ಬಡತನದ ಸವಾಲುಗಳೊಂದಿಗೆ ಪುಟ್ಟ ಮಗಳ ಕನಸಿನ ಕೆಂಪಂಗಿಯೊಂದಿಗಿನ ಪಯಣ.
ಅಮ್ಮಾ.. ನಂಗೊಂದು ರೇಷ್ಮೆ ಕೆಂಪಂಗಿ ಕೊಡಸ್ತೀಯಾ?” ಎಂದು ರೂಪಾ, ಸರೋಜಾಳನ್ನು ಕೇಳಿದಳು. ಮಗಳ ಪ್ರಶ್ನೆಗೆ ಉತ್ತರಿಸಲಾಗದೆ, ಕೇಳಿಯೂ ಕೇಳದಂತೆ ತನ್ನ ಕೆಲಸದಲ್ಲಿ ತೊಡಗಿಕೊಂಡಳು. ಆದರೆ ಹಠ ಬಿಡದ ರೂಪಾ ಮತ್ತೆ “ಅಮ್ಮಾ.. ನಿನ್ನನ್ನೇ ಕೇಳ್ತೀರೊದು, ನನಗೊಂದು ಚೆಂದದ ರೇಷ್ಮೆಯ ಕೆಂಪಂಗಿ ಬೇಕು. ನಿನ್ ಮಗಳು ರಾಣಿ ಹಾಗೆ ಕಾಣ್ತಾಳೆ ಅದರಲ್ಲಿ. ಇದೊಂದ ಸಾರಿ ಇಲ್ಲಾ ಅಂತ ಹೇಳ್ಬೇಡ” ಎಂದಾಗ ಸರೋಜಾ, “ಕೆಂಪಂಗಿಯಂತೆ ಕೆಂಪಂಗಿ, ಇಲ್ಲಿ ಎರಡು ಹೊತ್ತು ಊಟಕ್ಕೆ ಕಷ್ಟ, ಅಂತದ್ರಲ್ಲಿ ನಿನಗೆಲ್ಲಿಯ ಕೆಂಪಂಗಿ ತರಲಿ. ಮಲಗು ಬೇಗ. ಬೆಳಗ್ಗೆ ಎದ್ದು ತರಕಾರಿ ಮಾರೋಕೆ ಹೋಗ್ಬೇಕು. ನಮ್ಮಂತವರಿಗೆಲ್ಲ ರೇಷ್ಮೆ ಅಂಗಿ ಬರೀ ಕನಸಲ್ಲಿ ಮಾತ್ರ ಮಲಗು, ಮಲಗು.
ಕೆಂಪೆಂದರೆ ಅಂತಿಂಥಾ ಕೆಂಪಲ್ಲಾ, ರಕ್ತಚಂದನದ ಕೆಂಪು, ಚಿನ್ನದ ಬಣ್ಣದ ರೇಷ್ಮೆಯ ದಾರದ ದಪ್ಪದ ಅಂಚು. ತೊಟ್ಟು ಊರೆಲ್ಲಾ ಕುಣಿದಾಡಿದ ರೂಪಾ ಮನೆಗೆ ಹಿಂದಿರುಗುವಾಗ ರೇಷ್ಮೆ ಲಂಗ ಬೇಲಿಗೆ ಸಿಕ್ಕಿ ಹರಿದು ಹೋಯಿತು. ಹರಿದ ಕೆಂಪಂಗಿ ರೂಪಾ ಖುಷಿಗೆ ಕ್ಷಣದಲ್ಲೇ ತಣ್ಣೀರೆರಚಿತು. “ನನ್ನಂಗಿ ಚಂದದ ಅಂಗಿ” ಎಂದು ಜೋರಾಗಿ ರೂಪಾ ಅಳಲಾರಂಭಿಸಿದಳು. ಕೂಡಲೇ ಪಕ್ಕದಲ್ಲಿ ಮಲಗಿದ್ದ ಸರೋಜಾ, ಮಗಳನ್ನು ಎಬ್ಬಿಸಿ, “ಏನಾಯಿತು? ಏನಾಯಿತು? ಕನಸೇನಾದರು ಕಂಡೆಯಾ?” ಎಂದು ಕೇಳಿದಾಗ, ಎಚ್ಚೆತ್ತ ರೂಪಾ ಮೊದಲು ನೋಡಿದ್ದು ತನ್ನ ಮೈ ಮೇಲಿದ್ದ ಬಟ್ಟೆಯನ್ನು. ಆದರೆ ಅವಳು ತೊಟ್ಟಿದ್ದು ಅದೇ ಹರಿದ ತೂತುಗಳನ್ನು, ಬಣ್ಣಬಣ್ಣದ ದಾರಗಳಿಂದ ರೇಖೆ ಎಳೆದ ಹಳೆಯ ಅಂಗಿ. ಕಂಡಿದ್ದು ಕನಸ್ಸೆಂದು ಸಪ್ಪೆಮೋರೆ ಮಾಡಿ ಕೂತಳು.
