ಶಾರದಾ

ಬಹಳ ವರ್ಷಗಳ ನಂತರ ನಮ್ಮೂರ ಜಾತ್ರೆಗೆ ನನ್ನ ಸವಾರಿ ಹೊರಟಿತ್ತು. ಚಿಕ್ಕಂದಿನಲ್ಲಿ ಜಾತ್ರೆಗೆ ಹೋಗುವಾಗ ಇದ್ದ ಸಂಭ್ರಮ, ಉತ್ಸಾಹ ಇಷ್ಟು ವರ್ಷಗಳಾದರೂ ಚೂರೂ ಕಡಿಮೆ ಆಗಿರಲಿಲ್ಲ. ಪರ ಊರಿನಲ್ಲಿ ಇದ್ದ ಕಾರಣ ಪ್ರತಿ ವರ್ಷವೂ ನನ್ನ ಜಾತ್ರೆ ನೋಡುವ ಆಸೆ ಮುಂದೂಡುತ್ತ ಹೋಗುತ್ತಿತ್ತು. ಬಹಳ ವರ್ಷಗಳ ನಂತರ ಈ ಬಾರಿ ಊರ ಜಾತ್ರೆಯ ಜನಸಾಗರದಲ್ಲಿ ನಾನು ಮುಳುಗಿ, ನನ್ನ ಹಳೆಯ ಸವಿ ನೆನಪುಗಳನ್ನು ಮೆಲುಕು ಹಾಕುತ್ತಾ, ಹೊಸ ನೆನಪುಗಳ ಜೋಳಿಗೆಯನ್ನು ತುಂಬುತ್ತಾ ಸಾಗಿದೆ.

ರಥ ಎಳೆದರು, ದೇವಿಯ ದರ್ಶನವಾಯಿತು. ಬಗೆ ಬಗೆಯ ತಿಂಡಿ-ತಿನಿಸುಗಳು ನನ್ನ ಬ್ಯಾಗು ಸೇರಿತು. ಕತ್ತಲಾಗುತ್ತ ಬಂತು, ಮನೆ ಕಡೆಗೆ ಹೊರಡಲು ಸ್ವಲ್ಪ ಜನಜಂಗುಳಿಯನ್ನು ದಾಟಿ ಹೊರಬಂದ ಕೂಡಲೇ ದೂರದಿಂದ ಯಾರೋ ಸವಿತಾ… ಸವಿತಾ… ಎಂದು ನನ್ನನ್ನು ಕೂಗಿದ ಹಾಗಾಯಿತು. ಹಿಂತಿರುಗಿದಾಗ ಕಂಡಿದ್ದು ‘ಶಾರದಾ’… ‘ಹೇ… ಸವಿತಾ ಹೇಗಿದ್ದೀಯ? ಎಷ್ಟು ವರ್ಷ ಆಯ್ತು ನೀನು ಸಿಗದೇ. ಕಳೆದ ತಿಂಗಳು ನನ್ನ ಮದುವೆ ಆಯ್ತು, ಅಲ್ಲಿ ನೋಡು ಆ ಬಿಳಿ ಕಾರಿನಲ್ಲಿ ಕುಳಿತ್ತಿದ್ದಾರಲ್ಲ ಅವರೇ ನನ್ನ ಗಂಡ, ನಾನು ಈವತ್ತು ನೇರವಾಗಿ ನನ್ನ ಗಂಡನ ಮನೆಯಿಂದ ಕಾರಿನಲ್ಲಿ ಬಂದೆ. ಸರಿ ಆಯ್ತು, ಅವರು ಕಾಯ್ತಾ ಇದ್ದಾರೆ. ಮತ್ತೆ ಸಿಗ್ತೀನಿ’. ಎಂದು ತನಗೆ ಹೇಳಬೇಕಾದದ್ದನ್ನೆಲ್ಲಾ ಒಂದೇ ಉಸಿರಿನಲ್ಲಿ ಹೇಳಿ, ಹೊರಟೇ ಬಿಟ್ಟಳು. ನಾನು ಬಿಟ್ಟ ಕಣ್ಣು ಬಿಟ್ಟಂತೆ ಅವಳನ್ನು ನೋಡುತ್ತಲೇ ನಿಂತಿದ್ದೆ.

