Category: Poem

  • ಜೋಳಿಗೆಯ ಜೋಗುಳ

    ಜಗವ ಸುತ್ತಿಸುವಳು ಜನನಿ

    ಜೋಳಿಗೆಯ ಜೋಲಿಯಲ್ಲಿ.

    ಜನಜಂಗುಳಿಯ ಜಂಕೆಯೇ

    ಜೋಗುಳದ ಹಾಡು ಇಲ್ಲಿ.

    ಪಲ್ಲಕ್ಕಿ-ಪಲ್ಲಂಗಕ್ಕೂ ಮಿಗಿಲು ಈ ನನ್ನ ತೊಟ್ಟಿಲು;

    ತೂಗುಯ್ಯಾಲೆಯ ಸಂಚಾರದಲೆ ಗತ್ತು-ಗಮ್ಮತ್ತು.

    ಬತ್ತಿರುವ ಎದೆಯಲ್ಲೂ ಒಸರುವ

    ಎದೆಹಾಲಿನಮೃತದ ಸವಿ ನನ್ನದೇ ಸ್ವತ್ತು.

    ಇಣುಕಿಣುಕಿ ಜೋಳಿಗೆಯ ಕಿಟಕಿಯಲಿ

    ನುಸುಳುವ ರವಿಮಾಮನ ಕಚಗುಳಿ.

    ಧಗೆತಾಗದಂತೆ, ಸೆಕೆಯಾರಿಸಲೆಂದೇ

    ಮತ್ತೆ ಮತ್ತೆ ಮುತ್ತಿಕ್ಕುವ ಸಿಹಿಗಾಳಿ.

    ರಾಜಯೋಗವ ಮೀರಿಸುವ ಯೋಗವಿದು;

    ಹಸಿದೊಡನೆ ಹಾಲು, ಬಯಸಿದಾಗೆಲ್ಲ ಮಡಿಲು.

    ಮರೆಸಿಹುದು ಮಾಸಿದ ಜೋಳಿಗೆಯ ಘಮವ;

    ಮೆರವಣಿಗೆಯಲಿ ತಾಯಿ ನಿನ್ನುಸಿರ ನೆರಳಿರಲು.

    ಬದುಕಿನ ಬಂಡಿ ನಡೆಸಲು ಬೀದಿಬೀದಿಯಲ್ಲಿ ತಾಯಿ ತನ್ನ ಮಗುವನ್ನು ಜೋಳಿಗೆಯಲ್ಲಿ ಹೊತ್ತು ತಿರುಗುವಾಗ, ಜೋಳಿಗೆಯೊಳಗೆ ಮಗುವಿನ ಅನುಭವ ಹೀಗಿರಬಹುದೇ ???

  • ಬಾರದ ನಾಳೆಯ ಬಲ್ಲವರಾರು

    ಇಂದ್ಯಾಕೆ ಹಾಳು ಮಾಡುವೆ,

    ಇನ್ನೂ ಕಾಣದ ನಾಳೆಗೆ.

    ಪ್ರಸ್ತುತವ ಪ್ರೀತಿಸಲು ಕಲಿಯದೆ,

    ಪರಿತಪಿಸಿದರೇನು ಫಲ ಭವಿಷ್ಯವಾಣಿಗೆ.

    ಜೇನಂತ ಜನರು ಜೊತೆಯಲ್ಲೇ ಇರಲು,

    ಜೋತೇಕೆ ಬಿದ್ದಿರುವೆ ಜಿಗುಪ್ಸೆ, ಜಾಡಿಗೆ.

    ಕೈಲಿರುವ ಕೂಸು ನಗುವಾಗ ಕಣ್ಮುಚ್ಚಿ,

    ಕಣ್ ಕಾಣದ ಕ್ಷಣಗಳಿಗೆ ಕೊರಗದಿರು ಈ ಬಗೆ.

  • ಸಾಫ್ಟವೇರ್ ಲೈಫು

    ಹಳೆ ಬೇರನು ತೊರೆದು

    ಹೊಸ ಬಂಧಕ್ಕೆ ಬೆಸೆದು

    ಹಲವು ಮೈಲಿಯ ಕಳೆದು

    ಸಾಧನೆಯ ಕದವ ತಟ್ಟಿ

    ಬಣ್ಣಬಣ್ಣದ ಕನಸ ಕಟ್ಟಿ

    ಸೇರಿದ್ದು ವರ್ಣ ರಹಿತ ಬದುಕಿಗೆ

    ಎಲ್ಲವೂ ಕೃತಕ, ಎಲ್ಲೆಲ್ಲೂ ಕಾಂಕ್ರೀಟು

    ಗಂಧದ ಘಮ, ಶ್ರೀಗಂಧಕ್ಕೆ ಸೇರಿಲ್ಲ

    ಚೆಂದದ ಸುಮ, ಸುಗಂಧವ ಬೀರುತ್ತಿಲ್ಲ.

    ಹಳೆ ಬೇರು ಮತ್ತೆ ಸೆಳೆಯುತ್ತಿದೆ,

    ಹೊಸ ಬಂಧ ಉಸಿರು ಕಟ್ಟುತ್ತಿದೆ.

    ಎಲ್ಲಾ ಬಂಧ- ಭಾವವ ಕಳಚಿ,

    ಮಾಂಸ ಹೊದಿಕೆಯ ಮಡಚಿ,

    ತಾಯ ಉದರದಲ್ಲಿ ಮಗುವಾಗಿ

    ಮತ್ತೆ ಮೆತ್ತಗೆ ಮಲಗಿ,

    ಹೊಸ ದಾರಿ, ಹೊಸ ಕನಸ

    ರಂಗೋಲಿ ಬಿಡಿಸುವಾಸೆ.

  • ಜೊತೆಗಿರಲು

    ಸಮಯ ಸ್ವಲ್ಪವೂ ಸುಳಿವು ಕೊಡದೆ,

    ಸರಿದಿದೆ ನೀ ಜೊತೆಗಿರಲು.

    ಮನವು ಮರ್ಕಟವಾಗಿ ಅರಳು ಮರಳು,

    ನಿನ್ನ ನೋಡುತಿರಲು.

    ಮೊದಲ ಭೇಟಿಯ ಅನುಭವದ ಹುರುಪು,

    ಪ್ರತಿಬಾರಿ ನೀನು ಸಿಗಲು.

    ಮಾತು ಮರೆಸಿ ಮೌನಿಯಾಗಿಸಿತು,

    ಮತ್ತದೇ ನಿನ್ನ ಮುಂಗುರುಳು.

    ನೀ ಹೊರಟ ಮೇಲೆ ಕಾಡುವವು,

    ಉಳಿದುಹೋದ ಶಬ್ದಗಳ ಸಾಲು.

    ಎದೆಬಡಿತವು ಏರು ಪೇರು,

    ನೀ ಮತ್ತೆ ಸಿಗುವೆ ಎನ್ನಲು.

    ಕಣ್ಣಲ್ಲೇ ಹೇಗೆ ಸೆರೆ ಹಿಡಿಯಲಿ,

    ನೀ ಹೊರಡುವೆನೆನ್ನುವ ಮೊದಲು.

  • ಹೇಳಲಾರೆ ಕಾರಣ

    “ಹೇಳಿ ಹೋಗು ಕಾರಣ, ದೂರ ಹೋಗುವ ಮೊದಲು” ಎಂದ ನಿನಗೆ, ನನ್ನ ಪ್ರೀತಿಪೂರ್ವಕ ಉತ್ತರ.

    ಏನ ಹೇಳಲಿ ಕಾರಣ,

    ನಿನ್ನ ತೊರೆದ ಈ ಮನ.

    ಹಲವು ಕಾರಣಗಳಿತ್ತು,

    ಇರಲು ನಿನ್ನೊಂದಿಗೆ ಬೆರೆತು.

    ಪದೇ ಪದೇ ಹುಡುಕಿ ಸೋತೆ,

    ನಮ್ಮೊಳಗಿನ ಕೊರತೆ.

    ಸಿಕ್ಕಿದ್ದು, ಬರೀ ಪ್ರೀತಿಯ ಕಂತೆ ಕಂತೆ.

    ಚಿಂತೆ ಮರೆಸಿ, ಪ್ರೀತಿ ಬೆರೆಸಿ,

    ಬೆಳೆಸಿದ್ದ ಸಸಿ,

    ಸಣ್ಣ ಸಣ್ಣ ವಿರಸದಿಂದ,

    ಮನದ ಮಾತಿನಂತರಗಳಿಂದ,

    ಮೊಗ್ಗು ಬಿರಿವ ಮೊದಲು,

    ಕುಗ್ಗಿ ಬಾಡಿತು ಒಲವು.

    ಮರಿಚಿಕೆಯಾಯ್ತು ಪ್ರೀತಿಯಂಬಾರಿಯ ಚೆಲುವು.

    ಬತ್ತಿರುವ ದೀಪ, ಮುರಿದಿರುವ ಕೊಳಲು.

    ಹೇಗೆ ಹೆಣೆಯಲಿ ಹಸಿ ನೋವ ಅಳಲು.

    ಕವಿದ ಕತ್ತಲ ಕರಗಿಸಲಾರೆ,

    ಸಂತಸದ ಸಂಗೀತಕ್ಕೆ ಶೃುತಿ ಸೇರಿಸಲಾರೆ.

    ಮತ್ತೆ ಮತ್ತೆ ಕೆದಕಬೇಡ,

    ಈ ಅಗಲಿಕೆಯ ಕಾರಣದ ಗೂಡ.

    ಸಾಗು ನೀ ಹಿಡಿದು, ಹೊಸ ಬದುಕ ಜಾಡ.

    ಸಿಗುವೆ ಮುಂದೆಂದಾದರೂ ಈ ಬಾಳ ಬಂಡಿಯಲಿ,

    ಸಿಕ್ಕಾಗ ನಿನ್ನ ಮೊಗದಿ ನನಗೊಂದು ನಗುವಿರಲಿ.

  • ಚಿಣ್ಣರ ‌ಬ‌ಣ್ಣ

    ಚಿಣ್ಣರ ಲೋಕದಲ್ಲೊಂದು ಬಣ್ಣದ ಹಾಡಿನೊಂದಿಗೆ ಪಯಣ.

    ಬಣ್ಣಗಳಾಟ ಬಲು ಚೆಂದ,

    ಮಕ್ಕಳಿಗಂತೂ ಆನಂದ.

    ಕುಂಚದಿ ಚಿತ್ರಕೆ ಕಚಗುಳಿ,

    ಬಣ್ಣದ ರಂಗಿನ ಓಕುಳಿ.

    ಕಾಮನ ಬಿಲ್ಲಿನ ಮೇಲೇಳು,

    ವರ್ಣಕೆ ವರುಣನ ನಂಟ್ಹೇಳು.

    ಚಿಟ್ಟೆಗೆ ರೆಕ್ಕೆಲಿ ರಂಗೋಲಿ,

    ಬಿಡಿಸಿದ ಕಲೆಗಾರನು ಎಲ್ಲಿ?

    ಹೂಗಳ ಮೇಲೆ ಬಣ್ಣವ ಚೆಲ್ಲಿ

    ದುಂಬಿಯ ದಂಡನು ಸೆಳೆದನು ಇಲ್ಲಿ.

    ಸೃಷ್ಟಿಯ ತುಂಬಾ ಬಣ್ಣದ ತೋರಣ,

    ಕಾಣುವ ಕಣ್ಣಿಗೆ ಹಬ್ಬದ ಹೂರಣ.

  • ಕನ್ಯಾದಾನ

    ನನ್ನ ಮುದ್ದಿನ ಕೂಸಿನ

    ಕನ್ಯಾದಾನವು ನಾಳೆ.

    ಊಹಿಸಲಾಗದು ಈ ಮನೆ

    ಸದ್ದಿಲ್ಲದ ಹೆಜ್ಜೆ-ಗೆಜ್ಜೆ, ಕೈ ಬಳೆ.

    ನೀ ಹಚ್ಚದ ಮುಸ್ಸಂಜೆಯ

    ದೀಪಕೆಲ್ಲಿಯ ಕಳೆ…

    ಇಂದೇ ಬೇಸರದಿ ಬಾಡಿ

    ಕೂತಿವೆ ನಮ್ಮನೆಯ ತೆಂಗು-ಬಾಳೆ.

    ಹೋದ ಮನೆಯಲ್ಲೂ ಸುರಿಸೇ

    ಹರುಷದ ಹೂಮಳೆ.

    ಧಾರೆ ಎರೆದು ಕಳುಹಿಸಲಿರುವೆ

    ನಿನ್ನ ನಾನು ಮಗಳೇ.

    ಮರೆಯದೇ ಬರೆಯುತ್ತಿರು ಆಗಾಗ

    ಈ ತಂದೆಗೊಂದು ಓಲೆ.

  • ಕಾದಿರುವೆ

    ನೀನಿರದೆ ಈ ವಿರಹ

    ಹತ್ತಿಹುದು ಬೆಂಕಿ ತರಹ

    ಸುಟ್ಟಿಹುದು ನನ್ನೀ ದೇಹ

    ಕಳಚಿಹುದು ಜಗದೆಲ್ಲಾ ಮೋಹ.

    ತುಟಿ ಬಿರಿವ ಮೊದಲೆ ನಿನ್ನ ಮನಕೆ

    ಅರಿಯುತ್ತಿತ್ತು ನನ್ನೆಲ್ಲಾ ಬಯಕೆ

    ಈಗೇಕೆ ಮೌನ ಹೊದಿಕೆ

    ಸರಿಸಿ ಕೇಳೇ ಈ ಕೋರಿಕೆ.

    ಪ್ರತಿ ಕ್ಷಣವೂ ನೆನೆಯುತ್ತಿರುವೆ

    ನಿನ್ನದೆ ದಾರಿ ಕಾದಿರುವೆ

    ಹೆಜ್ಜೆ-ಗೆಜ್ಜೆಯ ಸದ್ದನೇ ಆಲಿಸುತ್ತಿರುವೆ

    ಕಾಣಲಿಲ್ಲ ನಿನ್ನ ಆಗಮನದ ಸುಳಿವೇ…..

  • ಜೋಕೆ

    ನಿಂತಿಹುದು ಬಂಡಿ

    ಕಳಚಿಹುದು ಕೊಂಡಿ

    ಹತ್ತಿಹುದು ಸುತ್ತೆಲ್ಲ ಬೆಂಕಿ

    ಸುಡಬಹುದು ನಿನ್ನನ್ನೂ ಜೋಕಿ

    ಅಣುವೊಂದು ಜಾರಿ

    ನಿನ್ನ ಹೆಗಲನೇರಿ

    ಹಬ್ಬಿಹುದು ಎಲ್ಲೆಲ್ಲೂ ಒಂದೇ ಸಮನೆ

    ಮುಂದಿಹುದು ಸವಿ ದಿನವು ಇರಲಯ್ಯ ಸಹನೆ

    ಈ ಪಥವು ಶಾಶ್ವತವು ಅಲ್ಲಯ್ಯ ಗೆಳೆಯ

    ಭಗವಂತ ಬಹುಬೇಗ ಸುರಿಸುವನು ಹೂಮಳೆಯ.

  • ಬೆಳಗುತಿರಲಿ

    ಆರುತಿರುವ ಹಣತೆಯೊಂದು,

    ಕಾಯುತಿಹುದು ಎಣ್ಣೆಗೆಂದು.

    ಕೊನೆಯವರೆಗೂ ಛಲವ ಬಿಡದೆ,

    ಉರಿಯುತಿಹುದು ಧೃತಿಗೆಡದೆ.

    ಮಂದ ಬೆಳಕು, ನೊಂದ ಮನಕೂ,

    ಮುಂದೆ ಬರುವ ಕೈಗಳು ಬೇಕು.

    ಪರಿಪರಿಯ ಪತಂಗಗಳೆಲ್ಲಾ,

    ಸುತ್ತ ಸುತ್ತಿ, ಹಾರಿಹವು ಮೆಲ್ಲ.

    ಅರಿಯುತ್ತಿಲ್ಲ ಹೋರಾಟವಿದು,

    ತನ್ನ ಉಳಿವಿಗಾಗಿಯೋ? ಜಗವ ಬೆಳಗಲೆಂದೋ?

    ಒಟ್ಟಿನಲ್ಲಿ ಹಣತೆ ಬೆಳಗುತಿರಲಿ.

    ಬಣ್ಣ ಹೊಳೆಯುತಿರಲಿ.