ಯುದ್ಧ

25th March 2022 ಉದಯವಾಣಿ eMagazine ಪ್ರಕಟಿತ ಲೇಖನ

https://epaper.udayavani.com/c/67033468

ಈಗಷ್ಟೇ ಶಾಂತ ಸರೋವರವಾದ ಮನದಂಗಳಕ್ಕೆ, ಸುನಾಮಿಯ ಅಲೆ ಎಬ್ಬಿಸಲು ಮತ್ತೆ ಆ ವ್ಯಂಗ್ಯ, ಚುಚ್ಚು ಮಾತಿನ ಬಾಣಗಳು ನನ್ನೆಡೆಗೆ ಶರವೇಗದಲ್ಲಿ ನುಗ್ಗುತ್ತಿದೆ. ಮತ್ತೆ ಮನಸ್ಸು ಕದಡಿ ಅಲ್ಲೋಲ ಕಲ್ಲೋಲವಾಗಿಸಲು ಹೊಂಚು ಹೂಡುತ್ತಿದೆ. ಆದರೆ ಇನ್ನು ಮುಂದೆ ನನ್ನೆಡೆಗೆ ಹರಿದುಬರುವ ಬಾಣಗಳ ಸುರಿಮಳೆಯು ನಾಟದಂತೆ ನನ್ನ ನಾನು ರಕ್ಷಿಸಿಕೊಳ್ಳಬಲ್ಲೆ. ಒಮ್ಮೆ ಕದನ ಶುರುವಾದರೆ ಅಂತ್ಯದ ಅರಿವಿಲ್ಲದೆ, ಯಾವ ಯುದ್ಧ ವಿರಾಮ, ಸೂರ್ಯಾಸ್ತದ ಬಿಡುವಿಲ್ಲದೆ ನಡೆಯುವ ನಿರಂತರ ಕಾದಾಟವಿದು ಎಂಬುದನ್ನು ಬಲ್ಲೆ ನಾನು. ಎಷ್ಟೋ ಬಾರಿ ಇಲ್ಲಿ ನಾನು ಸಾರಥಿಯೋ? ಸೈನಿಕನೋ? ಎಂಬ ಪರಿವಿಲ್ಲದೆ ಮನದ ರಣರಂಗದಲ್ಲಿ ಮನಸ್ಸು-ಬುದ್ಧಿಯ ಮಧ್ಯೆ ನಡೆದ ಸಂಗ್ರಾಮಕ್ಕೆ ಒಂಟಿ ಸಾಕ್ಷಿಯಾದವಳು ನಾನು. ಇವೆಲ್ಲದರಿಂದ ಗಟ್ಟಿಯಾದವಳು ನಾನು.

ನನ್ನ ಭವಿಷ್ಯದ ಪಥವನೆಂದೂ ನಿರ್ಧರಿಸದವರ ಬರಿಯ ಕಟು, ಕೊಂಕು ಮಾತುಗಳ ಬಾಣಗಳಿಗೆ ಅಷ್ಟೊಂದು ಶಕ್ತಿಯೇ? ನನ್ನಂತರಂಗದಲ್ಲೊಂದು ಯುದ್ಧ ತರಂಗವ ಹುಟ್ಟು ಹಾಕಿ, ಅತಿವೇಗದಿ ಅಲೆಗಳ ಪ್ರಸರಣೆ ಇಡೀ ನನ್ನ ದೇಹವನ್ನಾವರಿಸುವಷ್ಟು? ಎಂದು ನನ್ನ ನಾನೇ ಬಹು ಬಾರಿ ಪ್ರಶ್ನಿಸಿ ಸೋತು, ಗೆದ್ದಿದ್ದೇನೆ. ಯುದ್ಧ ಕಾಳಗದಲ್ಲಿ ಕಹಳೆ ಊದಿದವನು ಕಿಡಿ ತಾಕಿಸಿ, ರಣರಂಗದಲ್ಲಿ ಕಾದಾಡದೇ, ತನ್ನ ಪಾತ್ರವ ಕಳಚಿ ಮುಂದೆ ನಡೆದರೂ; ನನ್ನ ಹುಚ್ಚು ಮನಸ್ಸಿನ್ನೂ, ಮತ್ತೆ ಮತ್ತೆ ಆ ಕಿಡಿಗೆ ಗಾಳಿ ಸೋಕಿಸಿ, ಬೆಂಕಿಯ ಕೆನ್ನಾಲಿಗೆಯು ನನ್ನಾವರಿಸುವಂತೆ ಮಾಡಿದ್ದನ್ನು ಅರಿತು ಎಚ್ಚೆತ್ತಿದ್ದೇನೆ.