ಸರೋಜಾ ಮತ್ತು ರೂಪಾ ಒಂದು ಪುಟ್ಟ ಗುಡಿಸಲಿನಲ್ಲಿ ವಾಸವಾಗಿದ್ದರು. ತುಂಬು ಗರ್ಭಿಣಿಯನ್ನು ತೊರೆದು ಹೋದ ಸರೋಜಾಳ ಗಂಡ, ಮಗಳಿಗೆ ಹತ್ತು ವರ್ಷವಾದರೂ ವಾಪಸ್ಸು ಮನೆ ಕಡೆ ಬರಲಿಲ್ಲ. ಹೊಟ್ಟೆಪಾಡಿಗಾಗಿ ತಾಯಿ-ಮಗಳು ತರಕಾರಿ ಗಾಡಿ ತಳ್ಳಿಕೊಂಡು ಕೇರಿ-ಕೇರಿ ಹೋಗಿ ವ್ಯಾಪಾರ ಮಾಡಿ, ಬಂದ ಹಣದಲ್ಲಿ ಹೇಗೋ ಹೊಟ್ಟೆ-ಬಟ್ಟೆ ಕಷ್ಟದಲ್ಲಿ ನಡೆಸುತ್ತಿದ್ದರು. ರೂಪಾ ಕೂಡ ಶಾಲೆ ಮುಖ ನೋಡಿದವಳಲ್ಲ. ಬರೀ ತಾಯಿಯೊಂದಿಗೆ ತರಕಾರಿ ಗಾಡಿ ತಳ್ಳುವುದೇ ಅವಳ ನಿತ್ಯ ಕಾಯಕ.
ಇದರ ಮಧ್ಯದಲ್ಲಿ ಕೆಂಪಂಗಿಯ ನೆನಪು ರೂಪಾಳನ್ನು ಮತ್ತೆ ಮತ್ತೆ ಕಾಡುತ್ತಿತ್ತು. ಆದರೆ ತಾಯಿ ಎರಡು ಹೊತ್ತು ಊಟಕ್ಕಾಗಿ ಪಡುತ್ತಿದ್ದ ಕಷ್ಟ ಕಂಡು ಅವಳನ್ನು ಹೆಚ್ಚು ಪೀಡಿಸಬಾರದು ಎಂದು ಸುಮ್ಮನಿರುತ್ತಿದ್ದಳು.
ಒಂದು ಮಧ್ಯಾಹ್ನ ಇಬ್ಬರೂ ತರಕಾರಿ ಗಾಡಿಯನ್ನು ನೆರಳಿನಲ್ಲಿ ನಿಲ್ಲಿಸಿ ವಿಶ್ರಮಿಸುತ್ತಿದ್ದರು. ಸರೋಜಾ ಎಲೆ, ಅಡಿಕೆ, ಸುಣ್ಣ ಮಡಚಿ ಬಾಯಿಗೆ ಇಟ್ಟುಕೊಂಡಳು. ಸುಮ್ಮನೆ ಪಕ್ಕದಲ್ಲೇ ಕೂತ ರೂಪಾಗೆ ತಾಯಿಯ ಕೆಂಪು ನಾಲಿಗೆಯ ಕಂಡು ಮತ್ತೆ ಕೆಂಪಂಗಿ ಯ ನೆನಪಾಯಿತು. ಕೂಡಲೇ ಅಮ್ಮನಲ್ಲಿ “ಅಮ್ಮಾ, ನೀನು ಅಪ್ಪನ ಬಗ್ಗೆ ಕೇಳಿದಾಗಲೆಲ್ಲ ಅವರು ಪೇಟೆಗೆ ಕೆಲಸದ ಮೇಲೆ ಹೋಗಿದ್ದಾರೆ ಅಂತೀಯಲ್ಲಾ ಯಾವಾಗಲೂ, ನಿನಗೇನಾದರೂ ಅವರ ವಿಳಾಸಗೊತ್ತಿದ್ದರೆ ಹೇಳು. ನಾನು ಪಕ್ಕದ ಮನೆಯ ಸಿಂಧು ಹತ್ತಿರ ಅಪ್ಪನಿಗೊಂದು ಪತ್ರ ಬರಿಯೋಕೆ ಹೇಳ್ತೀನಿ. ಆ ಪತ್ರದಲ್ಲಿ, ಬರುವಾಗ ನನಗೊಂದು ಕೆಂಪು ರೇಷ್ಮೆ ಅಂಗಿ ತನ್ನಿ ಅಂತ ಹೇಳ್ತೀನಿ.” ಎಂದ ರೂಪಾ ಮಾತಿಗೆ ಸರೋಜಾಗೆ ಎಲ್ಲಿಲ್ಲದ ಕೋಪ ಬಂತು. “ನೀನು ಹುಟ್ಟಿ 10 ವರ್ಷವಾದರೂ ನಿನ್ನನ್ನ ನೋಡೋಕೆ ಬಾರದ ನಿನ್ನ ಅಪ್ಪ ನಿನಗೀಗ ಕೆಂಪಂಗಿ ಕೊಡಲು ಬರುತ್ತಾನೆ. ಮುಚ್ಚು ಬಾಯಿ, ಇನ್ನೆಂದೂ ನಿನ್ನಪ್ಪನ ಹೆಸರು ಹೇಳಬೇಡ” ಎಂದು ಸರೋಜಾ ತುಂಬಾ ನೋವಿನಿಂದ ನುಡಿದಳು. ಹೆಂಡತಿ-ಮಕ್ಕಳ ಸಾಕಲಾಗದೆ ಇಂತಹ ಬಡತನದ ಕೂಪಕ್ಕೆ ತಳ್ಳಿ ಹೋದ ಗಂಡನ ಬಗ್ಗೆ ಮಗಳು ಮಾತನಾಡಿದಾಗ ಸರೋಜಾ ಕೋಪ ಜ್ವಾಲಾಮುಖಿಯಂತೆ ಹೊಮ್ಮಿತು. ತಾಯಿಯ ಕೋಪ ಕಂಡು ಹೆದರಿದ ರೂಪಾ ಇನ್ನೆಂದೂ ತಾಯಿಯನ್ನು ಕೆಂಪಂಗಿ ಕೇಳೆನು ಎಂದು ನಿರ್ಧರಿಸಿ ತನ್ನ ಆಸೆಯ ಬುತ್ತಿಯನ್ನು ಮುಚ್ಚಿಟ್ಟಳು.
ಎಷ್ಟೇ ಮರೆಯುತ್ತೇನೆ ಎಂದರೂ ಮತ್ತೆ ಮತ್ತೆ ರೂಪಾಗೆ ಕೆಂಪು ಬಣ್ಣ ಕಂಡಲ್ಲೆಲ್ಲ ರೇಷ್ಮೆಯ ಕೆಂಪಂಗಿಯ ನೆನಪು ಕಾಡುತ್ತಿತ್ತು. ಆದರೆ ಅವಳು ನಿರ್ಧಾರ ಮಾಡಿಯಾಗಿತ್ತು. ಎಂದೂ ಅಮ್ಮನನ್ನು ಅಂಗಿಗಾಗಿ ಪೀಡಿಸಲಾರೆ, ನಾನೇ ಹೇಗಾದರೂ ಮಾಡಿ ಕೊಂಡುಕೊಳ್ಳುತ್ತೇನೆ ಎಂದು.
ಮನೆಯ ಮೂಲೆಯಲ್ಲಿ ತುಕ್ಕು ಹಿಡಿದು ಕುಳಿತ ಹುಂಡಿಯನ್ನು ಶುದ್ಧ ಮಾಡಿ. ಆ ಹುಂಡಿಗೆ ಹಣವನ್ನು ಒಟ್ಟುಮಾಡಲು ಶುರುಮಾಡಿದಳು. ಹಬ್ಬ ಹರಿದಿನಗಳಲ್ಲಿ ಊರ ಯಜಮಾನರ ಮನೆಯಲ್ಲಿ ಮಕ್ಕಳಿಗಾಗಿ 5, 10ರೂ ಕೊಡುತ್ತಿದ್ದರು. ಆ ರೂಪಾಯಿಗಳು ಕೂಡ ರೂಪಾ ಹುಂಡಿಗೆ ಸೇರಿಸುತ್ತಿದ್ದಳು. ಎಂದಾದರೂ ಸಹಾಯ ಮಾಡಿದಾಗ ಸಿಹಿ ತಿಂಡಿ ತಿನ್ನಲು ಸರೋಜಾ ಒಂದು ರೂಪಾಯಿ ಕೊಡುತ್ತಿದ್ದಳು, ಅದನ್ನೂ ಕೂಡ ತಿನ್ನದೆ ತನ್ನ ಹುಂಡಿಯಲ್ಲಿ ಸಂಗ್ರಹಿಸುತ್ತಿದ್ದಳು.
