ಕಾರು ಮನೆ ಮುಂದೆ ಬಂದು ನಿಂತಿತು. ಕಾರಿನಿಂದ ಪ್ರಶಾಂತ್ ತನ್ನ ಡ್ರೈವರ್ ಸಹಾಯದಿಂದ ಇಳಿದ. ವರ್ಷ ೭೦ ದಾಟಿತ್ತು, ಹಾಗಾಗಿ ಮಂಡಿ ಕೀಲು ಸವೆದು, ನಡೆಯುವುದು ಕಷ್ಟವಾಗಿತ್ತು. ಮನೆಯ ಎದುರು ಗೀತಾಳ ಸ್ನೇಹಿತರು ನಿಂತಿದ್ದರು. ಪ್ರಶಾಂತ್ನನ್ನು ನೋಡಿ ಅವರಲ್ಲೊಬ್ಬ “ಇದ್ದಾಗ ಕಾಣಲಿಲ್ಲ, ಹೋದ ಮೇಲೆ ಹೆಣ ನೋಡಲು ಬಂದಿದ್ದಾನೆ ನೋಡು” ಎಂದು ಕೊಂಚ ಪ್ರಶಾಂತನಿಗೆ ಕೇಳುವಂತೆಯೇ ಆಡಿಕೊಂಡ. ಪ್ರಶಾಂತ್ ಕಿವಿಗೆ ಚೆನ್ನಾಗಿಯೇ ಬಡಿಯಿತು, ಆದರೆ ಅವರು ಆಡಿದ ಮಾತು ತಪ್ಪೆನ್ನಿಸಲಿಲ್ಲ. ತನ್ನ ಹೆಂಡತಿ ಗೀತಾಳನ್ನು ನೋಡಲು ಊರುಗೋಲಿನ ಸಹಾಯದಿಂದ ಬೇಗ ಬೇಗ ಮನೆ ಒಳಗೆ ನಡೆದ. ಕೋಣೆಯಲ್ಲಿ ಗೀತಾಳ ಹೆಣ ಮಲಗಿಸಿದ್ದರು. ಮಗ ಮತ್ತು ಮಗಳು ತಾಯಿ ಪಕ್ಕದಲ್ಲಿ ಕೂತು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಮೊಮ್ಮಕ್ಕಳದ್ದು ಇನ್ನು ಚಿಕ್ಕ ವಯಸ್ಸು. ಕೋಣೆ ಮೂಲೆಯಲ್ಲಿ ಮೂಕವಿಸ್ಮಿತರಾಗಿ ಕುಳಿತಿದ್ದವು. ಪ್ರಶಾಂತ್ ಕೋಣೆ ಒಳಗೆ ಬಂದವನೇ ಗೀತಾಳ ಬಳಿ ಬಂದು ದುಃಖ ಎಷ್ಟು ಬಿಗಿ ಹಿಡಿದು ಕೂತರೂ, ಕಟ್ಟೆ ಒಡೆದ ನೀರಂತೆ ಜೋರಾಗಿ ಹರಿಯತೊಡಗಿತು.
ಇತ್ತ ಮಗ, ಅಪ್ಪನ ಬಳಿ ಬಂದು, “ಸತ್ತ ಮೇಲೂ ನೀನು ಅವಳ ಮುಖ ನೋಡಲು ಬರುವುದು ಅಮ್ಮನಿಗೆ ಇಷ್ಟವಿರಲಿಲ್ಲ, ಆದರೂ ಹೇಗೋ ವಿಷಯ ತಿಳಿದು ಬಂದಿದ್ದೀಯಾ. ಆದಷ್ಟು ಬೇಗ ಹೊರಡು ಮುಂದಿನ ಕಾರ್ಯ ಮಾಡಬೇಕಾಗಿದೆ ” ಎಂದ. ಸ್ವಂತ ಮಗನ ಬಾಯಿಯಿಂದ ಈ ಮಾತುಗಳನ್ನು ಕೇಳಿ, ನಾನಿನ್ನೂ ಯಾರಿಗಾಗಿ ಬದುಕಿದ್ದೇನೆ ಈ ಭೂಮಿಯ ಮೇಲೆ ಎಂಬ ಪ್ರಶ್ನೆ ಪ್ರಶಾಂತನಿಗೆ ಮತ್ತೆ ಮನದಾಳದಿಂದ ಕೇಳಿಸಿತು.
ಬದುಕಿದ್ದಾಗ ಗೀತಾಳ ಯಾವ ಕಷ್ಟದಲ್ಲೂ ಕೈ ಹಿಡಿಯದ ಪ್ರಶಾಂತ್ ಸತ್ತ ಹೆಣದ ಕೈ ಹಿಡಿದು “ನನ್ನ ಕ್ಷಮಿಸು ಗೀತಾ ” ಎಂದು ಒಮ್ಮೆ ಜೋರಾಗಿ ಅತ್ತು ಕೋಣೆಯಿಂದ ಹೊರನಡೆದ. ಅಲ್ಲೇ ಹಾಲ್ ನಲ್ಲಿ ಇದ್ದ ಗೀತಾಳ ಚಿಕ್ಕ ಭಾವಚಿತ್ರ ಪ್ರಶಾಂತ್ ಕಣ್ಣಿಗೆ ಬಿತ್ತು. ಭಾವಚಿತ್ರ ಹಿಡಿದು ಪಶ್ಚಾತಾಪ, ದುಃಖ ಎಲ್ಲಾ ಭಾವಗಳನ್ನು ಹೊತ್ತು ಹೊರನೆಡೆದು ಕಾರನ್ನೇರಿದ. ಗೀತಾಳ ಭಾವಚಿತ್ರ ಹಿಡಿದು ಕಾರಿನಲ್ಲಿ ಕೂತ ಪ್ರಶಾಂತ್, ತನ್ನ ಕಳೆದು ಹೋದ ಜೀವನದ ನೆನಪುಗಳಲ್ಲಿ ಮುಳುಗಿದ.
