Category: Poem

  • ರಂಗು

    ಬಹು ದಿನಗಳಿಂದ ಮುಚ್ಚಿದ್ದ ಹೂವಿನ ಅಂಗಡಿ ಮತ್ತೆ ತೆರೆದಿತ್ತು
    ಕಟ್ಟುತ್ತಿದ್ದಳು ಬಣ್ಣ ಬಣ್ಣದ ಹೂಗಳನ್ನು
    ದೇವರನ್ನೊಪ್ಪಿಸಲು?? ಗ್ರಾಹಕರನ್ನು ಮೆಚ್ಚಿಸಲು??
    ಬಿಡಿ ಹೂವುಗಳು ಜೋಡಿಯಾಗಿ ರಂಗೇರಿತ್ತು.. ಮಾಲೆಯಾಗಿತ್ತು..

    ಹೂವಿನ ಬಣ್ಣದ ಛಾಯೆ ಅವಳ ಕಣ್ಣುಗಳಲ್ಲಿ ಎಳ್ಳಷ್ಟೂ
    ಇರಲಿಲ್ಲ, ಆದರೂ ಮೊಗ್ಗು ಬಿರಿಯುವ ಮುನ್ನ,
    ಕೊರಗು ಕರಗುವ ಮುನ್ನ, ರಂಗೇರಿತ್ತು.. ಮಾಲೆಯಾಗಿತ್ತು…

  • ಮಂಜಿನ ಮುತ್ತು

    ಮುಂಜಾವಿನ ಮಂಜು ಚಿಗುರಲೆಗೆ ಮುತ್ತಿಕ್ಕುವಾಗ, ಎಳೆ
    ಸೂರ್ಯನ ಮೇಲೆ ಮುನಿಸಾಗಿರಲೂಬಹುದೇ??

    ನೆತ್ತಿಯ ನೇಸರನ ಶಕ್ತಿಯ ಹೀರಿ ನಸುನಗುತ್ತ ಬೆಳೆದ
    ಗಿಡಮರಬಳ್ಳಿಯು, ರವಿ ಜಾರಿ ಶಶಿ ಏರಲು ಕುಗ್ಗಿ-ಕೊರಗಿರಲೂಬಹುದೇ??

    ಬೆಳ್ಳಿ ಬೆಳಕಲ್ಲಿ ಮುಗಿಲ ತೊಟ್ಟಿಲಲ್ಲಿ ಹಸಿರೆಲೆಯು ಮೊಗ್ಗಿಗೆ
    ಲಾಲಿ ಹಾಡುತ್ತಿರಲು, ಇಬ್ಬನಿಯ ತಬ್ಬು ನಿದ್ದೆಗೆಡಿಸಿರಲೂಬಹುದೇ??

    ಮುಂಜಾವಿನ ಮಂಜು ಚಿಗುರಲೆಗೆ ಮುತ್ತಿಕ್ಕುವಾಗ,
    ಎಳೆ ಸೂರ್ಯನ ಮೇಲೆ ಮುನಿಸಾಗಿರಲೂಬಹುದೇ??

  • ಕಾತುರ

    ನಲ್ಲ ನಿನ್ನ ನೋಡ ಬಯಸಿ,
    ಮಲ್ಲೆ ಮುಡಿದು ಕಾದೆನಲ್ಲ.

    ನಾಚೋ ಕೆನ್ನೆಗೆ ಹೂವಿನೆಸಳು ರಾಚಿ
    ಕೇಳಿತು, ಹೊರಟೆ ನೀನು ಎಲ್ಲಿಗೆ?

    ತೋಳ ತೆಕ್ಕೆಯಲೆ ಸುತ್ತೂರ ತೋರಿಸುವ
    ಸರದಾರ ನನ್ನವನು. ಹೊರಡಬೇಕೇ ಇನ್ನೆಲ್ಲಿಗೆ?

    ಕಪ್ಪು ಮಚ್ಚೆಯ ಗಲ್ಲ ಕೇಳಿತೆನ್ನನು ಮೆಲ್ಲ
    ಹೊತ್ತು ಕಂತಿದೆಯಲ್ಲ, ಹೇಗೆ ಬರುವನು ನಲ್ಲ?

    ಬೆಳ್ಳಿ ಬಿತ್ತಿಹುದು ಬಾನದಾರಿಯಲೆಲ್ಲಾ,
    ಹೊತ್ತು ಹೊರಟಿಹನು ನೆನಪ ಬುತ್ತಿಯನೆಲ್ಲ.

    ನಿಂತ ಕಾಲು ನಿಲ್ಲುತ್ತಿಲ್ಲ, ಉಪ್ಪರಿಗೆಯ ದೀಪ ಕರಗಿತಲ್ಲ.
    ಎಷ್ಟು ಕಾಯುವೆ? ಒರಗು ನೀ ಮೆಲ್ಲ. ಎಂದು ಸೀರೆ ನೆರಿಗೆ ಗೊಣಗಿತಲ್ಲ.

