಗಳಿಂದ ಮುಚ್ಚಿದ್ದ ಹೂವಿನ ಅಂಗಡಿ ಮತ್ತೆ ತೆರೆದಿತ್ತು
    ಕಟ್ಟುತ್ತಿದ್ದಳು ಬಣ್ಣ ಬಣ್ಣದ ಹೂಗಳನ್ನು
    ದೇವರನ್ನೊಪ್ಪಿಸಲು?? ಗ್ರಾಹಕರನ್ನು ಮೆಚ್ಚಿಸಲು??
    ಬಿಡಿ ಹೂವುಗಳು ಜೋಡಿಯಾಗಿ ರಂಗೇರಿತ್ತು.. ಮಾಲೆಯಾಗಿತ್ತು..

    ಹೂವಿನ ಬಣ್ಣದ ಛಾಯೆ ಅವಳ ಕಣ್ಣುಗಳಲ್ಲಿ ಎಳ್ಳಷ್ಟೂ
    ಇರಲಿಲ್ಲ, ಆದರೂ ಮೊಗ್ಗು ಬಿರಿಯುವ ಮುನ್ನ,
    ಕೊರಗು ಕರಗುವ ಮುನ್ನ, ರಂಗೇರಿತ್ತು.. ಮಾಲೆಯಾಗಿತ್ತು…

  • ಮಂಜಿನ ಮುತ್ತು

    ಮುಂಜಾವಿನ ಮಂಜು ಚಿಗುರಲೆಗೆ ಮುತ್ತಿಕ್ಕುವಾಗ, ಎಳೆ
    ಸೂರ್ಯನ ಮೇಲೆ ಮುನಿಸಾಗಿರಲೂಬಹುದೇ??

    ನೆತ್ತಿಯ ನೇಸರನ ಶಕ್ತಿಯ ಹೀರಿ ನಸುನಗುತ್ತ ಬೆಳೆದ
    ಗಿಡಮರಬಳ್ಳಿಯು, ರವಿ ಜಾರಿ ಶಶಿ ಏರಲು ಕುಗ್ಗಿ-ಕೊರಗಿರಲೂಬಹುದೇ??

    ಬೆಳ್ಳಿ ಬೆಳಕಲ್ಲಿ ಮುಗಿಲ ತೊಟ್ಟಿಲಲ್ಲಿ ಹಸಿರೆಲೆಯು ಮೊಗ್ಗಿಗೆ
    ಲಾಲಿ ಹಾಡುತ್ತಿರಲು, ಇಬ್ಬನಿಯ ತಬ್ಬು ನಿದ್ದೆಗೆಡಿಸಿರಲೂಬಹುದೇ??

    ಮುಂಜಾವಿನ ಮಂಜು ಚಿಗುರಲೆಗೆ ಮುತ್ತಿಕ್ಕುವಾಗ,
    ಎಳೆ ಸೂರ್ಯನ ಮೇಲೆ ಮುನಿಸಾಗಿರಲೂಬಹುದೇ??

  • ಕಾತುರ

    ನಲ್ಲ ನಿನ್ನ ನೋಡ ಬಯಸಿ,
    ಮಲ್ಲೆ ಮುಡಿದು ಕಾದೆನಲ್ಲ.

    ನಾಚೋ ಕೆನ್ನೆಗೆ ಹೂವಿನೆಸಳು ರಾಚಿ
    ಕೇಳಿತು, ಹೊರಟೆ ನೀನು ಎಲ್ಲಿಗೆ?

    ತೋಳ ತೆಕ್ಕೆಯಲೆ ಸುತ್ತೂರ ತೋರಿಸುವ
    ಸರದಾರ ನನ್ನವನು. ಹೊರಡಬೇಕೇ ಇನ್ನೆಲ್ಲಿಗೆ?

    ಕಪ್ಪು ಮಚ್ಚೆಯ ಗಲ್ಲ ಕೇಳಿತೆನ್ನನು ಮೆಲ್ಲ
    ಹೊತ್ತು ಕಂತಿದೆಯಲ್ಲ, ಹೇಗೆ ಬರುವನು ನಲ್ಲ?

    ಬೆಳ್ಳಿ ಬಿತ್ತಿಹುದು ಬಾನದಾರಿಯಲೆಲ್ಲಾ,
    ಹೊತ್ತು ಹೊರಟಿಹನು ನೆನಪ ಬುತ್ತಿಯನೆಲ್ಲ.

    ನಿಂತ ಕಾಲು ನಿಲ್ಲುತ್ತಿಲ್ಲ, ಉಪ್ಪರಿಗೆಯ ದೀಪ ಕರಗಿತಲ್ಲ.
    ಎಷ್ಟು ಕಾಯುವೆ? ಒರಗು ನೀ ಮೆಲ್ಲ. ಎಂದು ಸೀರೆ ನೆರಿಗೆ ಗೊಣಗಿತಲ್ಲ.

    ಮನದ ಮಾಳಿಗೆ ಮರುಗಲಿಲ್ಲ, ಮುಂಜಾವಿನ
    ಮಂಜು ಕರಗಲಿಲ್ಲ, ಕಾತುರದ ಕಣ್ಣು ಮುಚ್ಚಲಿಲ್ಲ.

  • ಹೂದುಂಬಿ

    ದುಂಬಿಯೊಂದು ಮಕರಂದ ಹೀರಲೆಂದು ಹೂವಿನ ಮೇಲೆ ಕುಳಿತು,
    ಜೇನ ಹೀರಿ ಹಾರುವಾಗ ಅದರ ಕಾಲಿಗಂಟಿದ
    ಪರಾಗದ ಅರಿವು ದುಂಬಿಗೆ ಇದ್ದಿರಬಹುದೇ?

    ಅರಿವಾದರೂ ಪರಾಗಸ್ಪರ್ಶವಾದ ನಂತರ ದುಂಬಿ
    ನನ್ನಿಂದಲೇ ಹೂವಿನ ವಂಶೋದ್ಧಾರ ಎನ್ನುವ ಅಹಂ
    ಹುಟ್ಟಿಸಿಕೊಳ್ಳುವ ಅಧಿಕಾರ ಇದ್ದೀತೇ?

    ಇಲ್ಲಿ ಹೂವಿಗೆ ದುಂಬಿಯೋ? ದುಂಬಿಗೆ ಹೂವೋ?
    ಯಾರು ಯಾರಿಗೆ ಕೃತಜ್ಞರಾಗಿರಬೇಕು?