ಪ್ರತಿದಿನ ತಾಯಿ-ಮಗಳು ತರಕಾರಿ ವ್ಯಾಪಾರಕ್ಕೆ ಹೋಗುತ್ತಿದ್ದರು. ಅದರಲ್ಲಿ ಕೊಳೆತ ತರಕಾರಿಗಳನ್ನು ತಾಯಿ ಎಸೆಯುತ್ತಿರುವುದ ಗಮನಿಸಿದ ರೂಪಾ, ಪ್ರತಿದಿನ ತರಕಾರಿ ವ್ಯಾಪಾರ ಮುಗಿಸಿ ಮನೆಗೆ ಬಂದೊಡನೆ ತರಕಾರಿ ಗಾಡಿಯಲ್ಲಿ ಕೊಳೆತ ತರಕಾರಿಗಳನ್ನು ಮನೆಯ ಹಿಂದೆ ಗುಂಡಿ ಮಾಡಿ ಅಲ್ಲಿ ಸಂಗ್ರಹಿಸ ತೊಡಗಿದಳು. ಕೊಳೆತ ತರಕಾರಿಯ ಮೇಲೆ ಒಣಗಿದ ಎಲೆಗಳನ್ನು ಸೇರಿಸಿ, ಅದರಲ್ಲಿ ಸಾವಯವ ಗೊಬ್ಬರ ತಯಾರು ಮಾಡತೊಡಗಿದಳು. ಎರಡು-ಮೂರು ತಿಂಗಳಿಗೊಮ್ಮೆ ಆ ಗೊಬ್ಬರವನ್ನು ಅವಶ್ಯಕತೆ ಇರುವವರಿಗೆ ಕೊಟ್ಟು ೧೦-೨೦ ರೂ ಸಂಪಾದನೆ ಮಾಡಿ ಅದನ್ನು ಕೂಡ ಕೆಂಪಂಗಿಯ ಖಾತೆಗೆ ಸೇರಿಸಿಕೊಳ್ಳುತ್ತಿದ್ದಳು. ಹೀಗೆ ಎರಡು ವರ್ಷಗಳು ಕಳೆದರೂ ರೂಪಾ ಕೂಡಿಡಲು ಸಾಧ್ಯವಾದದ್ದು ಕೇವಲ 350 ರೂಪಾಯಿ. ಆದರೂ ಕೆಂಪಂಗಿಯ ಮೇಲಿನ ಆಸೆ ಮಾತ್ರ ಸ್ವಲ್ಪವೂ ಕಡಿಮೆ ಆಗಿರಲಿಲ್ಲ.
ಅದೇಕೋ ಸರೋಜಾ ತರಕಾರಿ ವ್ಯಾಪಾರವು ಒಂದು ತಿಂಗಳಿಂದ ಕಮ್ಮಿಯಾಗಿತ್ತು. ಎರಡು ಹೊತ್ತು ಊಟಕ್ಕೆ ಬೇಕಾಗುವ ರೇಷನ್ ಗೂ ತುಂಬಾ ಕಷ್ಟಪಡುವಂತಾಗಿತ್ತು. ಒಂದು ದಿನ ಸಂಜೆ ರೇಷನ್ ಅಂಗಡಿಯ ಮಾಲಿಕ ತನಗೆ ಬರಬೇಕಾದ ₹300 ಬಾಕಿ ಹಣವನ್ನು ವಸೂಲಿ ಮಾಡಲು ಬಂದಿದ್ದ. ಆ ವೇಳೆಗೆ ರೂಪ ಆಟವಾಡಲು ಹೋಗಿದ್ದಳು. ಕೈಯಲ್ಲಿ ಹಣವಿಲ್ಲದ ಸರೋಜಾ ದಿಕ್ಕೇ ತೋಚದಂತಾದಳು. ಅವರ ಎಲ್ಲಾ ಪ್ರಶ್ನೆಗೆ ಉತ್ತರವಿಲ್ಲದೆ ತಲೆ ತಗ್ಗಿಸಿ ನಿಂತಳು. ಕೋಪಗೊಂಡ ಅಂಗಡಿಯ ಮಾಲೀಕ ಬರೀ 300 ರೂಪಾಯಿಗೆ ಒಂದೇಟು ಕೆನ್ನೆಗೆ ಹೊಡೆದೇ ಬಿಟ್ಟ. ಇನ್ನು ಎರಡು ದಿನಗಳಲ್ಲಿ ಹಣ ವಾಪಸು ಮಾಡು ಎಂದು ಹೇಳಿ ಹೊರಟು ಹೋದ.
ಆಟ ಮುಗಿಸಿ ಮನೆಗೆ ಬಂದ ರೂಪಾ ಅಳುತ್ತಾ ಮೂಲೆಯಲ್ಲಿ ಕೂತ ತಾಯಿಯ ಬಳಿ ಹೋದಾಗ, ತಾಯಿಯ ಕೆನ್ನೆ ಕೆಂಪಾಗಿತ್ತು. ಕೆಂಪಾದ ತಾಯಿಯ ಕೆನ್ನೆ ರೂಪಾಗೆ ನೋಡಲಾಗಲಿಲ್ಲ. ಏನಾಯಿತೆಂದು ಅಮ್ಮನನ್ನು ಕೇಳಿದಾಗ, ಅಳುತ್ತಲೇ ನಡೆದ ಸಂಗತಿಯನ್ನು ಮಗಳಲ್ಲಿ ಹೇಳಿಕೊಂಡಳು. ಬರಿಯ ಬಾಕಿ ಹಣಕ್ಕಾಗಿ ತಾಯಿ ಕೆನ್ನೆ ಕೆಂಪಾಗುವವರೆಗೆ ಏಟು ತಿಂದಿದ್ದು ಮಗಳಿಗೆ ಸಹಿಸಲಾಗಲಿಲ್ಲ. ಆ ಸಮಯದಲ್ಲಿ ತಕ್ಷಣಕ್ಕೆ ಅವಳಿಗೆ ಕಂಡಿದ್ದು ಕೆಂಪಂಗಿಯ ಖಜಾನೆ. ತಾಯಿಯ ಕೆಂಪು ಕೆನ್ನೆಯ ಮುಂದೆ ಕೆಂಪಂಗಿಯ ಬಣ್ಣ ಮಸುಕಾಗಿತ್ತು. ಹುಂಡಿ ದುಡ್ಡನ್ನು ತೆಗೆದು ಕೂಡಲೇ ಅಂಗಡಿಗೆ ಹೋಗಿ ತಾಯಿಯ ಸಾಲ ತೀರಿಸಿದಳು. ಹಾಗೆಯೇ ನನ್ನ ತಾಯಿಯ ಕೆನ್ನೆಗೆ ಹೊಡೆದ ಪ್ರತೀಕಾರ ಮುಂದೆಂದಾದರೂ ತೀರಿಸುತ್ತೇನೆ ಎಂಬ ಭಾವ ಕಣ್ಣಲ್ಲೇ ತೋರಿಸಿ ಮನೆಗೆ ನಡೆದಳು. ಆ ಪುಟ್ಟ ಕೆಂಪು ಕಣ್ಣುಗಳು ಯಾರನ್ನಾದರೂ ನಡುಗಿಸುವಂತಿತ್ತು.
ಮಗಳು ಬಹಳ ದಿನಗಳಿಂದ ಕೆಂಪಂಗಿಗಾಗಿ ಕೂಡಿಟ್ಟ ಹಣ ಹೀಗೆ ಹೋಯಿತಲ್ಲ ಎಂದು ತಾಯಿ ಸರೋಜಗೆ ತುಂಬಾ ಬೇಸರವಾಯಿತು. ಆ ಮಗುವಿನ ಈ ಪುಟ್ಟ ಆಸೆಯನ್ನು ನನಗೆ ಈಡೇರಿಸಲು ಸಾಧ್ಯವಾಗಲಿಲ್ಲ ಎಂದು ಕೊರಗುತ್ತಾ ಕೂತಳು.
