ನೀ ಹುಟ್ಟಿದ ಆ ದಿನ ಮರುಹುಟ್ಟು ನನ್ನದು. ನನ್ನ ಹೊಸ ಜನ್ಮಕ್ಕೆ ಜೀವ ಕೊಟ್ಟಿದ್ದು, ನಿನ್ನ ಆ ಮೊದಲ ಕೂಗು, ಆ ಮಧುರ ಸ್ಪರ್ಶ. ಬದಲಾಯಿತು ಎಲ್ಲವೂ… ನಾನು ಬದಲಾದೆ. ನಿನ್ನ ಪಾಲನೆಯ ಅನುದಿನವೂ ನನಗೆ ಪಾಠಶಾಲೆ ಇದ್ದಂತೆ. ಕಲಿತೆನದೆಷ್ಟೋ ಜೀವನದ ಪಾಠ. ಇಲ್ಲಿಯವರೆಗೂ ಯಾವ ಪುಸ್ತಕವೂ ಕಲಿಸದ ಪಾಠ. ನಿನ್ನ ನಾನು ಬೆಳೆಸಿದೆ ಅನ್ನುವುದಕ್ಕಿಂತ ನಾನು ಮತ್ತೆ ಹುಟ್ಟಿ, ಹೊಸ ರೂಪದಿ ಬೆಳೆದೆ ಎಂದರೆ ತಪ್ಪಾಗದು. ನೀ ಬಂದ ಮೇಲೆ ಪ್ರತಿ ದಿನವೂ, ಪ್ರತಿ ಹೆಜ್ಜೆಯೂ ನನಗೆ ಹೊಸ ಅಧ್ಯಾಯ. ಈ ಕಲಿಕೆಯ ಪ್ರಯತ್ನದಲ್ಲಿ ಅದೇಷ್ಟೋ ಬಾರಿ ಸೋತೆ ಕೂಡ. ಸೋತಾಗ ಸಹನೆ ಕಳೆದುಕೊಂಡು ಕೂಗಾಡಿದ್ದೂ ಇದೆ. ಆದರೆ ಅದೇ ಸೋಲು ಮರುಕಳಿಸಿದಾಗೆಲ್ಲ ನನ್ನ ತಾಳ್ಮೆಯ ತೂಕ ಹೆಚ್ಚುತ್ತಾ ಹೋಯಿತು.
ಬರೀ ನಿದ್ದೆ ಮಾಡುತ್ತಿದ್ದ ನನಗೆ ಕನಸು ಕಾಣುವುದ ಕಲಿಸಿದೆ. ಅದೇಷ್ಟೋ ಬಾರಿ ನಿನ್ನ ಆರೋಗ್ಯದ ಏರುಪೇರುಗಳು ನನ್ನನ್ನು ಪುಟ್ಟ ನಾಟಿ ವೈದ್ಯೆಯನ್ನಾಗಿ ಮಾಡಿಸಿದ್ದೂ ಉಂಟು. ನೀನು ಅಂಬೆಗಾಲಿಡುವ ದಿನದಿಂದ ಗೊಂಬೆಯಂತೆ ನಡೆಯುವ ನಡುವಲ್ಲಿ ನನಗೆ ಜೀವನದ ಸಮತೋಲನತೆಯನ್ನು ಕಲಿಸಿದೆ. ನೀನು ಬಿದ್ದು ಎದ್ದು ನಡೆದಾಡಲು ಕಲಿತಾಗ, ನಾನು ಜೀವನದ ಏಳು ಬೀಳುಗಳ ನಡುವೆ ಛಲಬಿಡದೆ ಪ್ರಯತ್ನಿಸುವ ಪರಿ ಅರಿತೆ. ನಿನ್ನೊಡನೆಯ ಆಟ, ಆ ತೊದಲ ಮಾತು ಈ ತಾಯಿಯೊಳಗಿನ ಮುಗ್ಧ ಮಗುವ ತೋರಿಸಿದೆ. ಹೀಗೆ ಈ ಜನ್ಮಕ್ಕೆ ಸಾರ್ಥಕತೆ ಕೊಟ್ಟ ಓ ಕಂದ.. ನಾ ಸದಾ ಬಯಸುವೆ ನಿನ್ನ ಆನಂದ. ಎಂದೆಂದಿಗೂ ಹೂವು ಹಾಸಿರಲಿ ನಿನ್ನ ದಾರಿಯಲಿ.
Leave a Reply