ಹೌದೇ.. ನೀನು ಹೆಣ್ಣು. ನೀನು ತಾಯಿ. ಸಹನೆಗೆ ಸ್ಫೂರ್ತಿ, ಕರುಣೆಯ ಶಿಖರ, ತ್ಯಾಗಕ್ಕೆ ತವರು. ಹಾಗಂತ ಈ ಕಿರೀಟ ನಿನ್ನನ್ನು ಕಟ್ಟಿ ಹಾಕದಿರಲಿ. ನೀನು ಹೊಟ್ಟೆಯಲ್ಲಿ ಹೊತ್ತು ತಿರುಗ ಬೇಕಾಗಿದ್ದು ಕನಸಿನ ಕೂಸನ್ನು. ಬೆಂಕಿಯ ಉಂಡೆಯನ್ನಲ್ಲ. ಇನ್ನೆಷ್ಟು ದಿನ ಬೆಳೆಸುವೆ ಒಡಲೊಳಗೆ ಬೆಂಕಿಯುಂಡೆಯ. ಹೊರಹಾಕಿ ಹಗುರಾಗೇ. ಇಲ್ಲವಾದರೆ ಆ ತಾಪಕ್ಕೆ ನಿನ್ನುದರದ ಅಂಗಾಂಗ ಕರಗೀತು. ಆಮೇಲೆನಿದೆ ಚರ್ಮದ ಹೊದಿಕೆಯಲ್ಲಿ? ಕೊನೆಗೆ ಅದೂ ಕಪ್ಪು ಉಂಡೆಯೇ.
ಮೋಡ ಕಟ್ಟಿದೆ, ಇನ್ನೇನು ಮಳೆಯಾಗಲಿದೆ. ಕಕ್ಕಿ ಬಿಡೆ ಹೊರಗೆ. ವರುಣ ದೇವನು ವರ್ಷಧಾರೆಯ ಸುರಿಸಿ, ತಣ್ಣಗಾಗಿಸುವನು ಜ್ವಾಲೆಯ. ಅದೆಷ್ಟೋ ಬಾರಿ ಜ್ವಾಲಾಮುಖಿಯಾಗಿ ಹೊರಬರಲು ಹವಣಿಸಿದಾಗೆಲ್ಲ, ಮತ್ತೆ, ಮತ್ತೆ ಏಕೆ ನುಂಗಿ ಹುದುಗಿರಿಸಿರುವೇ? ನಿನ್ನ ನೀನೇ ಸುಟ್ಟು ಇನ್ನಾವ ತ್ಯಾಗಕ್ಕೆ ಮಣೆ ಹಾಕ ಹೊರಟಿರುವೆ? ಯಾಕೀ ಕರುಣೆ? ಯಾಕೀ ಸಹನೆ? ಇನ್ನೆಷ್ಟು ದಿನ ಈ ವೇದನೆ?
ಇಷ್ಟೆಲ್ಲಾ ಕುದಿ ಒಳಗಡಗಿರಲೂ, ಹೇಗೆ ತಾಯಿ ನಿನ್ನದಿನ್ನೂ ತಂಪು ಮಡಿಲು. ಪ್ರತಿ ಬಾರಿ ನಿನ್ನ ಮಡಿಲಲ್ಲಿ ಮಲಗಿದಾಗಲೂ, ಅದೇ ತಂಪು. ಹೊಂಗೆ ಮರದಡಿಯನ್ನು ಮೀರಿಸುವ ತಂಪು. ಹೇಗೆ ಸಾಧ್ಯ ತಾಯಿ ಇದು. ಬೆಂಡಾಗಿ ಬಳಲಿರುವ ಭಾವ ಬೆರೆತಿಲ್ಲ ನಿನ್ನ ಭರವಸೆಯ ಬದುಕಲ್ಲಿ. ಕೆಂಡದ ಹಾಸಿಗೆ ನಿನ್ನೊಳಗಿದ್ದರೂ, ಲೋಕದ ಕಷ್ಟಕ್ಕೆ ನೀ ಕಿವಿಗೊಡುವೆ. ಮನ ಹಗುರಾಗಿಸುವೆ. ಅದೆಷ್ಟು ಶಕ್ತಿ ಅಡಗಿಹುದು ನಿನ್ನಲಿ.