ಬಡತನದಲ್ಲಿ ಇಂತಹ ನೋವು, ಅವಮಾನ, ನಿರಾಸೆಗಳೆಲ್ಲ ಸ್ವಾಭಾವಿಕವಾಗಿತ್ತು. ಮತ್ತೆ ಮರುದಿನ ಹೊಸ ಮುಂಜಾನೆ ಮತ್ತದೇ ಬದುಕಿಗಾಗಿ, ಹೊಟ್ಟೆಗಾಗಿ ಹೋರಾಟಕ್ಕೆ ತಾಯಿ ಮಗಳಿಬ್ಬರೂ ಸಿದ್ಧರಾದರು. ಹಳೆ ನೋವುಗಳು ಹೃದಯದ ಮೂಲೆಯಲ್ಲಿ ಕೂತಿದ್ದರೂ, ನೋವು ನಿರಾಸೆಗಳು ಪದೇಪದೇ ಹೊರಬಂದು ವ್ಯಥೆ ಪಡುತ್ತಾ ಕೂರಲು ಮತ್ತು ಅದಕ್ಕೆ ಔಷಧ ಹಾಕಲು ಹಸಿದ ಹೊಟ್ಟೆ ಅವಕಾಶ ಕೊಡುತ್ತಿರಲಿಲ್ಲ. ಹಾಗಾಗಿ ಎಲ್ಲವನ್ನೂ ಬದಿಗಿಟ್ಟು ತಾಯಿ-ಮಗಳು ವರ್ತಮಾನದಲ್ಲಿ ಬದುಕುತ್ತಿದ್ದರು.
ಹೀಗೆ ತಾಯಿ-ಮಗಳು ಪ್ರತಿದಿನದಂತೆ ತರಕಾರಿ ವ್ಯಾಪಾರಕ್ಕೆ ಹೊರಟರು. ಹೋಗುತ್ತಾ ದಾರಿಯಲ್ಲಿ ತೋಟದ ಮಧ್ಯದಲ್ಲಿ ಬಹಳಷ್ಟು ಜನರು ಸೇರಿದ್ದು ಕಣ್ಣಿಗೆ ಬಿತ್ತು. ಏನಾಗಿರಬಹುದು ಎನ್ನುವ ಕುತೂಹಲದಲ್ಲಿ ನೋಡಿದರೆ, ಅಲ್ಲಿ ಯಾವುದೋ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಹಿಂದೆಂದೂ ಇದನ್ನೆಲ್ಲ ಕಂಡಿರದ ರೂಪಾಗಂತು ಬೇರೆ ಜಗತ್ತೇ ನೋಡಿದಂತಾಯಿತು. ಆ ದೊಡ್ಡ ದೊಡ್ಡ ಕ್ಯಾಮೆರಾ ಅಲ್ಲಿದ್ದ ಪಾತ್ರದಾರಿಗಳನ್ನೆಲ್ಲಾ ಬಿಟ್ಟಕಣ್ಣು ಬಿಟ್ಟಂತೆ ನೋಡತೊಡಗಿದಳು.
“ಇನ್ನೂ ಬಹಳಷ್ಟು ಕೇರಿಗೆ ತರಕಾರಿ ಮಾರೋಕೆ ಹೋಗುವುದಿದೆ ಬಾ ಹೊರಡೋಣ” ಎಂದು ತಾಯಿ ಎಷ್ಟು ಕರೆದರೂ ರೂಪಾ ಕಿವಿಗದು ಬೀಳಲಿಲ್ಲ.
ಜನಸಂದಣಿಯ ಮಧ್ಯದಲ್ಲಿ ನಿಂತ ತಾಯಿ ಮಗಳು, ಶೂಟಿಂಗ್ ನಲ್ಲಿ ಬ್ಯುಸಿ ಇದ್ದ ನಿರ್ದೇಶಕರ ಕಣ್ಣಿಗೆ ಬಿದ್ದರು. ತಕ್ಷಣ ನಿರ್ದೇಶಕರು ಅವರಿಬ್ಬರನ್ನು ಕರೆದು “ಏನು ಪುಟ್ಟ, ಆಕ್ಟಿಂಗ್ ಮಾಡ್ತೀಯಾ? ಏನು ನಿನ್ನ ಹೆಸರು?” ಎಂದು ಕೇಳಿದರು. “ನನ್ ಹೆಸರು ರೂಪಾ ಆಕ್ಟಿಂಗ್ ಮಾಡೋಕೆ ಇಷ್ಟ, ಆದರೆ ಹಿಂದೆಂದೂ ಇದೆಲ್ಲ ಕಂಡವಳಲ್ಲ ನಾನು” ಎಂದಳು. ಏನೂ ಮಾತನಾಡದ ಸರೋಜಾ ಬರೇ ಕಣ್ಣಿನಲ್ಲೇ ನೀನು ಮಾಡಬಲ್ಲೆ ಮಗಳೇ ಎಂಬ ಆತ್ಮವಿಶ್ವಾಸವನ್ನು ತುಂಬಿದಳು.