ಅವಳು ನಿರರ್ಗಳವಾಗಿ ಅವಳ ಬಗ್ಗೆ ಹೇಳಿ, ಮರು ಮಾತಿಗೂ ಕಾಯದೆ ಅವಸರದಲ್ಲಿ ಹೊರಟಾಗ, ಅವಳ ಮಾತುಗಳು ನನಗೆ ಶೋಕಿಯ ಮಾತಾಗಿ ಕಾಣಿಸಲಿಲ್ಲ. ಬದಲಿಗೆ ನನ್ನ ಕಣ್ಣುಗಳಲ್ಲಿ ಸಂತಸದ ನಗು ಚಿಮ್ಮಿತು. ಅವಳ ಮೊಗದ ಆ ಖುಷಿ ನನ್ನ ಜಾತ್ರೆ ನೋಡಿದ ಖುಷಿಯನ್ನು ಇಮ್ಮಡಿಗೊಳಿಸಿತು.

ಊರ ದೇವಸ್ಥಾನದಿಂದ ಮನೆಗೆ ನಡೆದುಕೊಂಡು ಹೋಗಲು ನಿರ್ಧರಿಸಿದೆ. ದಾರಿ ಉದ್ದಕ್ಕೂ ಶಾರದಾಳ ಯೋಚನೆಗಳು ನನ್ನ ನಾನೇ ಮರೆತು ಸಾಗುವಂತೆ ಮಾಡಿದವು. ಏನೂ ಬದಲಾವಣೆ ಇರಲಿಲ್ಲ ಅವಳಲ್ಲಿ. ಸುಮಾರು ಮೂವತ್ತೈದು ವರ್ಷದ ಹಿಂದೆ ಹೇಗಿದ್ದಾಳೋ, ಈಗಲೂ ಹಾಗೆಯೇ ಇದ್ದಾಳೆ. ಅಡಿಕೆ ಮರದಂತೆ ಎತ್ತರದ, ಸಣಕಲು ದೇಹ. ಇಡೀ ದೇಹದಲ್ಲಿ ಮೂಳೆಗಳದ್ದೇ ರಾಜ್ಯಭಾರ. ಮಾಂಸ ಖಂಡಗಳ ಕೊರತೆ ಎದ್ದು ಕಾಣುತ್ತಿತ್ತು. ಮದುವೆ ಎನ್ನುವುದು ಶಾರದಾ ಬದುಕಿನ ಬಹು ವರ್ಷದ ಕನಸ್ಸು. ಒಬ್ಬೊಬ್ಬರು ಒಂದೊಂದು ಕನಸ್ಸು ಕಾಣುತ್ತಾರೆ, ಆದರೆ ಶಾರದಾ ತನ್ನ ಮದುವೆಯೇ ಜೀವನದ ಸಾರ್ಥಕತೆಯ, ಮರುಹುಟ್ಟಿನ ಘಳಿಗೆ ಎನ್ನುವಂತೆ ಕನಸ್ಸು ಕಂಡಿದ್ದಳು. ಆ ಕನಸ್ಸು ನನಸ್ಸಾಗಿದ್ದು ಅವಳ ೫೩ನೇ ವಯಸ್ಸಿನಲ್ಲಿ.