ಅಂದು ಸುಟ್ಟೆ ನಿನ್ನೆಲ್ಲಾ ಕನಸ್ಸನ್ನು. ಇಂದು ನೀ ಸುಡ ಹೊರಟಿಹೆ ನಿನ್ನನ್ನೇ ನೀನು. ಇದೆಂತಹ ಹೋರಾಟ ನಿನ್ನದು? ನೀನಳಿದು, ಯಾರುಳಿವಿಗಾಗಿ ಹೋರಾಡುತ್ತಿರುವೆ? ಹೊಟ್ಟೆಯ ಹುಣ್ಣನ್ನೂ ಕಡೆಗಣಿಸಿ, ಹಸಿರೆದೆಯಿಂದ ಹಾಲುಣಿಸಿ, ಹಸಿವಾರಿಸಿ, ಕಾದೆ ನೀ ಇನ್ನೊಂದು ಕಾಯವ. ಆದರೆ ಜೀವಕ್ಕೆ ಕಾವು ಕೊಡೇ, ಜಡ್ಡು ಜಡಕ್ಕಲ್ಲ. ಹೂವಿನಂತಹ ಮುಖ ನೋಡಿ ಮುಳ್ಳನ್ನು ಕಡೆಗಣಿಸಿ, ಸೂರೆತ್ತರಕೆ ಬೆಳೆಸಿ, ಗುಡಿ ಸೇರಲಿಲ್ಲ. ಮುಡಿ ಏರಿಸಲಿಲ್ಲ. ಆದರೂ ನೀ ಕಿತ್ತೊಗೆಯಲಿಲ್ಲ. ಯಾವುದರ ಪ್ರೀತಿ ಬಂಧಿಸಿಹುದು ಹೀಗೆ?
ಹೌದು, ನನಗೆ ಗೊತ್ತಿದೆ. ನಿನಗೆ ಸುಡುತಿದೆ. ಗಾಯ ಹಸಿ ಇದೆ. ಉರಿಯುತ್ತೆ. ಅದಕ್ಕೆ ತಾನೇ, ಎಲ್ಲರಿಗೂ ಬಿಸಿ-ಬಿಸಿ, ರುಚಿ-ರುಚಿ ಬಡಿಸಿ, ನಿನಗೆ ಎಷ್ಟೇ ಹಸಿವಿದ್ರೂ, ತಣ್ಣಗಿನ ನೀರು ಕುಡಿದು ತಂಪಾಗುವ ಪ್ರಯತ್ನ ಮಾಡೋದು. ಆದ್ರೆ ಹಾಗೆಲ್ಲ ತಂಪಾಗಲ್ಲ್ವೇ. ಅದೆಲ್ಲಾ ನಿನ್ನ ಭ್ರಮೆ ಅಷ್ಟೇ.
ಹೊತ್ತು ಮುಳುಗುವ ಮುನ್ನ ನೀ ಹೊತ್ತ ಬೆಂಕಿಯ ಉಂಡೆ ಹೊತ್ತಿ ಉರಿಯುವುದು ನಿಶ್ಚಿತ. ಅಂದು ನಿನ್ನ ಹಾಗೂ ನಿನ್ನವರನ್ನು ನುಂಗುವುದರೊಂದಿಗೆ, ನಂಬಿಕೆಯ ನಾಶವಾಗುವುದೇ. ಅದಕ್ಕಿಂತ ಮೊದಲು ನೀನು ಸಿಡಿದೆದ್ದು ಮಹಾಕಾಳಿಯಾಗೇ. ಒಮ್ಮೆ ಉಕ್ಕಿ ಹೊರಬಂದು, ತುಸುಹೊತ್ತು ಹೊತ್ತಿ ಉರಿದು, ವಿಷಬೀಜಗಳನ್ನೆಲ್ಲ ಬೇರುಸಹಿತ ಸುಟ್ಟು, ಆರಿ ತಣ್ಣಗಾಗಲಿ ಬಿಡು. ಆಗಲೇ ನಿನ್ನಂತಹ ಹೆಂಗರಳಿಗೆ ನೆಮ್ಮದಿ. ಚೆನ್ನಾಗಿ ಮಳೆ ಬಂದು ನಿಂತಾಗ ಭುವಿಯಲ್ಲಿ ಒಂದು ತರಹದ ಮೌನ, ತಂಪು, ನೆಮ್ಮದಿಯ ಉಸಿರಿನ ಭಾವ ಮೂಡುತ್ತಲ್ಲ! ಅದೇ ಭಾವ ಮೇಳ ನಿನ್ನೊಳಗೆ ಮೊಳಗುವುದೇ. ಎಲ್ಲರೊಟ್ಟಿಗಿದ್ದೂ ಒಂಟಿಯಾಗಿ ಬದುಕಿ, ಎಲ್ಲದ್ದಕ್ಕೂ ಎಲ್ಲೇ ಹಾಕಿ ನಡೆದದ್ದು ಸಾಕು. ನಿನ್ನ ಅಸಹಾಯಕತೆ ಎಂದೂ ಅವಕಾಶವಾದಿಗಳಿಗೆ ಏಣಿ ಆಗದಿರಲಿ. ಹೆಡೆಯಂತಹ ಜಡೆಯಿಂದ ಒಮ್ಮೆ ಬುಸುಗುಟ್ಟಿ, ನೀ ಅಬಲೆಯಲ್ಲ, ನಿನ್ನ ಸಮಬಲಕ್ಕೆ ಯಾರೂ ನಿಲ್ಲಲಾರೆಂಬ ಕಹಳೆ ಊದೇ. ಬೆಚ್ಚಿ ಬೆಚ್ಚಿ ಬದಿ ಸೇರಿ, ಬೆಂದ ಜೀವಗಳಿಗೆ ನಿನ್ನ ಒಂದು ದಿಟ್ಟ ಹೆಜ್ಜೆ ದಾರಿದೀಪವಾಗಲಿ..
Leave a Reply