ಎಲ್ಲಾ ಹೆಜ್ಜೆಗಳಲ್ಲೂ ತಮ್ಮದೊಂದು ಕಲ್ಲು ಎಸೆದು, ಕೆದಕಿ-ಕೆದಕಿ ಕಾಳಗಕ್ಕೆ ಇಳಿಯುವವರನ್ನು ಕಂಡಿರುವೆ ನಾನು. ಶ್ರಮದಿಂದ ಗೆದ್ದು, ಎದ್ದು ನಿಂತಾಗ ಅವಳೇನು ಗೆದ್ದಿಲ್ಲ; ಅವಳೊಂದಿಗೆ ಇರುವವರು ಗೆಲ್ಲಿಸಿ, ನಿಲ್ಲಿಸಿದ್ದಾರೆಂದವರಿದ್ದಾರೆ. ಹಾಗೆಯೇ ಕುಸಿದು ಬಿದ್ದಾಗ, ನಿಲ್ಲಲೂ ಶಕ್ತಿ ಇಲ್ಲದವಳು ಇನ್ನೇನು ಮಾಡ್ಯಾಳು? ಎಂದಂತಹ ನೂರಾರು ಮಾತುಗಳು ನನ್ನನಿಂದು ಯುದ್ಧ ಭೂಮಿಯಲ್ಲಿ ತಲೆಯೆತ್ತಿ, ಎದೆಯೊಡ್ಡಿ ನಿಲ್ಲುವಂತೆ ಮಾಡಿದೆ. ಈ ಸಮಾಜದ ಚೌಕಟ್ಟಿನಲ್ಲಿ ನಾನಿದ್ದ ಮೇಲೆ ಎಲ್ಲಾ ತರಹದ ಬಾಣಗಳ ಪ್ರಯೋಗ ನಿಶ್ಚಿತ. ಹಾಗಂತ ಬೆಚ್ಚಿ ಪಲಾಯನ ಮಾಡಿ ಅವಿತು ಕೂತರೆ, ಅದು ಕದನ ವಿರಾಮಕ್ಕೆ ಉತ್ತರವಲ್ಲ. ಬದುಕಿನ ಪ್ರತಿ ಹೆಜ್ಜೆ ಹೋರಾಟವಾಗಿರುವುದರಿಂದ ಎಲ್ಲಾ ಸನ್ನಿವೇಶಗಳು ಒಂದಿಲ್ಲೊಂದು ವಿಷಯಗಳನ್ನು ಕಲಿಸಿಕೊಟ್ಟಿದೆ. ನನ್ನ ಭಾವನೆಗಳು, ನಿರ್ಧಾರಗಳು ಇಂದು ನನ್ನ ಹಿಡಿತದಲ್ಲಿದೆ. ಹಾಗಾಗಿ ಯಾವ ಅಥವಾ ಯಾರ ಬತ್ತಳಿಕೆಯ ಬಾಣಗಳು ನನ್ನೊಳಗೆ ಇನ್ಯಾವ ಅಲೆಗಳ ಉಗಮದ ಬಿಂದುವಾಗಲು ಆಸ್ಪದವಿಲ್ಲ. ಇದರಿಂದ ಮುಂದಿನ ಎಂತಹುದೇ ಸಂಗ್ರಾಮದಲ್ಲೂ ಗೆಲುವು ನನ್ನದೇ ಎಂಬ ಭವಿಷ್ಯವಾಣಿ ಧೈರ್ಯದಿಂದ ಹೇಳಬಲ್ಲೆ.

Comments

Leave a Reply

Your email address will not be published. Required fields are marked *