ಶಾರದಾ ಮನೆ ಇರುವುದು ನಮ್ಮ ಮನೆಯಿಂದ ಎರಡು ಗದ್ದೆ ಆಚೆ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಶಾರದಾ ತಾಯಿ ಮತ್ತು ತಮ್ಮನೊಂದಿಗೆ ಬೆಳೆದಳು. ಅವಳು ನನಗಿಂತ ಹತ್ತು ವರ್ಷವಾದರೂ ದೊಡ್ಡವಳು. ನನಗೆ ನೆನಪಿದ್ದ ದಿನಗಳೆಂದರೆ ಅವಳಿಗೆ ಆಗ ಸುಮಾರು ಹದಿನಾರು ವರ್ಷ. ಆಗಲೂ ಅವಳು ಹೀಗೆ, ಎತ್ತರದ ಸಣಕಲು ಜೀವ. ಸ್ವಾವಲಂಬಿಯಾದ ಶಾರದಾ ಆಗಲೇ ತೊಟದಲ್ಲೇ ಇರುವ ಹತ್ತಿ ಗಿಡದಿಂದ ದೇವರ ದೀಪ ಹಚ್ಚುವ ಬತ್ತಿಗಳನ್ನು ಮಾಡುವುದು, ದನ ಸಾಕಿ ಹಾಲು ಮಾರುವುದು, ಗದ್ದೆ ಬೇಸಾಯ, ಹೀಗೆ ಹಲವು ಕೆಲಸಗಳನ್ನು ಮಾಡುತ್ತಾ ಸಂಸಾರದ ನೊಗ ಹೊತ್ತಿದ್ದಳು. ತಾನು ಶಾಲೆಯ ಮೆಟ್ಟಿಲು ಹತ್ತದಿದ್ದರೂ, ಕಷ್ಟ ಪಟ್ಟು ತಮ್ಮನನ್ನು ಓದಿಸುತ್ತಿದ್ದಳು. ಹೀಗೆ ಬಡತನ, ಬದುಕಿನ ಕಷ್ಟದ ದಿನಗಳು ಶಾರದಾಳ ಬಾಲ್ಯ, ಹದಿಹರೆಯ ದಿನಗಳನ್ನು ನುಂಗಿ ಹಾಕಿತ್ತು. ಅವಳು ಮದುವೆಯ ವಯಸ್ಸಿಗೆ ಬಂದಾಗ ನಾನಿನ್ನೂ ಹೈಸ್ಕೂಲು ಓದುತ್ತಿದ್ದೆ. ಪ್ರತಿದಿನ ಮನೆಯಲ್ಲಿ ಬರೇ ಕಷ್ಟಗಳನ್ನೇ ಕಂಡ ಶಾರದಾಳಿಗೆ ತಾನು ಮದುವೆ ಆಗಬೇಕು, ತನ್ನ ಗಂಡ ತನ್ನನ್ನು ರಾಜಕುಮಾರಿಯಂತೆ ನೋಡಿಕೊಳ್ಳಬೇಕು ಎಂದು ಜಪ ಮಾಡುತ್ತಿದ್ದಳು ಹಾಗೂ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದಳು. ತನಗೆ ಮುಂದೆ ನಿಂತು ಗಂಡು ನೋಡಿ, ಮದುವೆ ಮಾಡಿಸುವವರಿಲ್ಲ ಎನ್ನುವುದು ಒಂದು ಕೊರಗಾದರೆ, ತಾನು ನೋಡಲು ಬಹಳ ತೆಳ್ಳಗೆ ಇದ್ದೇನೆ ಅನ್ನುವುದು ಅವಳಿಗಿದ್ದ ಇನ್ನೊಂದು ಬಹುದೊಡ್ಡ ಕೊರಗು. ಹಾಗಾಗಿ ಮನೆಯ ಬಳಿಯಲ್ಲಿ ಇದ್ದ ವೈದ್ಯರ ಬಳಿ ಹೋಗಿ ಯಾವಾಗಲೂ ತನಗೆ ಮುಖದಲ್ಲಿ ರಕ್ತ ಹೆಚ್ಚಾಗಲು ಟಾನಿಕ್ ಕೊಡಿ, ಹಸಿವು ಹೆಚ್ಚಿಸುವ ಟಾನಿಕ್ ಕೊಡಿ ಎಂದು ತಂದು ಕುಡಿಯುತ್ತಿದ್ದಳು. ಕುಡಿದ ಒಂದು ವಾರಕ್ಕೆ ನಮ್ಮ ಮನೆಗೆ ಬಂದು, ‘ಏ ಸವಿತಾ.. ನೋಡು ನನ್ನ ಮುಖದಲ್ಲಿ ಈಗ ರಕ್ತ ಆಗಿದೆ, ನನ್ನ ಕುತ್ತಿಗೆಯ ಹೊಂಡ ತುಂಬುತ್ತಿದೆ ಅಲ್ವಾ? ನನ್ನ ನೋಡಲು ಮುಂದಿನ ವಾರ ವರ ಬರುತ್ತಿದ್ದಾನೆ’ ಎಂದು ಹೇಳಿ ಇನ್ನಷ್ಟು ಬೀಗುತ್ತಿದ್ದಳು. ಪ್ರತಿ ಎರಡು ಮೂರು ತಿಂಗಳಿಗೊಮ್ಮೆ ಅವಳು ಬಂದು ಇದನ್ನೇ ಹೇಳುತ್ತಿದ್ದಳು. ಆ ವೈದ್ಯರು ಅವಳಿಗೆ ಅದಾವ ಟಾನಿಕ್ ಕೊಡುತ್ತಿದ್ದರೋ ನಾನು ಅರಿಯೆ. ಆದರೆ ಅವಳಲ್ಲಿ ನಾನೆಂದೂ ಯಾವ ಬದಲಾವಣೆಯೂ ಕಾಣದಿದ್ದರೂ ಅವಳ ಸಂತೋಷಕ್ಕೆ ‘ಹೌದು ಶಾರದಾ ನೀನು ಸ್ವಲ್ಪ ದಪ್ಪ ಆಗಿದ್ದೀಯಾ’ ಎನ್ನುತ್ತಿದ್ದೆ. ಹಾಗೆಯೇ ಎಂದೂ ಅವಳನ್ನು ನೋಡಲು ಬರುವ ವರ ಬಂದಿದ್ದು ನಾನು ಕಾಣಲಿಲ್ಲ. ಸದಾ ತನ್ನ ಭ್ರಮಾ ಲೋಕದಲ್ಲಿ ಇರುತ್ತಿದ್ದ ಶಾರದಾಳನ್ನು ನೆನೆದಾಗಲ್ಲೆಲ್ಲಾ ನನ್ನ ಮನ ಮರುಗುತ್ತಿತ್ತು.