ಆಗ ನಿರ್ದೇಶಕರು “ಇರಲಿ ಬಿಡು ಪ್ರಯತ್ನ ಮಾಡು, ಈ ಚಿತ್ರದಲ್ಲೊಂದು ಜಮೀನ್ದಾರರ ಮೊಮ್ಮಗಳ ಪಾತ್ರ ಇದೆ. ನೀನು ಆ ಪಾತ್ರಕ್ಕೆ ಸರಿಯಾಗಿ ಹೊಂದುತ್ತಿ” ಎಂದರು. ಇದನ್ನು ಕೇಳಿದ ರೂಪಾಳ ಖುಷಿಗೆ ಪಾರವೇ ಇರಲಿಲ್ಲ. ಆ ಪಾತ್ರ ಮಾಡಬೇಕಾದ ಬಾಲಕಿ ಅನಾರೋಗ್ಯದ ಕಾರಣ ಬಂದಿರುವುದಿಲ್ಲ. ಚಿತ್ರದಲ್ಲಿ ಆ ಪಾತ್ರ ಬರೀ ಮೂರು ನಾಲ್ಕು ನಿಮಿಷ ಅಷ್ಟೇ ಇರುವುದರಿಂದ, ಹೆಚ್ಚೇನು ಡೈಲಾಗ್ ಇರಲಿಲ್ಲ. ಅಲ್ಲೇ ಪಕ್ಕದಲ್ಲಿ ಸಹಾಯಕ ನಿರ್ದೇಶಕರು ಡೈಲಾಗ್ ಹೇಳಿಕೊಟ್ಟು, ನಾಳೆ ಮುಂಜಾನೆ ಬನ್ನಿ ಎಂದರು. ಅದೇ ಉತ್ಸಾಹದಲ್ಲಿ ತಾಯಿ-ಮಗಳು ಅಲ್ಲಿಂದ ಹೊರಟು ಇನ್ನೆರಡು ಕೇರಿ ತರಕಾರಿ ವ್ಯಾಪಾರ ಮುಗಿಸಿ ಮನೆ ಕಡೆ ನಡೆದರು.
ರೂಪಾ ಮಾತ್ರ ಅದೇ ಶೂಟಿಂಗ್, ಅವಳಿಗೆ ಕೊಟ್ಟ ಡೈಲಾಗ್ ನಲ್ಲೇ ಮುಳುಗಿದ್ದಳು. ತಾಯಿ ಮಗಳಿಗೆ ಆ ರಾತ್ರಿ ತುಂಬಾ ದೊಡ್ಡದು ಎನ್ನಿಸಿತು. ಮುಂಜಾನೆ ಬೇಗ ಎದ್ದು ರೂಪಾ ತನ್ನಲ್ಲಿರುವ ಅಂಗಿಗಳಲ್ಲಿ ಕಡಿಮೆ ಹರಿದಿರುವ ಅಂಗಿಯನ್ನು ತೊಟ್ಟು, ಅಮ್ಮನೊಂದಿಗೆ ಶೂಟಿಂಗ್ ಜಾಗಕ್ಕೆ ಹೊರಟಳು. ದೂರದಲ್ಲಿ ನಿಂತ ರೂಪಾಳನ್ನು ಹತ್ತಿರ ಕರೆದು, ನಿನಗೆ ನಾವು ಬೇರೆ ಬಟ್ಟೆ ಕೊಡುತ್ತೇವೆ. ಅದನ್ನು ತೊಟ್ಟು, ಮೇಕಪ್ ಅಸಿಸ್ಟೆಂಟ್ ಹತ್ರ ಮೇಕಪ್ ಮಾಡಿಸ್ಕೊಂಡು ಬಾ ಎಂದು ಸಹಾಯಕ ನಿರ್ದೇಶಕರು ವಿವರಿಸಿದರು. ಸರಿಯೆಂದು ಒಳನಡೆದ ರೂಪಾಳಿಗೆ ಆಶ್ಚರ್ಯ ಕಾದಿತ್ತು. ರೂಪಾಳಿಗೆ ಅವರು ಕೊಟ್ಟಿದ್ದು ಕೆಂಪು ರೇಷ್ಮೆಯ ಅಂಗಿ. ಕೆಂಪಂಗಿ ನೋಡಿದ ರೂಪಾ ಕಾಲುಗಳು ನಿಲ್ಲಲೇ ಇಲ್ಲ. ಅಂದು ಕನಸಲ್ಲಿ ಕಂಡ ಕೆಂಪಂಗಿಯಂತೆಯೇ ಇದೆ ಎಂದು ಕುಣಿದಾಡಿದಳು. ಬಹಳ ಉತ್ಸಾಹದಿಂದ ಕೆಂಪಂಗಿಯ ತೊಟ್ಟು, ಮೇಕಪ್ ಮಾಡಿಸಿಕೊಂಡು ತಾಯಿಯ ಮುಂದೆ ಬಂದು ನಿಂತಳು.