    ಮನದ ಮಾಳಿಗೆ ಮರುಗಲಿಲ್ಲ, ಮುಂಜಾವಿನ
    ಮಂಜು ಕರಗಲಿಲ್ಲ, ಕಾತುರದ ಕಣ್ಣು ಮುಚ್ಚಲಿಲ್ಲ.

  • ಹೂದುಂಬಿ

    ದುಂಬಿಯೊಂದು ಮಕರಂದ ಹೀರಲೆಂದು ಹೂವಿನ ಮೇಲೆ ಕುಳಿತು,
    ಜೇನ ಹೀರಿ ಹಾರುವಾಗ ಅದರ ಕಾಲಿಗಂಟಿದ
    ಪರಾಗದ ಅರಿವು ದುಂಬಿಗೆ ಇದ್ದಿರಬಹುದೇ?

    ಅರಿವಾದರೂ ಪರಾಗಸ್ಪರ್ಶವಾದ ನಂತರ ದುಂಬಿ
    ನನ್ನಿಂದಲೇ ಹೂವಿನ ವಂಶೋದ್ಧಾರ ಎನ್ನುವ ಅಹಂ
    ಹುಟ್ಟಿಸಿಕೊಳ್ಳುವ ಅಧಿಕಾರ ಇದ್ದೀತೇ?

    ಇಲ್ಲಿ ಹೂವಿಗೆ ದುಂಬಿಯೋ? ದುಂಬಿಗೆ ಹೂವೋ?
    ಯಾರು ಯಾರಿಗೆ ಕೃತಜ್ಞರಾಗಿರಬೇಕು?

  • ಭಾವ ನೀ…

    ಎಂದೂ ಬಿಚ್ಚಿಡದ
    ಮನದ ಹುಚ್ಚು ಕಥೆಯ
    ಮನಸಾರೆ ಬಿಗಿದಪ್ಪಿ ಆಲಿಸಿರುವೆ

    ಬಿಚ್ಚಿಟ್ಟ ಮಾತಿಗೆ
    ಬೆಚ್ಚಗಿನ ಭಾವ ಹೊದಿಸಿ
    ಕಟ್ಟಿಟ್ಟ ಉಸಿರಿಗೆ ಭರವಸೆಯ ಸೆಲೆಯ ಕೊಡಿಸಿರುವೆ

    ಹಚ್ಚದೆ ಉಳಿದಿರೋ
    ಹಣತೆಯ ಬತ್ತಿಗೆ
    ಹೊಳೆಯುವ ಹೊಳಪಿನ ಬೆಳಕ ಹರಿಸಿರುವೆ

    ಹೆಚ್ಚೇನೂ ಹೇಳದೆ
    ಕಣ್ಣ ಭಾಷೆಯಲೆ ಅರಿತು
    ನನ್ನೆದೆಯ ಆಲಂಗಿಸಿ ಹಗುರಾಗಿಸಿರುವೆ.

  • ತೀರದ ದಾಹ…

    ನಾವಿಬ್ಬರು ಒಟ್ಟಾಗಿ ತೀರದಲ್ಲಿ ಕುಳಿತು ಸಾಕ್ಷಿಯಾಗಿದ್ದ ಸಾವಿರಾರು ಅಲೆಗಳ ಬಡಿತಕ್ಕಿಂದು ಒಂಟಿ ಪ್ರೇಕ್ಷಕನ ಹಾಡು.

    ಸಾಗರದ ಅಲೆಯಲಿ
    ನಾ ತೇಲುವ ಮನಸಾಗಿದೆ.
    ಕಡಲಿನ ತೆರೆಯೊಳು ನನ್ನಯ ಭಾವವು ಒಪ್ಪಾಯಿತೇ…

    ಮಗುವಾದೆನೇನೋ ನಾನಂತೂ ಚೂರು
    ಉಕ್ಕಿತೇನೋ ನನ್ನೆದೆಯು ಪೂರಾ
    ಕಟ್ಟಿತೇ ಪ್ರೀತಿಯ ಹಾಡು
    ನನ್ನುಸಿರ ನೆನಪಿನ ಗೂಡು
    ಚಿಪ್ಪೊಳಗಿನ ಮುತ್ತಿನ ಹಾರ…

    ತೀರದಲಿ ಕಟ್ಟಿಹ ಮರಳಿನ ದಿಬ್ಬದಾಟವೂ ಇನ್ನೆಲ್ಲಿದೆ
    ಏರಿಳಿತದಲೆಗಳ ಬಡಿತದ ಸೆಲೆಗಳೆಲ್ಲವೂ ಅಳಿಸ್ಹೋಗಿದೆ.
    ಪ್ರತಿ ಬಾರಿಯ ಸಂದೇಶವು, ಕಾಯುತ್ತಿರೋ ಈ ಪ್ರೇಮಿಗೆ
    ಸುಳಿವಿಲ್ಲದೆ ಸೆರೆಯಾಗಿಹ, ಏಕಾಂಗಿಯ ಈ ಹಾಡಿಗೆ
    ಜೊತೆಯಾಗೀತೇನೋ ಕಡಲಂತರಾಳ
    ಸಂದೀತೇನೋ ಭಾವಾಂತರಾಳ…