ಪ್ರಶಾಂತ್ ನೀಲಕಂಠ ರಾವ್ ಅವರ ಒಬ್ಬನೇ ಮಗ, ಹುಟ್ಟಿಂದ ಎಲ್ಲಾ ಅನುಕೂಲವನ್ನೂ ಹೊಂದಿದ್ದ. ನೀಲಕಂಠ ರಾವ್ ಅವರದ್ದು ಬಹುದೊಡ್ಡ ಗಾರ್ಮೆಂಟ್ ಇತ್ತು. ಮಗ ನಮ್ಮ ಗಾರ್ಮೆಂಟ್ ನೋಡಿಕೊಂಡರೆ ಸಾಕು, ಅವನೇನು ಡಾಕ್ಟರ್, ಇಂಜಿನಿಯರ್ ಆಗಬೇಕಾಗಿಲ್ಲ ಎಂದು ಅವರು ಯಾವಾಗಲೂ ಅಂದುಕೊಳ್ಳುತ್ತಿದ್ದರು. ಹಾಗೆಯೇ ನೀಲಕಂಠ ರಾವ್ ಅವರು ಬಹಳ ಸರಳ ವ್ಯಕ್ತಿ. ಗಾರ್ಮೆಂಟಿನ ಎಲ್ಲಾ ಕೆಲಸಗಾರರನ್ನೂ ತನ್ನ ಮನೆಯವರಂತೆ ನೋಡಿಕೊಳ್ಳುತ್ತಿದ್ದರು. ಆದರೆ ಮಗ ಪ್ರಶಾಂತನಿಗೆ ಈ ಗಾರ್ಮೆಂಟಿನಲ್ಲಿ ಸ್ವಲ್ಪವೂ ಆಸಕ್ತಿ ಇರಲಿಲ್ಲ. ಸದಾ ಅವನಿಗೆ ಸಾಹಿತ್ಯ, ಕಥೆ ಬರೆಯುವುದು, ಸಿನಿಮಾ ಮಾಡಬೇಕು ಇದೇ ಯೋಚನೆ. ನೀಲಕಂಠ ರಾವ್ ಮಗನ ಆಸೆಗೆ ಎಂದೂ ಬೇಡವೆನ್ನಲಿಲ್ಲ. ಬದಲಿಗೆ ತಾನೇ ಹಣ ಹೂಡಿಕೆ ಮಾಡಿ ಮಗನಿಗೆ ತನ್ನ ಮೊದಲ ಚಲನಚಿತ್ರ ಮಾಡಲು ಪ್ರೋತ್ಸಾಹಿಸಿದರು. ಹೀಗೆ ಪ್ರಶಾಂತ್ ಬಣ್ಣದ ಜಗತ್ತಿಗೆ ಕಾಲಿರಿಸಿದ.
ಪ್ರತಿಭಾನ್ವಿತನಾಗಿದ್ದ ಪ್ರಶಾಂತನನ್ನು ಬಣ್ಣದ ಲೋಕ ಬಹುಬೇಗ ಯಶಸ್ಸಿನ ಉತ್ತುಂಗಕ್ಕೆರಿಸಿತು. ಬಣ್ಣದ ಬದುಕು ಪ್ರಶಾಂತನನ್ನು ಸಂಪೂರ್ಣ ಬದಲಾಯಿಸಿತು. ಬೇರೆ ಮನೆ ಮಾಡಿ ತಾನು ಹೆಚ್ಚಾಗಿ ಒಂಟಿಯಾಗಿ ಬದುಕಲು ಆರಂಭಿಸಿದ. ಆಗಾಗ ತಿಂಗಳಿಗೊಮ್ಮೆ ಅಪ್ಪನನ್ನು ಮಾತನಾಡಿಸಲು ಬರುತ್ತಿದ್ದ. ನೀಲಕಂಠ ರಾವ್ ಅವರಿಗೆ ಮಗನದೇ ಚಿಂತೆ. ಇದ್ದ ಒಬ್ಬ ಮಗ ಕೈ ತಪ್ಪಿ ಹೋಗುತ್ತಿದ್ದಾನಲ್ಲ ಎಂದು.