  • ನನ್ನಾಕೆ

    ಸಕಲೇಶಪುರ ರೈಲ್ವೆ ನಿಲ್ದಾಣ, ಮುಂಗಾರಿನ ಒಂದು ಮುಂಜಾವು, ಮತ್ಯಾವುದೋ ಒಂದು ಪ್ರೇಮ ಕಥೆಗೆ ಮುನ್ನುಡಿ ಬರೆಯಲು ಸಿದ್ಧವಾದಂತಿತ್ತು. ಸಮಯ ಬೆಳಗ್ಗೆ 8ರ ಆಸು ಪಾಸು. ರೈಲ್ವೆ ನಿಲ್ದಾಣದ ತುಂಬಾ ಜನಜಂಗುಳಿಯ ಗದ್ದಲ, ರೈಲಿನ ಸದ್ದು, ಹೊಗೆ ಇದರ ಮಧ್ಯೆ ತುಂತುರಿನ ಹಾಡು.

    ಟ್ರೈನಿನ ಸಮಯಕ್ಕಿಂತ ಮುಂಚಿತವಾಗಿ ಸ್ಟೇಷನ್ ತಲುಪಿದ ‘ಋತ್ವಿಕ್’ ನಿಲ್ದಾಣದ ಬೆಂಚಿನ ಮೇಲೆ ಹೇಗೋ ಜಾಗ ಹುಡುಕಿ ಕುಳಿತ. ಮೂಲತಃ ಬೆಂಗಳೂರಿನವನಾದ ಋತ್ವಿಕ್ ಒಬ್ಬ ಚಿತ್ರಕಲಾ ಕಲಾವಿದನಾಗಿದ್ದನು. ಯಾವುದೋ ಕೆಲಸದ ನಿಮಿತ್ತ ಸಕಲೇಶಪುರಕ್ಕೆ ಬಂದಿದ್ದ. ಅವನು ಕುಂತಲ್ಲಿ ನಿಂತಲ್ಲಿ ಬೇರೆ ಯಾವುದೋ ಬೇಡದ ಆಲೋಚನೆಗಳಿಗೆ ತನ್ನನ್ನು ಒಗ್ಗಿಸಿಕೊಳ್ಳುವ ಬದಲು ಸದಾ ಪ್ರಕೃತಿಯ ಪ್ರತಿ ಬದಲಾವಣೆ, ಸುತ್ತಮುತ್ತಲಿನ ನೈಜ ಚಿತ್ರಗಳನ್ನು ತನ್ನ ಮನದಾಳದ ಪಟದಲ್ಲಿ ಮೂಡಿಸಿ, ಮುದ್ರಿಸುವ ತವಕದಲ್ಲಿ ಇರುತ್ತಿದ್ದ. ಹಾಗಾಗಿ ಋತ್ವಿಕ್ ತನ್ನದೇ ಪ್ರಪಂಚದಲ್ಲಿ ಮುಳುಗಿ, ಮಳೆ, ಹೊಗೆ, ರೈಲು ಎಲ್ಲವನ್ನು ಕಣ್ತುಂಬಿಸಿಕೊಳ್ಳುತ್ತಿದ್ದ.

    ಹೀಗಿರುವಾಗ ಋತ್ವಿಕ್ ಪಕ್ಕದಲ್ಲಿದ್ದವರೊಬ್ಬರು ಎದ್ದು ಹೋದಾಗ ಆ ಜಾಗಕ್ಕೆ ಮೀನಾ ಬಂದು ಕುಳಿತಳು. ಮೀನಾ ಮೂಲತಃ ಸಕಲೇಶಪುರದವಳು MBA. ಮಾರ್ಕೆಟಿಂಗ್ ವ್ಯಾಸಂಗ ಮುಗಿಸಿದ್ದಳು. ಕೆಲಸದ ಇಂಟರ್ವ್ಯೂ ನಿಮಿತ್ತ ಬೆಂಗಳೂರಿಗೆ ಹೊರಟಿದ್ದಳು.

    ಮೀನಾಳ ಕಣ್ಣು ರೈಲ್ವೆ ನಿಲ್ದಾಣದಲ್ಲಿನ ಪುಟ್ಟ ಹುಡುಗನೊಬ್ಬ ತನ್ನ ಮಾತಿನ ಚಾಕಚಕ್ಯತೆಯಿಂದ ಚಹಾ ಮಾರುತ್ತಿದ್ದ ದೃಶ್ಯದಲ್ಲಿ ತಲ್ಲಿನವಾಗಿತ್ತು. Experience ಎನ್ನುವುದು MBA, marketing course, ಎಲ್ಲವನ್ನು ಮೀರಿಸಿದ್ದು ಎಂದು ಮನದೊಳಗೆ ಆಲೋಚಿಸುತ್ತಾ ಕುಳಿತಿರುವ ಸಮಯಕ್ಕೆ ಸರಿಯಾಗಿ ಆ ಕಡೆಯಿಂದ ಮೀನಾಳ ಗೆಳತಿ ಮೀನಾಗೆ ಫೋನಾಯಿಸಿದಳು.

    “ಹಲೋ.. ಮೀನಾ, ನಾನು ಆಫೀಸ್ ಗೆ ಹೊರಟೆ, ರೂಮ್ ಕೀ ಪಕ್ಕದ ಮನೆಯವರ ಹತ್ರ ಕೊಡ್ತೀನಿ. ಹೇಗೂ ನಿನ್ನ ಇಂಟರ್ವ್ಯೂ ಇರೋದು, ನಾಳೆ ತಾನೇ ಇವತ್ತು ನೀನು ರೂಮಲ್ಲೇ ರೆಸ್ಟ್ ಮಾಡು, ಸಂಜೆ ಸಿಕ್ತೀನಿ.”

    ಮೀನಾ ದುಃಖದ ದನಿಯಲ್ಲಿ…. “ಸುಮಾ.. ಇನ್ನೆಷ್ಟು ಇಂಟರ್ವ್ಯೂ ಅಟೆಂಡ್ ಮಾಡೋದೋ ಗೊತ್ತಿಲ್ಲ. ಆದಷ್ಟು ಬೇಗ ಅನಾರೋಗ್ಯದ ಅಪ್ಪನಿಗೆ ರೆಸ್ಟ್ ಕೊಟ್ಟು, ತಮ್ಮನ ಓದಿನ ಜವಾಬ್ದಾರಿ ತಗೊಳೋಣ ಅಂದ್ರೆ ಎಲ್ಲೂ ಕೆಲಸ ಸಿಕ್ತಿಲ್ಲ ಕಣೆ.”

    “ಹೇ come on ಮೀನಾ.. ಎಲ್ಲದಕ್ಕೂ ಟೈಮ್ ಬರಬೇಕು ಅಲ್ಲಿ ತನಕ ಪ್ರಯತ್ನ ಮಾಡು ಅಳ್ಬೇಡ ಈ ಸಲ ಪಕ್ಕಾ ಕೆಲಸ ಸಿಗುತ್ತೆ. ಸಂಜೆ ಬರ್ತಿಯಲ್ಲ. ಆಗ ಮಾತಾಡೋಣ. ಆಫೀಸ್ ಗೆ ಲೇಟ್ ಆಯ್ತು. ಬಾಯ್.” ಅಂತ ಸುಮ ಫೋನ್ ಇಟ್ಟಳು.

    ಮೀನಾ ದೀರ್ಘ ಉಸಿರು ಒಳ ತೆಗೆದುಕೊಂಡು, ಕಣ್ಣು ಒರೆಸಿಕೊಳ್ಳುತ್ತಾ ಫೋನ್ ನ ಬ್ಯಾಗಲ್ಲಿಟ್ಲು.

    ಪಕ್ಕದವರ ಫೋನ್ ಕಾನ್ವರ್ಸೇಷನ್ ಕೇಳೋ ಇಂಟರೆಸ್ಟ್ ಇಲ್ಲದಿದ್ದರೂ ತುಂಬಾ ಹತ್ತಿರ ಇದ್ದಿದ್ದರಿಂದ ಮೀನಾ ಮಾತು ಋತ್ವಿಕ್ ಕಿವಿಗೆ ಸಂಪೂರ್ಣವಾಗಿ ಬಿತ್ತು. ಅಲ್ಲಿ ತನಕ ಇನ್ನೊಂದು ದಿಕ್ಕು ನೋಡ್ತಾ ಇದ್ದ ಅವನ ಮುಖ ಸಮಾಧಾನ ಮಾಡೋ ಭಾವದಲ್ಲಿ ಮೀನಾ ಕಡೆ ತಿರುಗಿಸಿದ. ಆದರೆ ಅವಳ ಮುಖ ನೋಡಿದ ತಕ್ಷಣ ಋತ್ವಿಕ್ ಮುಖ ಅನುಕಂಪದ ಭಾವದಿಂದ ಸಂಪೂರ್ಣವಾಗಿ ಬದಲಾಗಿ ಆಶ್ಚರ್ಯ, ಸಂತೋಷ, ಗೊಂದಲ ಮಿಶ್ರಿತ ಭಾವಕ್ಕೆ ತಿರುಗಿತು.

    ಇದು ಹೇಗೆ ಸಾಧ್ಯ? ಇದು ನಿಜಾನಾ? ಇದು ಭ್ರಮೆನಾ? ಹೀಗೆ ಸಾವಿರಾರು ಪ್ರಶ್ನೆ ಋತ್ವಿಕ್ ನ ಒಮ್ಮೆಲೇ ಸಾಗರದ ಅಲೆಗಳಂತೆ ಬಂದು ಅಪ್ಪಳಿಸಿತು.

    ಅಪರಿಚಿತಳೊಟ್ಟಿಗೆ ಹೇಗೆ ಸಂಭಾಷಣೆ ಶುರು ಮಾಡುವುದು ಎನ್ನುವ ಸಣ್ಣ ಪ್ರಶ್ನೆಗೆ ಕೂಡ ಅವನೊಳಗಿನ ಭಾವೋದ್ವೇಗ ಅವಕಾಶ ಕೊಡಲೇ ಇಲ್ಲ ತಕ್ಷಣವೇ,

    “ನೀವು ಸಕಲೇಶಪುರದವರಾ? ನನ್ನನ್ನು ಹಿಂದೆಂದಾದರೂ ಭೇಟಿಯಾಗಿದ್ದೀರಾ? ನನ್ನ ಪರಿಚಯ ನಿಮಗಿದೆಯಾ? ನೋಡಿದ ನೆನಪು??”…

    ಆ ಕಡೆಯಿಂದ ಮೀನಾ ಯಾವ ಪ್ರಶ್ನೆಗೂ ಉತ್ತರಿಸದೆ, ಇವನ್ಯಾರು ಅಪರಿಚಿತ ಈ ತರಹ ನನ್ನನ್ನು ಯಾಕೆ ಪ್ರಶ್ನೆ ಸುತ್ತಿರುವನು ಎನ್ನುವ ಭಾವದಲ್ಲಿ ನೋಡುತ್ತಾ, ಬಹುಶಃ ನಾನು ಫೋನ್ನಲ್ಲಿ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡು ಹುಡುಗಿ ಬೇಜಾರಾಗಿದ್ದಾಳೆ, ಇದೇ ಸಮಯ ಬಳಸಿಕೊಂಡು ಹೀರೊ ಆಗೋ ಪ್ರಯತ್ನ ಮಾಡುತ್ತಿರಬಹುದು ಅಂತ ಅವಳ ಬುದ್ಧಿ ಹೇಳಿದ್ರೂ, ಮನಸ್ಸು ಅವನ ಕಣ್ಣಿಗೆ ಕಣ್ಣು ಸೇರಿಸುವ ತುಡಿತದಲ್ಲಿತ್ತು.

    “ದಯವಿಟ್ಟು ಹೇಳಿ ನೀವು ಈ ಹಿಂದೆ ನನ್ನನ್ನ ಎಲ್ಲಾದರೂ ನೋಡಿದ ನೆನಪು ಇದೆಯಾ. ನನಗಂತೂ ಇಲ್ಲಿಯವರೆಗೆ ನಿಮ್ಮನ್ನು ನೇರವಾಗಿ ಭೇಟಿಯಾದ ನೆನಪಿಲ್ಲ”. ಎಂದು ಋತ್ವಿಕ್ ಉದ್ವೇಗದಿಂದ ನುಡಿದ.

    ಮನಸ್ಸಿನ ಮಾತುಗಳನ್ನು ಬಚ್ಚಿಟ್ಟುಕೊಂಡು ಬುದ್ಧಿಯ ಮಾತಿನಂತೆ ಮೀನಾ ಸಿಟ್ಟಿನ ದನಿಯಿಂದ “ನೀವು ಯಾರು ಅಂತಾನೇ ಗೊತ್ತಿಲ್ಲ ನನಗೆ. ನಿಮ್ಮ ಪರಿಚಯ ಇಲ್ಲ. please don’t disturb me” ಎಂದು ಮನಸ್ಸಿಲ್ಲದ ಮನಸ್ಸಿಂದ ಮುಖ ತಿರುಗಿಸಿದಳು.

    ಅಯ್ಯೋ ನನ್ನ ಪರಿಚಯನೇ ಹೇಳಿಲ್ವಲ್ಲ! ಅದಕ್ಕಿಂತ ಮುಖ್ಯವಾದ ವಿಚಾರ ಹೇಳಿದೆ ಇವಳನ್ನು ಪೀಡಿಸ್ತಿದೀನಲ್ಲ… ನನ್ ಬುದ್ದಿಗಿಷ್ಟು ಅಂದುಕೊಳ್ಳುತ್ತಾ..

    “Hi I’m ritvik. ನಾನೊಬ್ಬ ಚಿತ್ರಕಲಾ ಕಲಾವಿದ. ಚಿತ್ರ ಬಿಡಿಸುವುದು ನನ್ನ ಹವ್ಯಾಸ, ಪ್ರೊಫೆಶನ್ ಕೂಡ. ಎರಡು ವರ್ಷಗಳ ಹಿಂದೆ ಚಿತ್ರಕಲಾ ಪರಿಷತ್ತಿನಲ್ಲಿ ಒಂದು ಚಿತ್ರಕಲಾ ಸ್ಪರ್ಧೆ ಇತ್ತು. ಅಂದಿನ ಸ್ಪರ್ಧೆಯ ವಿಷಯ “ನನ್ನಾಕೆ .” ಅಂದು ನಾನು ನನ್ನ ಕಲ್ಪನೆಯ, ಕನಸಿನ ನನ್ನಾಕೆಯ ಚಿತ್ರ ಬಿಡಿಸಿದ್ದೆ. ಅದು ಅಂದಿನ ಸ್ಪರ್ಧೆಯ ಪ್ರಶಸ್ತಿಗೆ ಮತ್ತು ಪ್ರಶಂಸೆಗೆ ಭಾಜೀನವಾಗಿತ್ತು. ಅಂದು ಬಿಡಿಸಿದ ಆ ಚಿತ್ರ ಇಂದು ಕೂಡ ನನ್ನ ಕಣ್ಣು ಕಟ್ಟಿದಂತಿದೆ. ಅದೇ ಕಣ್ಣು, ಅದೇ ಮೂಗು, ಅದೇ ನಗು.. ಹೌದು ಆ ನನ್ನ ಕಲ್ಪನಾ ಚಿತ್ರ ನಿಮ್ಮದೇ ಪಡಿಯಚ್ಚಿನಂತಿದೆ. ಹಾಗಾಗಿ ಕೇಳುತ್ತಿದ್ದೇನೆ ಈ ಹಿಂದೆ ನಿಮ್ಮ ನಮ್ಮ ಭೇಟಿಯಾಗಿತ್ತಾ?

    ಇವನು ಹೇಳುವ ಇದ್ಯಾವ ವಿಷಯವನ್ನ ನಂಬಲಾಗದ ಮೀನಾ.. “Please.. I really don’t know about you. please don’t disturb me.”

    ಆ ಕ್ಷಣಕ್ಕೆ ಏನು ತೋಚದ ಋತ್ವಿಕ್ “I’m sorry ನಿಮಗೆ hurt ಮಾಡಿದ್ರೆ”.

    “ಹಾಗೆ, sorry once again. ಯಾಕೆಂದ್ರೆ ಮಿಸ್ ಆಗಿ ನಿಮ್ Phone conversation ನನ್ನ ಕಿವಿಗ್ ಬಿತ್ತು. ಅದಕ್ಕೆ ನಾನು ಒಂದು ಮಾತು ಹೇಳ್ತೀನಿ, ನೀವು ಯಾವತ್ತು ಲೈಫಲ್ಲಿ ಹೋಪ್ಸ್ ಕಳ್ಕೋಬೇಡಿ. ನಿಮ್ಮ ಉದ್ದೇಶ, ಮಾಡಬೇಕಾದ ಪ್ರಯತ್ನದ ದಿಕ್ಕು ಸರಿ ಇದ್ರೆ ಖಂಡಿತ ನೀವು ಅನ್ಕೊಂಡಿರೋದನ್ನ ಸಾಧಿಸ್ತೀರಾ. All the best”.

    ಇಷ್ಟು ಹೇಳಿ ಆಗಷ್ಟೇ ಬಂದು ನಿಂತ ರೈಲಿನಲ್ಲಿ ತನ್ನ ಬೋಗಿಯನ್ನೇರಿ ಕುಳಿತ.

    ಈ ಎಲ್ಲಾ ಮಾತುಗಳ ಗುಂಗನ್ನು ತಲೆಯಲ್ಲಿಟ್ಟುಕೊಂಡೇ ಮೀನ ಕೂಡ ತನ್ನ ಬೋಗಿ ಏರಿದಳು. ತನ್ನ ಸೀಟ್ನಲ್ಲಿ ಕುಳಿತ ಮೇಲೂ ಕೂಡ ಋತ್ವಿಕ್ ಆಡಿದ ಮಾತುಗಳೇ ಮತ್ತೆ ಮತ್ತೆ ಪ್ರತಿಧ್ವನಿಸುತ್ತಿತ್ತು. ಅವರು ಆಡಿದ ಮಾತು ಸತ್ಯ ಇರಬಹುದಾ? ಹಾಗಾಗಲು ಸಾಧ್ಯನಾ? ಎಂದೆಲ್ಲ ಯೋಚಿಸುತ್ತಾ ಫೋನ್ ಕೈಗೆತ್ತಿಕೊಂಡು Instagram ನೋಡಲು ಆರಂಭಿಸಿದಳು. ಆಗಲೂ ಅವಳೊಳಗಿನ ಗೊಂದಲ ಕಡಿಮೆಯಾಗಿರಲಿಲ್ಲ. ತಕ್ಷಣ ಅವಳಿಗೊಂದು ಯೋಚನೆ ಬಂತು. Instagram ನಲ್ಲಿ Rithvik artist ಅಂತ ಸರ್ಚ್ ಮಾಡಿದ್ಲು. ಆಗ ಅವಳಿಗೆ ಋತ್ವಿಕ್ ಅಕೌಂಟ್ ಸಿಕ್ಕಿ, ಓಪನ್ ಮಾಡಿದ್ಲು ಅವನ ಪೇಜಿನಲ್ಲಿನ ಒಂದೊಂದು ಅವನು ಬಿಡಿಸಿದ ಚಿತ್ರವನ್ನು ನೋಡಿ ಮೂಕ ವಿಸ್ಮಿತಳಾದಳು. ಛೇ!! ಎಷ್ಟು ನೈಜವಾಗಿ ಚಿತ್ರ ಬಿಡಿಸಿದ್ದಾನೆ! ಇಷ್ಟು ದೊಡ್ಡ ಆರ್ಟಿಸ್ಟ್ ಅನ್ನು ನಾನು ತಪ್ಪು ಗ್ರಹಿಕೆ ಮಾಡಿಕೊಂಡೆ ಸರಿಯಾಗಿ ಮಾತನಾಡಿಸಿದೆ ದುರಹಂಕಾರ ಮೆರೆದೆ ಎಂದು ಮನದಲ್ಲೇ ಮರುಗಿದಳು.

    Scroll ಮಾಡುತ್ತಿರುವಾಗ ಆ ಒಂದು ಚಿತ್ರ ನೋಡಿದ ಕೂಡಲೇ ಮೀನಾ ಬೆರಳು ಸ್ತಬ್ಧವಾಯಿತು. ಎದೆ ಬಡಿತ ಜೋರಾಯ್ತು. ಕಣ್ಣುಗಳಲ್ಲಿ ಆಶ್ಚರ್ಯದ ಭಾವ ಹೊಮ್ಮಿತು. ಹೇಗೆ ಸಾಧ್ಯ ಈ ಚಿತ್ರ?? ಹೆಚ್ಚು ಕಮ್ಮಿ ನನ್ನನ್ನೇ ಹೋಲುತ್ತಿದೆಯಲ್ಲ!! ತಕ್ಷಣ ದಿನಾಂಕ ಪರಿಶೀಲನೆ ಮಾಡಿದಳು. ಅದು ಎರಡು ವರ್ಷದ ಹಿಂದಿನ ಚಿತ್ರವಾಗಿತ್ತು. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ನನ್ನ ಚಿತ್ರವನ್ನು ನೋಡಿ ಬಿಡಿಸಿರುವ ಸಾಧ್ಯತೆಯೂ ಇಲ್ಲ. ಏಕೆಂದರೆ ನಾನು ಸೋಶಿಯಲ್ ಮೀಡಿಯಾ ಬಳಕೆ ಮಾಡಲು ಶುರು ಮಾಡಿ ಹೆಚ್ಚು ಕಮ್ಮಿ ಆರು ತಿಂಗಳಾಗಿರಬಹುದಷ್ಟೇ. ಹಾಗಂತ ನಾನೆಂದೂ ಇವರನ್ನ ಭೇಟಿಯಾದ ನೆನಪೂ ಇಲ್ಲ. ಹೇಗಾದರೂ ಮಾಡಿ ಅವರನ್ನು ಇನ್ನೊಮ್ಮೆ ಭೇಟಿ ಆಗಬೇಕಲ್ಲ ಹೇಗೆ ಸಾಧ್ಯ? ಎಂದು ಆಲೋಚಿಸುತ್ತಾ ಕುಳಿತಳು.

    ಅದೇ ಟ್ರೈನ್ ಪಕ್ಕದ ಬೋಗಿಯಲ್ಲಿ ಕುಳಿತಿದ್ದ ಋತ್ವಿಕ್, ಮೀನಾ ಳದ್ದೇ ಕನಸು ಕಾಣುತ್ತಿದ್ದ. ಛೇ! ನನ್ನ ಅನುಭವವನ್ನು ಅವಳಲ್ಲಿ ಸರಿಯಾಗಿ ತಲುಪಿಸಲು ಆಗಲೇ ಇಲ್ವಲ್ಲ. ನನ್ನ ಕಲ್ಪನೆಯ ನನ್ನಾಕೆಯ ಚಿತ್ರ ಇಷ್ಟೊಂದು ಹೋಲಿಕೆಗೆ ಹೇಗೆ ಸಾಧ್ಯ? ಇವಳೇ ನನ್ನ ಭವಿಷ್ಯದ ನನ್ನಾಕೆ ಆಗಿರಬಹುದೇ? ಎಂದು ಯೋಚಿಸುತ್ತಾ ಪ್ರಯಾಣ ಮುಂದುವರೆದಿಸಿದ.

    ಕಿಟಕಿಯ ಹೊರಗಡೆ ಮುಂಗಾರು ಮಳೆ, ಹೊಲಗದ್ದೆಯಲ್ಲಿ ಆಗಷ್ಟೇ ಬಿತ್ತುತ್ತಿದ್ದ ಬಿತ್ತನೆ, ಇವೆಲ್ಲವೂ ಬೇರೆ ಬೇರೆ ಬೋಗಿಯಲ್ಲಿ ಕುಳಿತು ಒಂದೇ ಲಹರಿಯಲ್ಲಿ ಪ್ರಯಾಣ ಮಾಡುತ್ತಿರುವ ಋತ್ವಿಕ್, ಮೀನಾಳ ಭಾವ ಮೇಳಕ್ಕೆ ಸಾಥ್ ನೀಡಿತು. ಇಬ್ಬರೂ ಭಾವ ಲೋಕದ ಪಯಣದೊಂದಿಗೆ ಸ್ಟೇಷನ್ನಲ್ಲಿ ಇಳಿದರು. ಬೋಗಿಯಿಂದ ಇಳಿದೊಡನೆ ಮತ್ತೆ ಒಬ್ಬರನ್ನೊಬ್ಬರು ಎದುರಾದರು. ಈ ಬಾರಿ ಇಬ್ಬರಿಗೂ ಇದು ಆಕಸ್ಮಿಕವಲ್ಲ ಎನ್ನುವ ಭಾವ ಗಟ್ಟಿಯಾಗಿತ್ತು. ರೈಲು, ಜನಜುಂಗುಳಿ ಎಲ್ಲದರ ಸದ್ದು ಕ್ಷಣಕಾಲ ಸ್ಥಗಿತವಾಗಿತ್ತು. ಇಬ್ಬರು ಕಣ್ಣುಗಳಲ್ಲೇ ಮಾತಾಡಿ, ಅವರೆಲ್ಲಾ ಪ್ರಶ್ನೆಗಳಿಗೆ ಕಣ್ಣುಗಳಲ್ಲೇ ಉತ್ತರಿಸಿಕೊಂಡರು.

  • ಭಾವ ನೀ…

    ಎಂದೂ ಬಿಚ್ಚಿಡದ
    ಮನದ ಹುಚ್ಚು ಕಥೆಯ
    ಮನಸಾರೆ ಬಿಗಿದಪ್ಪಿ ಆಲಿಸಿರುವೆ

    ಬಿಚ್ಚಿಟ್ಟ ಮಾತಿಗೆ
    ಬೆಚ್ಚಗಿನ ಭಾವ ಹೊದಿಸಿ
    ಕಟ್ಟಿಟ್ಟ ಉಸಿರಿಗೆ ಭರವಸೆಯ ಸೆಲೆಯ ಕೊಡಿಸಿರುವೆ

    ಹಚ್ಚದೆ ಉಳಿದಿರೋ
    ಹಣತೆಯ ಬತ್ತಿಗೆ
    ಹೊಳೆಯುವ ಹೊಳಪಿನ ಬೆಳಕ ಹರಿಸಿರುವೆ

    ಹೆಚ್ಚೇನೂ ಹೇಳದೆ
    ಕಣ್ಣ ಭಾಷೆಯಲೆ ಅರಿತು
    ನನ್ನೆದೆಯ ಆಲಂಗಿಸಿ ಹಗುರಾಗಿಸಿರುವೆ.

  • ಅಪರಿಚಿತ

    “ನೀನು ಅತಿಲೋಕ ಸುಂದರಿಯಲ್ಲ! ಹೊರಗೆ ಹೊರಟಾಗ ಶಾಲು ಸರಿಯಾಗಿ ಮೈ ತುಂಬಾ ಹೊದ್ದು ಹೋಗು.”

    “ತಲೆಯೆತ್ತಿ ನಡಿಬೇಡ; ಕಣ್ಣು ನೆಲ ಬಿಟ್ಟು ಮೇಲೆ ನೋಡಿದ್ರೆ ನಾಳೆಯಿಂದ ಶಾಲೆಯ ಮೆಟ್ಟಿಲಲ್ಲ ಮನೆಯ ಹೊಸಲು ಕೂಡ ದಾಟೋಕಾಗಲ್ಲ ನೀನು ನೆನಪಿಟ್ಟುಕೋ.”

    “ಮನೆಗೆ ಯಾರಾದ್ರೂ ಬಂದ್ರೆ ಅಮ್ಮ ಅವರಿಗೆ ಊಟ ಬಡಸ್ತಾರೆ. ನೀನು ಕೋಣೆಲೆ ಇರು.”

    ಹೀಗೆ ಅಪ್ಪ ಅಣ್ಣನ ಗೀತೋಪದೇಶ ನನ್ನ ಕಿವಿಲಿ ನಿತ್ಯವೂ ಸುಪ್ರಭಾತದ ಹಾಗೆ ಮೊಳಗ್ತಾ ಇರೋವಾಗ, ನನ್ನ ಇವತ್ತಿನ ಬದುಕನ್ನ ಹೇಗೆ ಒಪ್ಪಿಕೊಳ್ಳಲಿ? ತಲೆ ಎತ್ತಲಾರೆ, ಕಣ್ಣು ಸೇರಿಸಲಾರೆ, ಸೆರಗು ಸರಿಸಲಾರೆ, ಅಪರಿಚಿತನೊಟ್ಟಿಗಿನ ಏಕಾಂತ ಸಹಿಸಲಾರೆ. ಹೌದು! ಅಣ್ಣಂದಿರು ಹೆಕ್ಕಿ ಆರಿಸಿ ತಂದ ಈ ಗಂಡಿನಲ್ಲಿ ನನಗೆ ಅಪರಿಚಿತನಿಗಿಂತ ಮೀರಿದ ಭಾವ ಹೇಗೆ ತಾನೆ ಮೂಡಿಯಾತು?

    ನಿನ್ನೆ ನನ್ನ ಮದುವೆಯ ಸಂಭ್ರಮ. ಅಲ್ಲಿ ನನಗೆ ಅರ್ಥವಾಗದ ಮೊದಲ ವಿಷಯ ಸಂಭ್ರಮ ಯಾರದ್ದೆಂದು? ಮಗಳ ಜವಾಬ್ದಾರಿ ಮುಗೀತು ಅಂತ ನನ್ನ ತವರಿನವರ ಸಂಭ್ರಮವೋ? ಕುರಿ ಹಳ್ಳಕ್ಕೆ ಬಿತ್ತು ಎಂದು ಈ ಮನೆಯವರ ಸಂಭ್ರಮವೋ? ಅಥವಾ ಊಟವೇ ಕಂಡಿಲ್ಲವೇನೋ ಅನ್ನೋವಷ್ಟು ಮಟ್ಟಿಗೆ ನೂಕು ನುಗ್ಗಲಿನಲ್ಲಿ ಉಂಡು ತೇಗಿಹೋದ ನೆಂಟರ ಸಂಭ್ರಮವೋ? ಅರಿಯಲಿಲ್ಲ. ನನಗೆ ಅರ್ಥವಾದದ್ದು ಒಂದೇ ಅದು ನನ್ನ ಸಂಭ್ರಮದ ಸಮಾರಂಭವಂತೂ ಅಲ್ಲ. ಮತ್ತೊಂದು ಸಂಕೋಲೆಗೆ ಆಹ್ವಾನವಷ್ಟೇ.

    ಆಡುವ ವಯಸ್ಸಿನಲ್ಲಿ ನನ್ನ ಗೆಳೆಯರೊಟ್ಟಿಗೆ ಆಡಲಿಲ್ಲ. ಓದುವ ಬಹುದೊಡ್ಡ ಕನಸಿದ್ದರು ಮುಂದುವರಿಯಲು ಬಿಡಲಿಲ್ಲ. ಸಹಜವಾದ ಬದುಕು ಕಾಣಲೇ ಇಲ್ಲ. ಸಾಕಿದ ನಾಯಿಯನ್ನಾದರೂ ದಿನಕ್ಕೊಮ್ಮೆ ಕಾಲಾಡಿ ಬರಲು ಬಿಡುತ್ತಿದ್ದರು. ಆದರೆ ನಾನು ಕೋಟೆಯ ಕತ್ತಲಿನ ಕೋಣೆಗೆ ಒಡತಿಯಾದೆ. ಬೆಳಕೇ ಕಾಣದ ಈ ಕಣ್ಣುಗಳು ಒಮ್ಮೆಲೆ ಮಿಂಚಿನ ತೀಕ್ಷ್ಣತೆಗೆ ಹೇಗೆ ಒಗ್ಗಿಯಾತು?

    ಬಣ್ಣ ಬೇಕಿತ್ತು. ನನಗೆ ಬಣ್ಣ ಬೇಕಿತ್ತು. ಬಟ್ಟೆಯಲ್ಲಿ ಬಣ್ಣ ಬೇಕಿತ್ತು. ಬದುಕಿನಲ್ಲಿ ಬಣ್ಣ ಬೇಕಿತ್ತು. ಆದರೆ ಕಂಡಿದ್ದು ಬರ. ಪ್ರೀತಿಯ ಬರ. ನಗುವಿನ ಬರ. ಬಾಲ್ಯದ ಸವಿನೆನಪುಗಳ ಬರ. ಅವಳ್ಯಾರೋ ಕೊನೆಯ ಮನೆಯ ಹುಡುಗಿ ಯಾವುದೋ ಹುಡುಗನೊಟ್ಟಿಗೆ ಓಡಿದ್ಲು. ಆ ಕಾರಣಕ್ಕೆ ಇಲ್ಲಿ ನನ್ನ ಓದು ನಿಂತಿತ್ತು. ಅವಳ್ಯಾರೋ ಓಡಿದ್ರೆ ನನಗ್ಯಾಕೆ ಶಿಕ್ಷೆ? ಅಷ್ಟಕ್ಕೂ ಸಿಗಬೇಕಾದ ಪ್ರೀತಿ ಅವಳ ಮನೆಯಲ್ಲಿ ಸಿಕ್ಕಿದ್ರೆ ತನ್ನೆಲ್ಲಾ ತಂತುಗಳನ್ನು ಕಳಚಿ ಯಾಕೆ ಓಡಿ ಹೋಗ್ತಾ ಇದ್ಲು?

    ಪ್ರತಿ ಹೆಜ್ಜೆಯಲ್ಲೂ ಕೊರತೆಯನ್ನೇ ಎತ್ತಾಡುವವರ ಮಾತಿನ ಚಾಟಿಯ ಭಯ ಇಡೀ ದೇಹವನ್ನೇ ಆವರಿಸಿದೆ. ಭಯವೇ ತುಂಬಿರುವ ಈ ಬದುಕಲ್ಲಿ ಈಗ ಭಾವಕ್ಕೆಲ್ಲಿದೆ ಜಾಗ? ಪ್ರತಿ ಬಾರಿಯೂ ಭಯ ನನ್ನ ಕಣ್ಣುಗಳನ್ನು ಮುಚ್ಚಿಸುತ್ತಲೇ ಬಂತು. ಈಗ ಬದುಕಲ್ಲಿ ಹಿಂತಿರುಗಿ ನೋಡಿದರೆ ನನ್ನ ನೆನಪಿನ ಪಟದಲ್ಲಿ ಉಳಿದಿರುವುದು ಕೇವಲ ತಾಯಿಯ ಉದರದಿಂದಾಚೆ ಬಂದಾಕ್ಷಣ ನಾ ಕಂಡ ನನ್ನಮ್ಮನ ನಗುವಿನ ಮುಖದ ನೆನಪಷ್ಟೇ. ಅದನ್ನ ಮೀರಿದ ಪ್ರಪಂಚವನ್ನು ನಾನು ಒಪ್ಪಲಾರೆ. ಅಪ್ಪಿಕೊಳ್ಳಲಾರೆ. ಹಾಗಾಗಿ ಕೆಣಕಬೇಡಿ ನನ್ನನ್ನು.

    ಹೌದು ಹೆಣ್ಣು ಪ್ರಕೃತಿ. ಹೆಣ್ಣು ಭೂಮಿ. ಆದರೆ ಪ್ರೀತಿಯ ಬಿತ್ತಿ, ಭಾವವ ಬೆಳೆಸಬೇಕಲ್ವಾ? ಅದನ್ನ ಬಿಟ್ಟು ಪ್ರತಿ ಬಾರಿ ಮೋಟಕುಗೊಳಸಿ, ಬೆಳೆಯದಂತೆ ಮಾಡಿ, ಬರಡಾಗಿಸಿದ್ರಿ. ಈಗ ಬೇಡಿದ್ರೆ? ಈ ಬಂಜರು ಭೂಮಿಯಿಂದ ನಾನೇನು ಕೊಡಲಿ? ಎಲ್ಲವೂ ಮಡುಗಟ್ಟಿದ ಮೇಲೆ ಹರಿವು ಅಸಾಧ್ಯ. ಒಗ್ಗಿಕೊಳ್ಳಲಾರೆ. ಈ ಹೊಸ ಬದುಕ ಹೆಣೆಯಲಾರೆ.

    ಜೇಡ ಬಲೆ ಕಟ್ಟಿದೆ. ಬಲವಂತಕ್ಕೆ ಬೇಟೆ ಬಲಿಯಾಗಲಿದೆ. ಸಾಧ್ಯವಿಲ್ಲ! ಇದು ನನ್ನಿಂದ ಖಂಡಿತ ಸಾಧ್ಯವಿಲ್ಲ. ನಾನು ಮೂಕಳಾಗುತ್ತೇನೆ. ಬುದ್ಧಿಗೆ ಮಂಪರು ಬರೆಸುತ್ತೇನೆ. ಬೇಡವಾದ ಬಾಹುಗಳಲ್ಲಿ ಸಿಲುಕುವ ಬದಲು ಹುಚ್ಚಿ, ಮೂಕಿ ಎಂಬ ಪಟ್ಟವೇ ಲೇಸು. ಇವರಾದರೂ ಎಷ್ಟು ದಿನ ಈ ಮೂಕಿಯನ್ನು ಸಹಿಸಿಯಾರು? ಹುಚ್ಚಿಯ ಹೊತ್ತು ನಡೆದಾರು? ಕಲ್ಲಾಗಿರುವ ಭಗವಂತನೇ! ಹಡೆದವ್ವನ ಹೊಟ್ಟೆಗೆ ಈ ಹೆಪ್ಪುಗಟ್ಟಿದ ಜೀವವ ಹೇಗಾದರೂ ಮತ್ತೆ ಮರಳಿಸು. ಹಾಲು ತುಪ್ಪ ಸಿಗದಿದ್ದರೂ ಬೆಚ್ಚಗಿನ ಭಾವದಲ್ಲಿ ಮುದುಡಿ ಮಲಗುವೆ.

    ಸ್ವಾತಂತ್ರ್ಯವೇ ಇಲ್ಲದ, ಕಟ್ಟುನಿಟ್ಟಿನ ಕುರುಡು ನಂಬಿಕೆಗಳ ನಡುವಿನ ಕುಟುಂಬದಲ್ಲಿ ಬೆಳೆದ ಒಂದು ಮುಗ್ಧ ಹೆಣ್ಣಿನ ಕಾಲ್ಪನಿಕ ಕಥೆ.

  • ತೀರದ ದಾಹ…

    ನಾವಿಬ್ಬರು ಒಟ್ಟಾಗಿ ತೀರದಲ್ಲಿ ಕುಳಿತು ಸಾಕ್ಷಿಯಾಗಿದ್ದ ಸಾವಿರಾರು ಅಲೆಗಳ ಬಡಿತಕ್ಕಿಂದು ಒಂಟಿ ಪ್ರೇಕ್ಷಕನ ಹಾಡು.

    ಸಾಗರದ ಅಲೆಯಲಿ
    ನಾ ತೇಲುವ ಮನಸಾಗಿದೆ.
    ಕಡಲಿನ ತೆರೆಯೊಳು ನನ್ನಯ ಭಾವವು ಒಪ್ಪಾಯಿತೇ…

    ಮಗುವಾದೆನೇನೋ ನಾನಂತೂ ಚೂರು
    ಉಕ್ಕಿತೇನೋ ನನ್ನೆದೆಯು ಪೂರಾ
    ಕಟ್ಟಿತೇ ಪ್ರೀತಿಯ ಹಾಡು
    ನನ್ನುಸಿರ ನೆನಪಿನ ಗೂಡು
    ಚಿಪ್ಪೊಳಗಿನ ಮುತ್ತಿನ ಹಾರ…

    ತೀರದಲಿ ಕಟ್ಟಿಹ ಮರಳಿನ ದಿಬ್ಬದಾಟವೂ ಇನ್ನೆಲ್ಲಿದೆ
    ಏರಿಳಿತದಲೆಗಳ ಬಡಿತದ ಸೆಲೆಗಳೆಲ್ಲವೂ ಅಳಿಸ್ಹೋಗಿದೆ.
    ಪ್ರತಿ ಬಾರಿಯ ಸಂದೇಶವು, ಕಾಯುತ್ತಿರೋ ಈ ಪ್ರೇಮಿಗೆ
    ಸುಳಿವಿಲ್ಲದೆ ಸೆರೆಯಾಗಿಹ, ಏಕಾಂಗಿಯ ಈ ಹಾಡಿಗೆ
    ಜೊತೆಯಾಗೀತೇನೋ ಕಡಲಂತರಾಳ
    ಸಂದೀತೇನೋ ಭಾವಾಂತರಾಳ…

  • ಕಾಂತಾರ ನನ್ನ ಪದದಲ್ಲಿ

    ಕಾಂತಾರ ಕಂಡೆ. ಕಣ್ಣಿಗಷ್ಟೇ ಅಲ್ಲ ಮನಸ್ಸಿಗೂ ಹಬ್ಬವಾಯ್ತು. ಕಂಡ ಗುಂಗಿನ್ನೂ ಇಳಿದಿಲ್ಲ. ಇಳಿಯುವ ಛಾಯೆಯೂ ಇಲ್ಲ. ಇದರ ಮಧ್ಯದಲ್ಲಿ 4 ಸಾಲು ಬರೆಯದಿರಲು ಮನಸ್ಸು ಒಪ್ಪಿಲ

    ಕಳೆಗುಂದಿದ ಬದುಕಿಗೆ,
    ಕಲೆ ಕಟ್ಟಿದ ಕಲ್ಲಿಗಾಗಿ
    ಬೆಲೆ ತೆತ್ತ ಮಣ್ಣನು,
    ಮರಳಿ ಕೇಳಿದ ಮರುಳನ

    ಮೆಟ್ಟಿನಿಂತ ದೈವದ ಮಹಿಮೆ ಅರಿಯದ ಕುಡಿಯು,
    ಗಡಿ ಪಾಲಕನ – ಪಡಿ ರಕ್ಷಕನ ಶಕ್ತಿಯ ಮೀರಿದ,
    ಯುಕ್ತಿ ಪ್ರದರ್ಶನದ ಭ್ರಮೆಯಲಿ,
    ಕಾರಣಿಕನೆದುರು ನಾ ತೃಣಕ್ಕೆ ಸಮವೆನ್ನುವುದ ಮರೆತ.

    ಪ್ರಕೃತಿಯ ಸೃಷ್ಟಿಯಲಿ ನಾನೊಂದು ಭಾಗ
    ಎಂದವನಿಗಷ್ಟೇ ಇಲ್ಲಿರುವುದು ಜಾಗ.
    ಮಣ್ಣಿನ ಮೋಹಕ್ಕೆ ಸ್ವಾರ್ಥವ ಮೆರೆದರೆ,
    ಬಸ್ಮವಾಗಿಸಿ ತನ್ನುದರವ ಸೇರಿಸಿಕೊಳ್ಳವುದು ಈ ಧರೆ‌.

  • ಕಾಂತಾರ

    “ಕಾಂತಾರ” ಕನ್ನಡ ಚಲನಚಿತ್ರದ ಟ್ರೈಲರ್ ನೋಡಿದಾಗ ನನ್ನ ಅನಿಸಿಕೆಯನ್ನು ಅಕ್ಷರರೂಪಕ್ಕೆ ತಂದಾಗ ಮೂಡಿದ ಸಾಲುಗಳು. ಕಾಂತಾರ ತಂಡದವರಿಗೆ ನನ್ನ ಅಭಿನಂದನೆಗಳು. ಬಹಳ ಅದ್ಭುತವಾಗಿ ಮೂಡಿಬಂದಿದೆ, ಚಿತ್ರದ ಬಿಡುಗಡೆಗೆ ಕಾಯುತ್ತಿದ್ದೇನೆ.

    ಮೆರುಗಿನ ಕಾಡಿನ ನಡುವಲಿ ಒಂದು
    ಬೆರಗಿನ ಕಥೆಯನು ಹೇಳಲು ಎಂದು
    ಹೊರಟಿಹ ಕಾರಣಿಕನು ನಮ್ಮಯ ಬಂಧು.

    ಚಾಟಿಯ ಕೋವಿಯ ನರ್ತನದಾಟ
    ಕೆಸರಿನ ಗದ್ದೆಯ ಕಂಬಳದೋಟ
    ಹಸುರಿನ ನಡುವಲಿ ಮರಗಳ್ಳರ ಕಾಟ.

    ಆಳುವ ಅರಸನ ಕೇಳುವರಿಲ್ಲ
    ದರ್ಪದ ಧೋರಣೆಗೆ ಜಾಗವೇ ಇಲ್ಲ
    ಕಾಯುವ ದೈವವೇ ನಮಗೆಲ್ಲಾ.

    ಕತ್ತಲ ರಾತ್ರಿ ಬಿತ್ತಿಹ ಭೀತಿ
    ಪಂಜಿನ ದಂಡು ಹೊತ್ತಿಹ ರೀತಿ
    ಬೆಂದಿಹುದಿದರಲಿ ಜೋಡಿಹಕ್ಕಿಯ ಪ್ರೀತಿ.