ನಾನೊಂದು ಹಣ್ಣೆಲೆ. ನನ್ನವರೊಂದಿಗೆ ನನ್ನದಿಂದು ಕೊನೆಯ ದಿನ. ಮರದಿಂದ ಕಳಚಿ ಧರೆಗುರುಳುವ ದಾರಿಯಲ್ಲಿ, ಕೊನೆಯ ದೀರ್ಘ ಉಸಿರನೆಳೆಯುವ ಘಳಿಗೆಯಲ್ಲಿ, ಜೀವನದ ಹಿನ್ನೋಟದ ಕೆಲವು ತುಣುಕುಗಳು ಕಣ್ಣಮುಂದೆ ಬರತೊಡಗಿದೆ.
ನಮ್ಮದು ಬಹಳ ಪುರಾತನ, ದೊಡ್ಡ ತುಂಬು ಕುಟುಂಬ. ನಾವೆಲ್ಲರೂ ಇಲ್ಲಿ ಒಟ್ಟಾಗಿ ಒಗ್ಗಟ್ಟಿನಿಂದ ಬಾಳುತ್ತಿದ್ದೆವು. ನಮ್ಮಲ್ಲಿನ ಸಮಾನತೆ ಮತ್ತು ಸಹಬಾಳ್ವೆ ಬಣ್ಣಿಸಲು ಅಸಾಧ್ಯ. ಅಂದು ನಾನು ಹುಟ್ಟಿದ ದಿನ ನಮ್ಮ ಮನೆಯಲ್ಲಿ ಎಲ್ಲರ ಮುಖ ಹರ್ಷದಿಂದ ಹೊಳೆಯುತ್ತಿತ್ತು. ಎಲ್ಲೆಲ್ಲೂ ಹಬ್ಬದ ಸಡಗರ, ಹಸಿರು ತೋರಣ, ಚಪ್ಪರ ಹಾಸಿತ್ತು. ರವಿಯ ರಶ್ಮಿ ನನ್ನ ಮೇಲೆ ಬಿದ್ದಾಗ ಮೈಯೆಲ್ಲಾ ಪುಳಕಿತವಾಗಿ ಇನ್ನಷ್ಟು ಪುಟಿದೆದ್ದಿದ್ದೆ. ಮೊಗ್ಗಿನಂತೆ ಇದ್ದ ನಾನು ದಿನ ಕಳೆದಂತೆ ಹಿಗ್ಗುತ್ತಾ ಚಾಚಿ ಬೆಳೆದೆ. ಗಾಳಿ, ಬೆಳಕು, ನೀರು ನಾಡಿಯ ಜೀವದ್ರವ್ಯವಾಗಿತ್ತು.
ನಾವಷ್ಟೇ ಅಲ್ಲದೆ, ಅದೆಷ್ಟೋ ಇತರೆ ಜೀವಿಗಳು ನಮ್ಮ ಮನೆಮನಗಳಲ್ಲಿ ಆಶ್ರಯ ಪಡೆದಿದ್ದವು. ಮೊದಮೊದಲು ಇರುವೆ, ಲೋಳೆಹುಳುಗಳು, ಇತರೆ ಕೀಟಗಳು ನನ್ನ ಮೇಲೆ ಓಡಾಡುವಾಗ ತುಂಬಾ ಕಚಗುಳಿಯ ಅನುಭವವಾಗುತ್ತಿತ್ತು. ನಂತರದ ದಿನಗಳಲ್ಲಿ ಅವುಗಳ ತಿರುಗಾಟ ಅಭ್ಯಾಸವಾಗುತ್ತಾ ಬಂತು. ಹಲವು ಬಾರಿ ಪುಟ್ಟ ಪುಟ್ಟ ಜೀವಿಗಳು ನನ್ನ ಹಿಂದೆ ಬಚ್ಚಿಟ್ಟುಕೊಂಡು ಅವುಗಳ ಜೀವ ರಕ್ಷಣೆ ಮಾಡಿಕೊಂಡ ಕ್ಷಣಗಳು ಇನ್ನೂ ಕಣ್ಣು ಕಟ್ಟಿದಂತಿದೆ.