ಮಗಳನ್ನು ರೇಷ್ಮೆಯ ಅಂಗಿಯಲ್ಲಿ ಕಂಡು ಅಮ್ಮನ ಕಣ್ಣು ಆನಂದ ಭಾಷ್ಪದಿ ತುಂಬಿತು. “ಸಾಕ್ಷಾತ್ ದೇವಿಯಂತೆ ಕಾಣುತ್ತಿದ್ದೀಯ” ಎಂದು ಮಗಳಿಗೆ ದೃಷ್ಟಿ ತೆಗೆದಳು. ನಂತರ ರೂಪಾ ತನ್ನ ಪಾತ್ರದ ಸರದಿಗಾಗಿ ಅಮ್ಮನ ಪಕ್ಕ ಕುಳಿತು ಕೆಂಪಂಗಿಯ ರಂಗನ್ನು ಆನಂದಿಸುತ್ತಾ ಕಳೆದಳು. ಹಾಗೆಯೇ ಕೆಲಸಮಯದ ನಂತರ ನಿರ್ದೇಶಕರು ರೂಪಾಳನ್ನು ಕರೆದಾಗ ಅವಳ ಪುಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿ ಈಚೆ ಬಂದಳು. ಅಷ್ಟು ಹೊತ್ತಿಗೆ ಹೊತ್ತು ಮುಳುಗುವ ಸಮಯವಾಗಿತ್ತು. ರೂಪ ಮತ್ತದೇ ಕೊಠಡಿಗೆ ಹೋಗಿ ಕೆಂಪಂಗಿಯನ್ನು ಬದಲಿಸಿ, ತನ್ನಂಗಿಯನ್ನು ಹಾಕಿಕೊಂಡಳು. ಕೆಂಪಂಗಿಯನ್ನು ಚೆನ್ನಾಗಿ ಮಡಚಿ, ಒಂದು ದಿನಕ್ಕೆ ರಾಜಕುಮಾರಿಯಂತೆ ಮೆರೆಸಿದ ಕೆಂಪಂಗಿಗೆ ಮುತ್ತಿಕ್ಕಿ, ಅಲ್ಲೇ ಇಟ್ಟು ಹೊರ ಬಂದಳು. ಅಸಿಸ್ಟೆಂಟ್ ಡೈರೆಕ್ಟರ್, ಸರೋಜಾ ಕೈಗೆ 500ರೂಪಾಯಿ ಹಣ ಕೊಟ್ಟರು. ತಾಯಿ-ಮಗಳು ಬಹಳ ಸಂತೋಷದಿಂದ ಮನೆ ಕಡೆ ನಡೆದರು. ದಾರಿಯಲ್ಲಿ ಹೋಗುವಾಗ ರೂಪಾಗೆ ತಾನಿನ್ನೂ ರೇಷ್ಮೆ ಅಂಗಿತೊಟ್ಟು ನಡೆಯುತ್ತಿದ್ದೇನೆನೋ ಎನ್ನುವ ಭಾವ. ಇನ್ನೊಂದೆಡೆ ತಾಯಿಗೆ ಒಂದು ದಿನದ ಮಟ್ಟಿಗಾದರೂ ಮಗಳ ಬಯಕೆಯನ್ನು ಆ ಭಗವಂತ ಈಡೇರಿಸಿದ ಎಂದು ದೇವರಿಗೆ ಧನ್ಯವಾದ ಹೇಳುತ್ತಾ ಮನೆ ತಲುಪಿದರು.
Leave a Reply