ತನ್ನ ಕನಸಿನ ಲೋಕದಲ್ಲಿ ಅವಳ ಯೌವನದ ಹಲವು ವರ್ಷಗಳನ್ನು ಕಳೆದಳು. ಅನಂತರದ ಒಂದಿಷ್ಟು ಸಮಯ ತನ್ನ ಕನಸ್ಸುಗಳನ್ನು ಬದಿಗಿಟ್ಟು ತನ್ನ ತಮ್ಮನ ಭವಿಷ್ಯವನ್ನು ಸಧೃಡಗೊಳಿಸುವತ್ತ ಯೋಚಿಸಿ, ಚಿಕ್ಕದೊಂದು ಅಂಗಡಿಯನ್ನು ಆರಂಭಿಸಲು ತಮ್ಮನಿಗೆ ಬೆನ್ನೆಲುಬಾಗಿ ನಿಂತಳು. ಆಗ ಸ್ವಲ್ಪ ನಿರಾಳವಾಯಿತು ಎಂದುಕೊಳ್ಳುವುದರಲ್ಲಿ ತಾಯಿ ಅನಾರೋಗ್ಯದಿಂದ ನಿಧನ ಹೊಂದಿದರು. ತಾಯಿಯ ನಿಧನ ಶಾರದಾಳನ್ನು ಮತ್ತಷ್ಟು ಒಂಟಿಯಾಗಿಸಿತು.

ಹೀಗೆ ದಿನ ಕಳೆದಂತೆ ಒಂದು ದಿನ ತಮ್ಮನ ದುಶ್ಚಟಗಳ ಅನಾವರಣವಾಯಿತು. ತಮ್ಮ ಸಾಲಗಳ ಸರದಾರ ಎಂಬುದು ಅರಿವಾಗಿದ್ದು, ಅವರ ಮನೆ ಮುಂದೆ ಅಂದು ಸಾಲಕೊಟ್ಟವರು ಬಂದು ನಿಂತಾಗಲೇ. ಕೈಯಲ್ಲಿ ಕೂಡಿಟ್ಟ ಕಾಸಿಲ್ಲದ ಶಾರದಾ, ಹೇಗೋ ಹೊಟ್ಟೆ ಬಟ್ಟೆಗೆ ತೊಂದರೆ ಇರಲಿಲ್ಲ ಎನ್ನುವಾಗ ಎರಗಿದ ಈ ಆಘಾತ ಅವಳಿಗೆ ತಡೆದುಕೊಳ್ಳಲಾಗಲಿಲ್ಲ. ಸಾಲಗಾರರ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಯಿತು. ಒಂದು ದಿನ ಎಲ್ಲದರಿಂದ ಬೇಸತ್ತ ಶಾರದಾ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಪ್ರಯತ್ನಿಸಿದಳು. ಕುಣಿಕೆಯನ್ನು ಬಿಗಿಗೊಳಿಸುವ ಕೊನೆಯ ಸೆಕೆಂಡಿನಲ್ಲಿ ಅವಳಿಗೆ ಅವಳೇ ಸ್ಪೂರ್ತಿಯಾಗಿ, ‘ಇಲ್ಲಾ… ತಾನು ಸಾಯಬಾರದು, ಬದುಕಿ ನನ್ನಂಥ ಒಂಟಿ ಮಹಿಳೆಯರ ಹೋರಾಟಕ್ಕೆ ಮಾದರಿ ಸ್ತ್ರೀ ಆಗಬೇಕು’ ಎಂದು ಸಾವಿನ ನಿರ್ಧಾರವನ್ನು ಕೈ ಬಿಟ್ಟಳು. ಮರುದಿನವೇ, ಇದ್ದ ಒಂದು ಗದ್ದೆಯನ್ನು ಮಾರಿ ತಮ್ಮನ ಸಾಲದ ಹೊರೆಯನ್ನು ತೀರಿಸಲು ನಿರ್ಧಾರ ಮಾಡಿ, ಸಾಲ ಮುಕ್ತಳಾದಳು.

