ನನ್ನಿರುವಿಕೆಯ ಮೂಲ ಕಾರಣವ ಮರೆತು; ಮೆರೆಯುತಿಹ ಮನುಜ ನಾನು. ಅರಿವು ಮಾಡು ತಾಯಿ; ನೊರೆಯಾರುವ ಮುನ್ನ. ಶರವೇಗದಿ ಓಡುವ ಜಗದೊಡನೆ ಸ್ಪರ್ಧಿಸಲು ನನಗೆ ಸರಿಸಾಟಿ ಯಾರಿಲ್ಲೆಂಬ ಅಹಂನಿಂದ ಮಂದ ಬೆಳಕಲ್ಲೂ, ಕಡುಕತ್ತಲಿನಲ್ಲೂ, ಹಚ್ಚ ಹಸುರಿನ ನಡುವೆ, ಬೆಟ್ಟ-ಗುಡ್ಡಗಳ ಕುಟ್ಟಿ ಕೆಡವಿ ಕಾಣದ ಕನಸ ಗೆಲ್ಲಲು ಓಡಿದ್ದೇನೆ. ಈ ಓಟದಲ್ಲಿ ಅದೆಷ್ಟೋ ಜೀವಿಗಳ ವಿನಾಶದ ಅಂಚಿಗೆ ಕಾರಣವಾಗಿದ್ದೇನೆ. ಇಂತಹ ಪಯಣದಲ್ಲಿ ಎಂದಾದರೊಮ್ಮೆ ಎಲ್ಲವನ್ನು ಗೆಲ್ಲುವೆನೆಂಬುದು ಬರಿಯ ನನ್ನ ಭ್ರಮೆ ಅಷ್ಟೇ. ಇದು ವಿನಾಶದೆಡೆಗಿನ ಓಟವೇ ಹೊರತು ಗೆಲುವಿಗಲ್ಲ ಎನ್ನುವುದು ನನ್ನ ಅನುಭವಕ್ಕೆ ಬಂದಿದೆ. ಇಲ್ಲಿ ಎಷ್ಟೋ ಬಾರಿ ಓಡಿ-ಓಡಿ ದಣಿದು ನಿಲ್ಲುವ ಪ್ರಯತ್ನ ಮಾಡಿ ವಿಫಲಗೊಂಡಿದ್ದೇನೆ. ಒಮ್ಮೆ ಎಲ್ಲಾದರೂ ನಿಂತರೆ ಹುಲ್ಲುಕಡ್ಡಿಯಂತಿಹ ನನ್ನನ್ನು ತುಳಿದು ಮಣ್ಣಾಗಿಸುವರೆಂಬ ಭಯದಿಂದ ಮತ್ತೆ ಮತ್ತೆ ಕುಂಟುತ್ತಾ, ಕುಂಟುತ್ತಾ ನಡೆದಿದ್ದೇನೆ.. ಓಡಿದ್ದೇನೆ…
ಇನ್ನು ನನ್ನಿಂದಾಗದು ತಾಯಿ. ಮನಸ್ಸು ಒಪ್ಪುತ್ತಿಲ್ಲ. ಈ ಪಾಪದ ಓಟದ ಹಿನ್ನೋಟ ಮನಃಶಾಂತಿ, ಸ್ವಾಭಿಮಾನವನ್ನೆಲ್ಲಾ ಕಿತ್ತು ತಿನ್ನುತ್ತಿದೆ.ಪ್ರತಿ ಕ್ಷಣ ಅಪರಾಧಿ ಪ್ರಜ್ಞೆ ಕಾಡುತ್ತಿದೆ. ಈ ಎಲ್ಲದಕ್ಕೂ ಅಂತ್ಯ ಹಾಡಬೇಕಾಗಿದೆ. ಇಲ್ಲಿ ಮಣ್ಣಾಗುವ ಮೊದಲು ಬದುಕಿನ ನನ್ನ ಮೂಲ ಕರ್ತವ್ಯದ ಅರಿವು ಕಾಣಬೇಕಾಗಿದೆ. ಬರಿಯ ತಿಂದುಂಡು ಓಡಲು ಬಂದವಳಲ್ಲ ನಾನು ಎಂಬುದಂತೂ ಸತ್ಯ. ಹಾಗಾದರೆ ಮುಂದೇನು? ನನ್ನಿ ಬದುಕಿನ ಅಂತ್ಯದೊಳಗೆ ನನ್ನಿಂದ ಆಗಬೇಕಾದ ಕಾರ್ಯಗಳವುವು? ಖಂಡಿತವಾಗಿ ನಾನು ಈ ಭೂಮಿಯ ಮೇಲೆ ಹುಟ್ಟಿರುವುದು ಯಾವುದೋ ಒಂದು ಕಾರಣದಿಂದ ಎನ್ನುವುದು ಸತ್ಯವಾದರೆ ಆ ಕಾರಣ ಯಾವುದು ಎಂದು ಅರಿಯುವುದು ಹೇಗೆ? ಈ ಅರಿವಿಕೆಯ ಜ್ಞಾನ ನನ್ನಲ್ಲಿ ಮೂಡಿಸು ತಾಯಿ. ಭೌತಿಕ ಪ್ರಪಂಚದ ಹಗಲುಗನಸಿನಲ್ಲಿ ಬದುಕಿರುವ ನನಗೆ ಒಳಗಣ್ಣನ್ನು ತೆರೆದು ನೋಡುವ ಶಕ್ತಿ ಕೊಡು. ತಪ್ಪು ಸರಿಗಳ ವ್ಯತ್ಯಾಸ ತಿಳಿಸು. ಇಲ್ಲಿಯವರೆಗೆ ಮುಂದಿನ ಪೀಳಿಗೆಗೆ ಮಾದರಿಯಾಗುವಂತಹ ಯಾವ ಕಾರ್ಯವೂ ನನ್ನಿಂದಾಗಲಿಲ್ಲ. ಇನ್ನಾದರೂ ಆ ಮಾರ್ಗದೆಡೆಗೆ ನಾನು ನಡೆಯುವ ದಾರಿ ತೋರಿಸು. ಎಲ್ಲವನ್ನೂ, ಎಲ್ಲರನ್ನೂ ಕೆಡವಿ ಬದುಕಿದ್ದು ಸಾಕು. ಇನ್ನುಳಿದ ದಿನಗಳಾದರೂ ಉಳಿಸಿ, ಬೆಳೆಸುವ ಪಥದ ನಕ್ಷೆಗೆ ಪ್ರಥಮ ಹೆಜ್ಜೆ ಕೈಹಿಡಿದು ನಡೆಸು ತಾಯಿ.
Leave a Reply