ಮಳೆ ಬಂದಾಗ ನನಗೆ ಹರುಷವೋ ಹರುಷ. ಮಳೆಯಲ್ಲಿ ಮೈಯಲ್ಲಿದ್ದ ಧೂಳು, ಹೊಗೆ ಎಲ್ಲಾ ಕೊಚ್ಚಿ ಹೋಗಿ, ಇನ್ನಷ್ಟು ಹೊಳೆಯುತ್ತಿದ್ದೆ. ಮಳೆ ಹನಿಗಳು ನಮ್ಮವರನ್ನೆಲ್ಲರನ್ನೂ ನೃತ್ಯ ಮಾಡಿಸುತ್ತಿತ್ತು. ದುಂಬಿ, ಕೋಗಿಲೆಗಳ ಸಂಗೀತೋತ್ಸವ ನಮ್ಮ ಕುಣಿತಕ್ಕೆ ಇನ್ನಷ್ಟು ಮೆರುಗು ಕಟ್ಟುತ್ತಿದ್ದ ದಿನಗಳು ಮರೆಯಲು ಸಾಧ್ಯವೇ ಇಲ್ಲ. ಪತಂಗಗಳು ಮಕರಂದ ಹೀರಲು ಬಂದಾಗ, ಆಗೊಮ್ಮೆ ಈಗೊಮ್ಮೆ ರೆಕ್ಕೆಯಲ್ಲಿ ಬಡಿದು ನನ್ನ ಮಾತನಾಡಿಸಿ ಹೋಗುತ್ತಿತ್ತು. ಕುಟುಕು ತರಲು ತಾಯಿ ಹಕ್ಕಿ ಗೂಡಿಂದ ಹಾರಿ ಹೋದಾಗ, ಆಗ ತಾನೇ ಕಣ್ಣು ತೆರೆದ ಮರಿ ಹಕ್ಕಿಗಳಿಗೆ ಭಯವಾಗದಂತೆ ನಾನು ಜೊತೆಯಾಗಿ, ನನ್ನ ನಾನೇ ಬೀಸಣಿಗೆ ಮಾಡಿ ತಂಗಾಳಿಯ ಬೀಸುತ್ತಿದ್ದೆ.
ಸೂರ್ಯನ ಕಿರಣ, ಗಾಳಿ, ನೀರಿನೊಂದಿಗಿನ ಪ್ರತಿದಿನದ ಜುಗಲ್ ಬಂದಿಗೆ ಇಂದು ನನ್ನ ಕೊನೆಯ ರಾಗ. ನನ್ನುಳಿದ ಸಾರವನ್ನು ಮಣ್ಣೊಳಗೆ ಸೇರಿಸಿ, ಮಣ್ಣಿನ ಋಣವನ್ನು ತೀರಿಸ ಹೊರಟಿರುವೆ. ಹಣ್ಣೆಲೆಯಾದ ನಾನು, ಚಿಗುರೆಲೆಗೆ ಚಿಗುರಲು ಎಡೆ ಮಾಡಿ ಕೊಡಬೇಕಾದದ್ದು ನನ್ನ ಕರ್ತವ್ಯ. ಬದುಕಿನ ಪ್ರತಿ ಕ್ಷಣವೂ ಬಹಳ ಸಂತಸದಿಂದ, ತೃಪ್ತಿಯಿಂದ ಅಳಿಲು ಸೇವೆಯೊಂದಿಗೆ ಕಳೆದಿದ್ದೇನೆಂಬ ನೆಮ್ಮದಿಯ ಉಸಿರಿನಿಂದ ಧರೆಗುರುಳುತ್ತಿದ್ದೇನೆ.
Leave a Reply