ಕಾಲಚಕ್ರ ಉರುಳಿತು. ನನಗೂ ಮದುವೆಯಾಯಿತು, ಮಕ್ಕಳಾಯಿತು. ಮಕ್ಕಳೊಂದಿಗೆ ನಾನು ಊರಿಗೆ ಹೋದಾಗಲೂ ಶಾರದಾ ಮಾತ್ರ ಬದಲಾಗಲೇ ಇಲ್ಲ. ಆಗಲೇ ಅವಳ ವಯಸ್ಸು ಸುಮಾರು ನಲವತ್ತೈದು- ನಲವತ್ತಾರು ಆಗಿತ್ತು. ಆಗಲೂ ಅವಳು ಮುಂಚೆಯಂತೆಯೇ ‘ಹೇ ಸವಿತಾ… ನಾನು ಈ ಸಾರಿ ಸ್ವಲ್ಪ ದಪ್ಪ ಆಗಿದ್ದೇನೆ ಅಲ್ವಾ?, ಮುಂದಿನ ವಾರ ನನ್ನ ನೋಡಲು ವರ ಬರುತ್ತಾನೆ, ತಮ್ಮ ಹೇಳಿದ್ದಾನೆ’ ಎಂದು ಉತ್ಸಾಹದ ದನಿಯಲ್ಲಿ ಹೇಳುತ್ತಿದ್ದಳು. ಇದನ್ನು ಕೇಳಿ ‘ಶಾರದಾಳ ಜೀವನ ಎಂದು ಸರಿ ಹೋಗುವುದು ದೇವರೇ’ ಎಂದು ಬಹಳ ಬೇಸರಪಡುತ್ತಿದ್ದೆ.

ಸ್ವಲ್ಪ ವರ್ಷಗಳ ನಂತರ ಅಂದರೆ ಅವಳ ೫೩ನೇ ವಯಸ್ಸಿನಲ್ಲಿ ಕೊನೆಗೂ ಅವಳ ಮದುವೆಯ ಮುಹೂರ್ತ ಕೂಡಿ ಬಂತು. ನಾನು ದೂರದ ಊರಲ್ಲಿ ಇದ್ದ ಕಾರಣ ನನಗೆ ಮದುವೆಗೆ ಹೋಗಲು ಆಗಲಿಲ್ಲ. ನನ್ನ ಅಮ್ಮ ಶಾರದಾಳ ಮದುವೆಯ ಸುದ್ದಿ ನನಗೆ ಪೋನಾಯಿಸಿ ಹೇಳಿದಾಗ ಬಹಳ ಸಂತಸವಾಯಿತು. ಶಾರದಾ ಸ್ವಾವಲಂಬಿ ಹಾಗೂ ಛಲಬಿಡದೆ ಬದುಕಿನ ಪ್ರತಿ ಕ್ಷಣವನ್ನು ಹೋರಾಡಿ ಗೆದ್ದ ಒಬ್ಬ ದಿಟ್ಟ ಹೆಣ್ಣು. ಅವಳ ಮುಂದಿನ ಜೀವನವಾದರೂ ಸುಖಮಯವಾಗಿರಲಿ ಎಂದು ನಾನಿದ್ದ ಜಾಗದಲ್ಲೇ ದೇವರನ್ನು ಬೇಡಿಕೊಂಡೆ.

ಹೀಗೆ ಶಾರದಾಳ ನೆನಪಿನ ದೋಣಿಯಲ್ಲಿ ಸಾಗಿ ಬಂದ ನನಗೆ ಮನೆ ತಲುಪಿದ್ದೇ ಅರಿಯಲಿಲ್ಲ. ಮನೆಗೆ ಬಂದವಳೆ ಜಾತ್ರೆಯ ಬಗೆ ಬಗೆಯ ತಿಂಡಿಗಳು ಹೊಟ್ಟೆ ಸೇರಿದವು. ಮತ್ತೆ ಊಟದ ಆಲೋಚನೆಯೂ ಬರುವುದರೊಳಗೆ ನಿದ್ದೆಗೆ ಜಾರಿದೆ.

Comments

Leave a Reply

Your email address will not be published. Required fields are marked *