  • ಕಾಂತಾರ ನನ್ನ ಪದದಲ್ಲಿ

    ಕಾಂತಾರ ಕಂಡೆ. ಕಣ್ಣಿಗಷ್ಟೇ ಅಲ್ಲ ಮನಸ್ಸಿಗೂ ಹಬ್ಬವಾಯ್ತು. ಕಂಡ ಗುಂಗಿನ್ನೂ ಇಳಿದಿಲ್ಲ. ಇಳಿಯುವ ಛಾಯೆಯೂ ಇಲ್ಲ. ಇದರ ಮಧ್ಯದಲ್ಲಿ 4 ಸಾಲು ಬರೆಯದಿರಲು ಮನಸ್ಸು ಒಪ್ಪಿಲ

    ಕಳೆಗುಂದಿದ ಬದುಕಿಗೆ,
    ಕಲೆ ಕಟ್ಟಿದ ಕಲ್ಲಿಗಾಗಿ
    ಬೆಲೆ ತೆತ್ತ ಮಣ್ಣನು,
    ಮರಳಿ ಕೇಳಿದ ಮರುಳನ

    ಮೆಟ್ಟಿನಿಂತ ದೈವದ ಮಹಿಮೆ ಅರಿಯದ ಕುಡಿಯು,
    ಗಡಿ ಪಾಲಕನ – ಪಡಿ ರಕ್ಷಕನ ಶಕ್ತಿಯ ಮೀರಿದ,
    ಯುಕ್ತಿ ಪ್ರದರ್ಶನದ ಭ್ರಮೆಯಲಿ,
    ಕಾರಣಿಕನೆದುರು ನಾ ತೃಣಕ್ಕೆ ಸಮವೆನ್ನುವುದ ಮರೆತ.

    ಪ್ರಕೃತಿಯ ಸೃಷ್ಟಿಯಲಿ ನಾನೊಂದು ಭಾಗ
    ಎಂದವನಿಗಷ್ಟೇ ಇಲ್ಲಿರುವುದು ಜಾಗ.
    ಮಣ್ಣಿನ ಮೋಹಕ್ಕೆ ಸ್ವಾರ್ಥವ ಮೆರೆದರೆ,
    ಬಸ್ಮವಾಗಿಸಿ ತನ್ನುದರವ ಸೇರಿಸಿಕೊಳ್ಳವುದು ಈ ಧರೆ‌.

  • ಕಾಂತಾರ

    “ಕಾಂತಾರ” ಕನ್ನಡ ಚಲನಚಿತ್ರದ ಟ್ರೈಲರ್ ನೋಡಿದಾಗ ನನ್ನ ಅನಿಸಿಕೆಯನ್ನು ಅಕ್ಷರರೂಪಕ್ಕೆ ತಂದಾಗ ಮೂಡಿದ ಸಾಲುಗಳು. ಕಾಂತಾರ ತಂಡದವರಿಗೆ ನನ್ನ ಅಭಿನಂದನೆಗಳು. ಬಹಳ ಅದ್ಭುತವಾಗಿ ಮೂಡಿಬಂದಿದೆ, ಚಿತ್ರದ ಬಿಡುಗಡೆಗೆ ಕಾಯುತ್ತಿದ್ದೇನೆ.

    ಮೆರುಗಿನ ಕಾಡಿನ ನಡುವಲಿ ಒಂದು
    ಬೆರಗಿನ ಕಥೆಯನು ಹೇಳಲು ಎಂದು
    ಹೊರಟಿಹ ಕಾರಣಿಕನು ನಮ್ಮಯ ಬಂಧು.

    ಚಾಟಿಯ ಕೋವಿಯ ನರ್ತನದಾಟ
    ಕೆಸರಿನ ಗದ್ದೆಯ ಕಂಬಳದೋಟ
    ಹಸುರಿನ ನಡುವಲಿ ಮರಗಳ್ಳರ ಕಾಟ.

    ಆಳುವ ಅರಸನ ಕೇಳುವರಿಲ್ಲ
    ದರ್ಪದ ಧೋರಣೆಗೆ ಜಾಗವೇ ಇಲ್ಲ
    ಕಾಯುವ ದೈವವೇ ನಮಗೆಲ್ಲಾ.

    ಕತ್ತಲ ರಾತ್ರಿ ಬಿತ್ತಿಹ ಭೀತಿ
    ಪಂಜಿನ ದಂಡು ಹೊತ್ತಿಹ ರೀತಿ
    ಬೆಂದಿಹುದಿದರಲಿ ಜೋಡಿಹಕ್ಕಿಯ ