ಮೆರವಣಿಗೆ

ಹೆದ್ದಾರಿಯ ಅದ್ದೂರಿ ಮೆರವಣಿಗೆಯಲ್ಲಿ ಮೆರೆಯುತ್ತಿದ್ದೆ ದಾರಿಯ ತುಂಬೆಲ್ಲಾ ಹೂವು ಹಾಸಿ
ಜನಜಂಗುಳಿಯ ಕುಣಿತ ಜೋರಿತ್ತು
ವಾದ್ಯ ನಗಾರಿಯಲ್ಲಿ ಕಿವಿ ಕಳೆದು ಹೋಗಿ
ಕಂಗೊಳಿಸುವ ಬೆಳಕಲ್ಲಿ ಕಣ್ಣು ಮುಂಜಾಗಿತ್ತು
ದಾರಿಯ ಅರಿವಿರಲಿಲ್ಲ, ದೂರದ ಚಿಂತೆ ಇರಲಿಲ್ಲ
ಮರೆತ್ತಿದ್ದೆ…. ಮೆರೆಯುತ್ತಿದ್ದೆ…  ಮುಳುಗಿದ್ದೆ..

ಒಮ್ಮೆಲೆ ಕೆಂಡದ ಕೆಂಪು ಗಾಳಿಯೊಡನೆ ಬೆರೆತು
ನನ್ನೆಡೆಗೆ ಚಾಚಿ ಚರ್ಮ ಕರಗಿತ್ತು
ಎಚ್ಚೆತ್ತ ಕಣ್ಣು ಹುಡುಕಿದ್ದು ಮೆರವಣಿಗೆಯ ಮಂದಿಯನ್ನು
ಹೊಳೆವ ಬೆಳಕೆಲ್ಲಿ? ದಾರಿ ಕವಲೊಡೆದದ್ದೆಲ್ಲಿ? ವೇಗವ ಹೆಚ್ಚಿಸಿಕೊಂಡವರಾರು? ಪಥ ಬದಲಾದದ್ದೆಲ್ಲಿ?
ಹೀಗೆ ಪ್ರಶ್ನೆಗಳ ಪ್ರವಾಹ ಅಪ್ಪಳಿಸಿತ್ತು
ಏಕಾಂತ, ಕತ್ತಲು, ಭಯದ ಸಂಗಮ ಕಾಲಿಗೆ ಬುದ್ಧಿ ಹೇಳಿ ಓಡಲಾರಂಭಿಸಿದೆ
ತಲೆಯಲ್ಲಿ ತರ್ಕಕ್ಕೆ ಬಿಡುವಿರಬಾರದೆಂದು ಎಲ್ಲಾ ಪ್ರಶ್ನೆಗಳೊಟ್ಟಿಗೆ ನಿಲ್ಲದೆ ಓಡಿದೆ
ಆದರೆ ಉತ್ತರ ಸಿಗದ ಕತ್ತಲ ಪ್ರಶ್ನೆಗಳ ಚೀಲ ಬೆನ್ನ ಬಾಗಿಸಿತ್ತು
ಓಟದ ವೇಗಕ್ಕೆ ಕಡಿವಾಣ ಹಾಕಿತ್ತು
ಆಗಲೆ ಅರ್ಥವಾದದ್ದು ಹಗುರಾಗದೆ ಹಾರಲಾರೆಯೆಂದು
ಪ್ರಯಾಣದಲ್ಲಿ ಕತ್ತಲ ಭಯ ಕರಗಿ
ಮೆರವಣಿಗೆ ಕನಸ್ಸೆಂಬುವುದು ಅರ್ಥವಾಗಿ
ಹಗುರಾಗಿ ಹಾರುವ ಪ್ರಯತ್ನದೆಡೆಗೆ ಪ್ರಯಾಣ ಸಾಗಿತ್ತು.

Comments

Leave a Reply

Your email address will not be published. Required fields are marked *