ಇತ್ತ ಗೀತಾ ತಂದೆ ತಾಯಿ ಇಲ್ಲದ, ಅನಾಥಾಶ್ರಮದಲ್ಲಿ ಬೆಳೆದ ಹುಡುಗಿ. MBA ಪದವೀಧರೆಯಾಗಿದ್ದು, ನೀಲಕಂಠ ರಾವ್ ಅವರ ಗಾರ್ಮೆಂಟ್ ನಲ್ಲಿ ಕೆಲಸಮಾಡುತ್ತಿದ್ದಳು. ಗೀತಾ ಬಹಳ ಸರಳ, ಸುಂದರ ಮತ್ತು ಮುಗ್ದ ಹುಡುಗಿ. ನೀಲಕಂಠನ್ ರಾವ್ ಅವರಿಗೆ ಗೀತಾಳ ನಡೆ ನುಡಿ ಕೆಲಸದ ವೈಖರಿ ತುಂಬಾ ಇಷ್ಟ. ಅವಳನ್ನು ಸ್ವಂತ ಮಗಳಂತೆ ನೋಡಿಕೊಳ್ಳುತ್ತಿದ್ದರು. ಒಂದು ದಿನ ಹೀಗೆ ಆಫೀಸ್ನಲ್ಲಿ ಕುಳಿತು ಮಗನ ಬಗ್ಗೆ ದೀರ್ಘ ಆಲೋಚನೆಯಲ್ಲಿ ಮುಳುಗಿದ್ದಾಗ, ಅದೇ ಸಮಯದಲ್ಲಿ ಗೀತಾ ಚೇಂಬರ್ ಒಳಗೆ ಬರಲು ಅನುಮತಿ ಕೇಳುತ್ತಾಳೆ. ಮಗನ ಆಲೋಚನೆಯಲ್ಲಿದ್ದ ನೀಲಕಂಠ ರಾವ್ಗೆ ತಕ್ಷಣ ಗೀತಾ ದೇವತೆಯಂತೆ ಕಂಡಳು. ಅದೇಕೋ ಏನೋ ಅವರಿಗೆ ಮರುಕ್ಷಣವೇ ಗೀತಾಳೇ ನನ್ನನ್ನು ಈ ಚಿಂತೆಯಿಂದ ದೂರ ಮಾಡಬಲ್ಲವಳು ಎಂದೆನಿಸಿತು. ತಡ ಮಾಡದೆ ಗೀತಾಳನ್ನು ಒಳಗೆ ಕರೆದು ಕೂರಿಸಿ, “ಗೀತಾ ನಿನ್ನಲ್ಲಿ ಒಂದು ವಿಚಾರ ಮಾತಾಡಬೇಕು” ಎಂದು ಮಾತು ಶುರು ಮಾಡಿದರು. “ನೀನು ನನ್ನ ಮಗನನ್ನು ಮದುವೆಯಾಗಿ ನನ್ನ ಮನೆ ಬೆಳಗುವೆಯಾ? ದಯವಿಟ್ಟು ನಿರಾಕರಿಸದಿರು” ಎಂದು ಕೇಳಿಕೊಂಡರು. ಎಂದೂ ಈ ದಿಕ್ಕಿನಲ್ಲಿ ಯೋಚಿಸದ ಗೀತಾಳಿಗೆ ಅದೇನು ಉತ್ತರ ನೀಡಬೇಕೆಂದು ಅರಿಯಲಿಲ್ಲ. ಸ್ವಲ್ಪ ಹೊತ್ತು ತಟಸ್ಥಳಾಗಿ ಕುಳಿತಳು. “ಸರ್ ನಂಗೆ ಒಂದಿಷ್ಟು ಸಮಯ ಕೊಡಿ ಯೋಚಿಸಿ ನನ್ನ ನಿರ್ಧಾರ ತಿಳಿಸುತ್ತೇನೆ” ಎಂದು ಅಲ್ಲಿಂದ ನಿರ್ಗಮಿಸಿದಳು.
ಆಶ್ರಮಕ್ಕೆ ವಾಪಾಸಾದ ಗೀತಾ ನೀಲಕಂಠ ರಾವ್ ಅವರು ಆಡಿದ ಮಾತುಗಳನ್ನೇ ಯೋಚಿಸುತ್ತಾ ಕುಳಿತಳು. ಒಬ್ಬ ಆಫೀಸ್ನಲ್ಲಿ ಕೆಲಸ ಮಾಡುವ ಸಾಮಾನ್ಯ ವರ್ಕರ್ ತರಹ ಎಂದೂ ನೊಡದೆ, ನನಗೆ ಎಲ್ಲಾ ಕೆಲಸದ ಸ್ವಾತಂತ್ರ್ಯ ಮತ್ತು ಸಹಾಯ ಮಾಡಿದ, ನನ್ನನ್ನು ಮಗಳಂತೆ ನೋಡಿಕೊಂಡ ನೀಲಕಂಠ ರಾವ್ ಅವರ ಮಾತನ್ನು ನಾನು ಹೇಗೆ ನಿರಾಕರಿಸಲಿ? ಅವರು ನನ್ನ ಪಾಲಿನ ದೇವರು ಹಾಗೂ ಅದೇನೇ ನಿರ್ಧಾರ ಮಾಡಿದ್ದರೂ ಅದು ನನ್ನ ಜೀವನಕ್ಕೆ ಸರಿಯಾಗಿಯೇ ಮಾಡಿರುತ್ತಾರೆ. ನಾನು ಯೋಚಿಸುವ ಅಗತ್ಯವೇ ಇಲ್ಲ ಎಂದು, ಮರುದಿನವೇ ತನ್ನ ತೀರ್ಮಾನವನ್ನು ನೀಲಕಂಠ ರಾವ್ ಅವರಿಗೆ ತಿಳಿಸುತ್ತಾಳೆ. ಇದನ್ನು ಕೇಳಿ ಅವರ ಖುಷಿಗೆ ಪಾರವೇ ಇರಲಿಲ್ಲ.
ಅದೇ ದಿನ ಮನೆಗೆ ಬಂದವರೇ ಮಗನೊಂದಿಗೆ ಮದುವೆಯ ಪ್ರಸ್ತಾಪವನ್ನು ಇಟ್ಟರು. ಆದರೆ ತನ್ನದೇ ಚಿತ್ರ ಜಗತ್ತಿನ ಕೆಲಸಗಳಲ್ಲಿ ಬ್ಯುಸಿ ಆಗಿದ್ದ ಪ್ರಶಾಂತನಿಗೆ ಇಷ್ಟು ಬೇಗ ಮದುವೆಯಾಗುವುದು ಇಷ್ಟವಿರಲಿಲ್ಲ. ಹಾಗಾಗಿ ತಂದೆಯ ಮಾತಿಗೆ ಸಮ್ಮತಿ ಸೂಚಿಸಲಿಲ್ಲ. ಆದರೆ ಬೆಂಬಿಡದ ನೀಲಕಂಠ ರಾವ್ ಮಗನನ್ನು ಪದೇ ಪದೇ ಮದುವೆಗೆ ಒತ್ತಾಯಿಸುತ್ತಿದ್ದರು. ತಿಂಗಳಿಗೊಮ್ಮೆಯಾದರು ಮನೆಗೆ ಬರುತಿದ್ದ ಪ್ರಶಾಂತ್, ಅದನ್ನೂ ನಿಲ್ಲಿಸಿದ. ನೀಲಕಂಠ ರಾವ್ ಅವರ ಆರೋಗ್ಯವೂ ಹದಗೆಡಲು ಶುರುವಾಯಿತು. ಅದೊಂದು ದಿನ ಹಾಸಿಗೆಯಲ್ಲಿ ಮಲಗಿದ್ದ ನೀಲಕಂಠ ರಾವ್ ಮಗನಲ್ಲಿ “ನಾನು ಸಾಯುವ ಮುನ್ನ ನನ್ನದೊಂದು ಆಸೆ ಈಡೇರಿಸು. ನೀನು ನಮ್ಮ ಆಫೀಸ್ನಲ್ಲಿ ಕೆಲಸ ಮಾಡುತ್ತಿರುವ ಗೀತಾಳನ್ನು ಮದುವೆ ಆಗಲೇ ಬೇಕು, ಇದು ನನ್ನ ಕೊನೆಯ ಆಸೆ” ಎಂದು ಬೇಡಿಕೊಂಡರು. ಆ ಸ್ಥಿತಿಯಲ್ಲಿದ್ದ ತಂದೆಯ ಆಸೆಯನ್ನು ಅಲ್ಲಗಳೆಯಲು ಪ್ರಶಾಂತನಿಗೆ ಸಾಧ್ಯವಾಗದೆ, ಒಪ್ಪಿಗೆ ಸೂಚಿಸಿದ.
ಕೆಲವೇ ದಿನಗಳಲ್ಲಿ ನೀಲಕಂಠ ರಾವ್ ಅವರ ಅನಾರೋಗ್ಯದ ಕಾರಣ ಬಹಳ ಸರಳವಾಗಿ ಮದುವೆ ಕಾರ್ಯವನ್ನು ನೆರವೇರಿಸಿದರು. ಸೊಸೆಯಾಗಿ ಬಂದ ಗೀತಾ, ಮಗಳಂತೆ ಮಾವನ ಆರೋಗ್ಯದ ಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಳು. ನೀಲಕಂಠ ರಾವ್ ಅವರ ಆತ್ಮಕ್ಕೆ ತ್ರಪ್ತಿಯಾಯಿತು ಎಂದೆನಿಸುತ್ತದೆ. ಮದುವೆ ಆದ ಕೆಲ ದಿನಗಳಲ್ಲಿ ನೀಲಕಂಠ ರಾವ್ ಅವರು ಮಗನ ಸಂಪೂರ್ಣ ಜವಾಬ್ದಾರಿಯನ್ನು ಗೀತಾಳಿಗೆ ವಹಿಸಿ ಇಹಲೋಕ ತ್ಯಜಿಸಿದರು.
ವರ್ಷ ತುಂಬುವುದರೊಳಗೆ ಗೀತಾ ಗರ್ಭಿಣಿಯಾದಳು. ಗರ್ಭಿಣಿಯಾದ ಗೀತಾಳಿಗೆ ಅದೆಷ್ಟೋ ಬಯಕೆಗಳಿದ್ದರೂ ತೀರಿಸಲು ತವರಿರಲಿಲ್ಲ. ಗಂಡನ ಮನೆಯಲ್ಲಿಯೂ ಯಾರೂ ಇರಲಿಲ್ಲ. ಅದೇ ಸಮಯದಲ್ಲಿ ಔಟ್ ಓಫ್ ಕಂಟ್ರಿ ಶೂಟಿಂಗ್ನಲ್ಲಿ ಬ್ಯುಸಿ ಇದ್ದ ಪ್ರಶಾಂತ್ ಒಂದು ಫೋನ್ ಕೂಡ ಮಾಡಿ ವಿಚಾರಿಸ್ತಾ ಇರಲಿಲ್ಲ. ಸದಾ ಶೂಟಿಂಗ್, ಅದು, ಇದು ಅಂತ ಬ್ಯುಸಿ ಇರುತ್ತಿದ್ದ ಪ್ರಶಾಂತನಿಗೆ ಮನೆ ಕಡೆ ಯೋಚನೆಯೂ ಮಾಡುತ್ತಿರಲಿಲ್ಲ. ಅವಳ ಬಯಕೆಯ ಬುತ್ತಿ ಕಣ್ಣೀರ ಧಾರೆಯಲ್ಲೇ ಕೊಚ್ಚಿ ಹೋಗುತ್ತಿತ್ತು. ಗೀತಾಳಿಗೆ ತನ್ನ ಯಾವ ಕಷ್ಟವನ್ನೂ ಹೇಳಿಕೊಳ್ಳಲು ಯಾರೂ ಇರಲಿಲ್ಲ. ಆ ಕ್ಷಣಕ್ಕೆ ಅವಳಿಗೆ ಪ್ರಶಾಂತ್ ಜೊತೆಗಿನ ತನ್ನ ಮದುವೆಯ ಅವಸರದ ನಿರ್ಧಾರದ ಬಗ್ಗೆ ಮರುಕವಾರಂಭವಾಯಿತು. ಆದರೆ ಯಾವ ಆಲೋಚನೆಗೂ ಮೀರದಷ್ಟು ದೂರ ತಾನು ಹೆಜ್ಜೆ ಇಟ್ಟಾಗಿದೆ ಎಂದು ಎಲ್ಲವನ್ನು ಹುದುಗಿರಿಸಿ ಸುಮ್ಮನಾಗಿದ್ದಳು.
ಅಂದು ಗೀತಾಳ ಹೆರಿಗೆಯ ದಿನ. ಎಲ್ಲಾ ಹೆಣ್ಣು ಮಕ್ಕಳಂತೆ ಗೀತಾಳಿಗೂ, ತನ್ನ ಗಂಡ ಹೆರಿಗೆಯ ಸಮಯದಲ್ಲಿ ತನ್ನೋಂದಿಗೆ ಇರಬೇಕು ಎಂಬ ಬಹು ದೊಡ್ಡ ಆಸೆ ಇತ್ತು. ಆದರೆ ಅದೂ ಕೂಡ ಸಾಧ್ಯವಾಗಲಿಲ್ಲ. ಅವಳಿ ಮಕ್ಕಳಿಗೆ ತಾಯಿಯಾದಳು. ಒಂದು ಗಂಡು, ಒಂದು ಹೆಣ್ಣು ಮಗು ಗೀತಾ ಮಡಿಲು ಸೇರಿತು. ಪ್ರಶಾಂತನನ್ನು ಆವರಿಸಿದ್ದ ಬಣ್ಣದ ಜಗತ್ತಿನ ಮಾಯೆ, ಮುದ್ದಾದ ಮಕ್ಕಳೊಂದಿಗೂ ಸಮಯ ಕಳೆಯದಂತೆ ಮಾಡಿತ್ತು. ಇತ್ತ ಗಂಡನಿಗೆ, ಹೆಂಡತಿ ಮಕ್ಕಳ ಮೇಲೆ ಪ್ರೀತಿ ಇಲ್ಲದೇ ಇರುವುದು ಬಹು ದೊಡ್ಡ ನೋವಾದರೂ, ಮುದ್ದಾದ ಮಕ್ಕಳ ನಗು ಎಲ್ಲವನ್ನೂ ಮರೆಸುತ್ತಿತ್ತು. ಅದೇಷ್ಟೋ ಬಾರಿ, ನಾನೇಕೆ ಬರಿಯ ಆಶ್ರಯಕ್ಕೆ ಇಲ್ಲಿರುವೆ ಎಂದು ಅನ್ನಿಸಿದ್ದುಂಟು. ಆದರೆ ಮಕ್ಕಳಿಗೆ ಮುಂದೆ ತಂದೆಯ ಕೊರತೆಯಾಗಬಾರದು ಎಂದು, ಎಲ್ಲಾ ನೋವನ್ನು ಬಚ್ಚಿಟ್ಟು ದಿನ ಕಳೆಯುತ್ತಿದ್ದಳು.
ಒಮ್ಮೆ ಪ್ರಶಾಂತ್ ನಿರ್ದೇಶನದ “ಮಹಾ ತಾಯಿ” ಚಿತ್ರಕ್ಕೆ, ಚಿತ್ರೋದ್ಯಮದ ಅತ್ಯುನ್ನತ ಪ್ರಶಸ್ತಿ ಮುಡಿಗೇರಿತು. ಇದರಿಂದ ಪ್ರಶಾಂತನ ಜನಪ್ರಿಯತೆ ಇನ್ನಷ್ಟು ಹೆಚ್ಚಿತು. ಅದೊಂದು ಸ್ತ್ರೀ ಪ್ರಧಾನವಾದ ಚಿತ್ರವಾದ್ದರಿಂದ ಇನ್ನಷ್ಟು ಮಹಿಳಾ ಅಭಿಮಾನಿಗಳು ಹೆಚ್ಚಾದರು. ಇದೇ ಖುಷಿಯಲ್ಲಿ, ಪ್ರಶಸ್ತಿ ಸಿಕ್ಕ ಸಂಭ್ರಮಕ್ಕೆ ಒಂದು ದೊಡ್ಡ ಸಂತೋಷ ಕೂಟವನ್ನು ಏರ್ಪಡಿಸಿ, ಚಿತ್ರೋದ್ಯಮದ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಆಹ್ವಾನಿಸಿದನು. ಆದರೆ ಮನೆಯಲ್ಲೇ ಇದ್ದ ಹೆಂಡತಿಗೆ ಆಹ್ವಾನವಿರಲಿಲ್ಲ. ಪ್ರಶಾಂತನಿಗೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಬಂದಿದ್ದು ಗೀತಾಗೆ ಹೆಮ್ಮೆಯ ವಿಷಯವಾಗಿತ್ತು. ಹಾಗೆಯೇ ಸಂತೋಷ ಕೂಟವನ್ನು ಆಯೋಜಿಸಿದ್ದ ಬಗ್ಗೆ ಬೇರೆ ಮೂಲಗಳಿಂದ ತಿಳಿಯಿತು.
ಗಂಡನಿಗೆ ಸರ್ಪ್ರೈಸ್ ಕೊಡಬೇಕೆಂದು ನಿರ್ಧರಿಸಿ, ಆ ಸಮಾರಂಭದ ದಿನ ಯಾರಿಗೂ ಹೇಳದೆ ಮಕ್ಕಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದಳು. ಆ ಹೊತ್ತಿಗೆ ಅರ್ಧದಷ್ಟು ಕಾರ್ಯಕ್ರಮ ಮುಗಿದಿತ್ತು. ಎಲ್ಲರೂ ತಿನ್ನುವುದು, ಕುಡಿಯುವುದು, ಮಾತನಾಡುವುದರಲ್ಲಿ ಮುಳುಗಿದ್ದರು. ಬಹಳಷ್ಟು ಜನ ಪ್ರಶಾಂತನಿಗೆ congratulate ಮಾಡುತ್ತಿದ್ದರು. ಅದನ್ನು ದೂರದಿಂದಲೇ ನೋಡಿ ಖುಷಿ ಪಟ್ಟಳು. ಹಾಗೆಯೇ ಮಕ್ಕಳಿಗೂ ಅಪ್ಪನ ಸಾಧನೆಯ ಬಗ್ಗೆ ವಿವರಿಸುತ್ತಿದ್ದಳು. ಪ್ರಶಾಂತ್ ಸುತ್ತುವರಿದ್ದಿದ್ದ ಜನ ತುಸು ಕಡಿಮೆಯಾದ ಬಳಿಕ ಪ್ರಶಾಂತ್ ಮುಂದೆ ಹೋಗಿ ನಿಂತಳು. ಪ್ರಶಾಂತನಿಗೆ ನಾನು ಮತ್ತು ಮಕ್ಕಳು ಇಲ್ಲಿ ಬಂದಿರುವುದು ಬಹಳ ದೊಡ್ಡ ಸರ್ಪ್ರೈಸ್ ಆಗಬಹುದು, ಕಂಡೊಡನೆ ನಮ್ಮನ್ನು ಪ್ರೀತಿಯಿಂದ ಆಲಿಂಗಿಸಬಹುದು ಎಂದೆಲ್ಲಾ ಕಲ್ಪನೆಯಿಂದ ಹೋದ ಗೀತಾಳಿಗೆ ದೊಡ್ಡ ಆಘಾತ ಕಾದಿತ್ತು.
ಗೀತಾಳನ್ನು ಕಂಡೊಡನೆ ಪ್ರಶಾಂತನಿಗೆ ಶಾಕ್ ಆಯ್ತು. ಕೂಡಲೇ ಅವಳ ಕೈ ಹಿಡಿದು ತುಸು ದೂರ ಕರೆದುಕೊಂಡು ಹೋಗಿ “ನನ್ನ ಅನುಮತಿ ಕೇಳಿದೆ ಇಲ್ಲಿ ತನಕ ಹೇಗೆ ಬಂದೆ? ನೀನು ಇಲ್ಲಿಗೆ ಬಂದಿರುವುದು ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ ” ಎಂದಾಗ, ಗೀತಾಳ ಮನಸ್ಸು ಮುರಿಯಿತು. ಎಂದೂ ಗಂಡನಿಗೆ ಎದುರು ಮಾತನಾಡದ ಗೀತಾ ಅಂದು ಬಾಯಿ ಬಿಟ್ಟು ತನ್ನೆಲ್ಲ ನೋವನ್ನು ಹೇಳಿಕೊಂಡಳು. “ನಾನು ಮತ್ತು ನನ್ನ ಮಕ್ಕಳು ಅದೇನು ಪಾಪ ಮಾಡಿದ್ದೇವೆ? ನಾವ್ಯಾಕೆ ನಿಮ್ಮ ಖುಷಿಯಲ್ಲಿ ಭಾಗಿಯಾಗಬಾರದು? ಗಂಡನ ಸಂಭ್ರಮದಲ್ಲಿ ಹೆಂಡತಿ ಭಾಗಿಯಾಗಲು ಅದಾವ ಅನುಮತಿ? ” ಎಂದು ಒಂದೇ ಸಮನೆ ಜೋರಾಗಿ ತನ್ನ ಪ್ರಶ್ನೆಗಳ ಸುರಿಮಳೆ ಸುರಿಸಿದಳು. ಮಧ್ಯದ ನಶೆಯಲ್ಲಿದ್ದ ಪ್ರಶಾಂತನಿಗೆ ಹೆಂಡತಿಯ ಎದುರು ನುಡಿಗಳು ಸಹಿಸಲಾಗಲಿಲ್ಲ. ಅತೀವ ಸಿಟ್ಟಿನ ಭರದಲ್ಲಿ ಅದೊಂದು ದೊಡ್ಡ ಸಮಾರಂಭ, ಸಾವಿರಾರು ಜನರಿದ್ದಾರೆ ಇದೆಲ್ಲ ಮರೆತು ಹೆಂಡತಿಯ ಕೆನ್ನೆಗೆ ಒಂದು ಏಟು ಹೊಡೆದೇ ಬಿಟ್ಟ. ಅಲ್ಲೇ ಹತ್ತಿರದಲ್ಲಿದ್ದ ಕೆಲವು ಮಾಧ್ಯಮ ಮಿತ್ರರು, ಚಿತ್ರರಂಗದವರ ಕಣ್ಣಿಗೆ ಇದು ಬೀಳದೇ ಇರಲಿಲ್ಲ.
ಇಷ್ಟು ವರ್ಷಗಳ ಕಾಲದ ಒಂಟಿತನ, ಪ್ರೀತಿಯ ಮಾತಿನ ಕೊರತೆ, ಬಸುರಿಯ ಬಯಕೆಯನ್ನೆಲ್ಲಾ ಮುಚ್ಚಿಟ್ಟ ಗೀತಾಳಿಗೆ ಈ ಅವಮಾನ ಸಹಿಸಲಾಗಲಿಲ್ಲ. ಮರುಕ್ಷಣವೇ, ಮರುಮಾತಾಡದೇ ತನ್ನ ಇಬ್ಬರು ಮಕ್ಕಳೊಂದಿಗೆ ಕಾರ್ಯಕ್ರಮದಿಂದ ಕಣ್ಣೀರ ಕೋಡಿಯೊಂದಿಗೆ ಹೊರ ನಡೆದಳು. ಅಂದು ಅಳುತ್ತಾ ಹೊರಟ ಗೀತಾ, ಅಂದೇ ಕೊನೆ, ಮತ್ತೆಂದೂ, ಎಂತಹ ಸಂದರ್ಭದಲ್ಲೂ ಗೀತಾ ಕಣ್ಣಿಂದ ಒಂದು ಹನಿ ಕಣ್ಣೀರು ಬರಲಿಲ್ಲ. ಅಂದೇ ಅವಳು ನಿರ್ಧರಿಸಿದಳು, ಯಾವ ಭಾವನಾತ್ಮಕ ಸಂಬಂಧವಿಲ್ಲದ, ಒಂದಿಷ್ಟು ಪ್ರೀತಿ ತೋರದ, ಒಮ್ಮೆಯೂ ಗಂಡನಾಗಿ ಅಥವಾ ತಂದೆಯಾಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸದ ಪ್ರಶಾಂತ್ ನನ್ನ ಪಾಲಿಗೆ ಇನ್ನಿಲ್ಲ ಎಂದು. ನನ್ನ ವಿದ್ಯೆ ನನ್ನೊಂದಿಗಿದೆ. ಇನ್ನು ಮುಂದೆ ನನ್ನ ಮಕ್ಕಳಿಗೆ ನಾನೇ ತಂದೆ, ತಾಯಿ ಇಬ್ಬರ ಸ್ಥಾನದಲ್ಲಿ ನಿಂತು ಬೆಳೆಸುತ್ತೇನೆ ಎಂದು, ಧೃಡ ನಿರ್ಧಾರ ಮಾಡಿ, ಬೆಂಡಾದ ಬೆರಳುಗಳಿಗೆ ಶಕ್ತಿ ತುಂಬಿ, ಬೆಂಗಾವಲಾಗಿ ಸದಾ ನಿಲ್ಲುವ ಭರವಸೆಯೊಂದಿಗೆ ಮಕ್ಕಳ ಕೈ ಹಿಡಿದು ಅಂದು ಹೊರಟ ಗೀತಾ ಎಂದೂ ಹಿಂದೆ ತಿರುಗಿ ನೋಡಲೇ ಇಲ್ಲ.
ಇತ್ತ ಪ್ರಶಾಂತ್ ಹೆಂಡತಿಗೆ ಹೊಡೆದ ಸುದ್ದಿ ಮಾಧ್ಯಮದ ಮುಖಾಂತರ ಎಲ್ಲರನ್ನು ತಲುಪಿತು. ಬರೇ ಸಿನಿಮಾದಲ್ಲಿ ಸ್ತ್ರೀ ಶಕ್ತಿ, ಸ್ತ್ರೀ ಎಂದರೆ ದೇವತೆ ಎಂದೆಲ್ಲಾ ತೋರಿಸುವ ಪ್ರಶಾಂತ್ ಮನೆಯಲ್ಲಿ ತನ್ನ ಹೆಂಡತಿಯನ್ನೇ ಗೌರವಿಸದ ಮೇಲೆ ಅವನ ಅದಾವ ಮಹಿಳಾ ಪ್ರಧಾನ ಸಿನಿಮಾಗಳಿಗೆ ಬೆಲೆಯಿಲ್ಲ ಎಂದು ಅವನ ಅಭಿಮಾನಿಗಳು ಛೀಮಾರಿ ಹಾಕಿದರು. ಹಾಗೆಯೇ ಅದಾದ ಬಳಿಕ ಮುನಿಸಿಕೊಂಡ ಪ್ರೇಕ್ಷಕರು ಅವನ ಮುಂದಿನ ಯಾವ ಸಿನಿಮಾವನ್ನೂ ಕೈ ಹಿಡಿಯಲಿಲ್ಲ. ಸಿನಿಮಾವನ್ನೇ ಉಸಿರು ಅಂದುಕೊಂಡ ಪ್ರಶಾಂತನಿಗೆ ಸಾಲು ಸಾಲು ಸೋಲು, ಮಾನಸಿಕವಾಗಿ ಕುಗ್ಗುವಂತೆ ಮಾಡಿತು. ಸಿನಿಮಾರಂಗದಿಂದ ಒಂದು ಮಟ್ಟಿಗೆ ಶಾಶ್ವತವಾಗಿಯೇ ಹೊರ ಬಂದ.
ದಿನ ಕಳೆದಂತೆ ಒಂಟಿತನ ಪ್ರಶಾಂತನನ್ನು ಬಹಳಷ್ಟು ಕಾಡಲಾರಂಭಿಸಿತು. ಎಷ್ಟು ದೊಡ್ಡ ಮನೆ, ಎಷ್ಟು ಹಣ, ಏನೇ ಇದ್ದರೂ ಮನಸ್ಸಿಗೆ ನೆಮ್ಮದಿ ಇರಲಿಲ್ಲ. ಗೀತಾ ಮತ್ತು ಮಕ್ಕಳ ನೆನಪು ದಿನೇ ದಿನೇ ಹೆಚ್ಚು ಹೆಚ್ಚು ಕಾಡಲಾರಂಭಿಸಿತು. ಬಹಳಷ್ಟು ಖಿನ್ನತೆಗೆ ಒಳಗಾದ ಪ್ರಶಾಂತ್ ಇನ್ನು ಒಂಟಿತನ ನನ್ನಿಂದಾಗದು ಕೊನೆಯ ದಿನಗಳನ್ನಾದರೂ ಹೆಂಡತಿ ಮಕ್ಕಳೊಂದಿಗೆ ಕಳೆಯಲು ನಿರ್ಧರಿಸಿದ. ಹಾಗೆಯೇ ತನ್ನ ಅಹಂನ್ನೆಲ್ಲಾ ಬಿಟ್ಟು, ಪರಿಚಯದವರ ಸಹಾಯದಿಂದ ಗೀತಾಳ ವಿಳಾಸ ಹುಡುಕಿ ಕೂಡಲೇ ಅದೇ ದಿನ ಗೀತಾ ಹಾಗೂ ಮಕ್ಕಳನ್ನು ಭೇಟಿಯಾಗಲು ಹೋದ. ಗೀತಾ ಮತ್ತು ಮಕ್ಕಳು ತನ್ನನ್ನು ಪ್ರೀತಿಯಿಂದ ಸ್ವಾಗತಿಸಬಹುದು ಎಂದು ಬಹುದೊಡ್ಡ ನಿರೀಕ್ಷೆಯಲ್ಲಿ ಹೊರಟ ಪ್ರಶಾಂತನಿಗೆ ನಿರಾಸೆಯ ಸುದ್ದಿ ಕಾದಿತ್ತು. ಪ್ರಶಾಂತನನ್ನು ನೋಡಿದ ಗೀತಾಳ ಮುಖದಲ್ಲಿ ಒಂದಿಷ್ಟೂ ಭಾವ ಬದಲಾಗಲಿಲ್ಲ. ಬದಲಿಗೆ, ಯಾರು ನೀವು? ನಿಮ್ಮ ಪರಿಚಯ ನನಗಿಲ್ಲ, ಪರಿಚಯ ಕೇಳುವಷ್ಟು ಬಿಡುವಿಲ್ಲ ಎಂದು ಬಾಗಿಲು ತೆರೆದ ವೇಗದಲ್ಲೇ, ಪ್ರಶಾಂತ್ ಬಾಯಿ ತೆರೆಯುವ ಮುಂಚೆಯೇ ಗೀತಾ ಬಾಗಿಲು ಮುಚ್ಚಿದಳು.
ತನ್ನ ತಪ್ಪನ್ನು ಅರಿತ ಪ್ರಶಾಂತನಿಗೆ, ಕ್ಷಮೆ ಕೇಳಲೂ ಸಾಧ್ಯವಾಗಲಿಲ್ಲ ಎಂಬ ನೋವಿನಲ್ಲಿ ವಾಪಾಸಾದ. ಮನೆಗೆ ಬಂದ ಮೇಲೆ ಮತ್ತದೇ ಒಂಟಿತನ, ಮತ್ತದೇ ನೆಮ್ಮದಿ ರಹಿತ ಬದುಕು. ಇದರಿಂದ ಆರೋಗ್ಯ ದಿನೇ ದಿನೇ ಹದಗೆಡುತ್ತಾ ಹೋಯಿತು. ಅದೆಷ್ಟೋ ಬಾರಿ ಗೀತಾಳ ಭೇಟಿಯಾಗಲು ಮನಸ್ಸು ಹಾತೊರೆದರೂ, ಅವಳ ನೆಮ್ಮದಿಯನ್ನು ಹಾಳು ಮಾಡಲು ನನಗೆ ಅಧಿಕಾರವಿಲ್ಲ ಎಂದು ಸುಮ್ಮನಾಗುತ್ತಿದ್ದ.
ಹೀಗೆ ವರ್ಷಗಳು ಉರುಳಿತು. ಇತ್ತ ಮಕ್ಕಳನ್ನೆಲ್ಲ ದಡ ಸೇರಿಸಿದ ಗೀತಾ, ಮಕ್ಕಳು, ಮೊಮ್ಮಕ್ಕಳನ್ನೆಲ್ಲಾ ಕಣ್ ತುಂಬಾ ಕಂಡು ಆನಂದಿಸಿ ತೃಪ್ತಳಾಗಿದ್ದಳು. ಒಂದು ರಾತ್ರಿ ಚೆನ್ನಾಗಿಯೇ ಊಟ ಮಾಡಿ ಮಲಗಿದ್ದ ಗೀತಾ ಬೆಳಿಗ್ಗೆ ಏಳಲೇ ಇಲ್ಲ.
ಗೀತಾಳ ಅಂತಿಮ ದರ್ಶನ ಮಾಡಿ, ಹಳೆಯ ನೆನಪುಗಳ ಹೊಳೆ ಯಲ್ಲಿ ಹೊರಟ ಪ್ರಶಾಂತನ ಕಾರು ಅವನ ಮನೆ ಬಳಿ ಬಂದು ನಿಂತಿತು. ಡ್ರೈವರ್, “ಸರ್, ಮನೆ ಬಂತು” ಎಂದ. ಪ್ರಶಾಂತನಿಂದ ಯಾವ ಪ್ರತ್ಯುತ್ತರ ಬರಲಿಲ್ಲ. ಕಾರಿನ ಹಿಂದುಗಡೆ ಬಾಗಿಲು ತೆರೆದು,”ಸರ್ ಮನೆ ಬಂತು ಕೈ ಕೊಡಿ” ಎಂದು ಡ್ರೈವರ್ ಕೈ ಮುಂದೆ ಮಾಡಿದ. ಆದರೆ ಪ್ರಶಾಂತ್ ಕೈ ನೀಡಲಿಲ್ಲ. ಕೈಯಲ್ಲಿ ಎದೆಗೊತ್ತಿಕೊಂಡ ಗೀತಾಳ ಚಿತ್ರ ಹಾಗೆಯೇ ಇತ್ತು. ಉಸಿರು ನಿಂತಿತ್ತು.
Leave a Reply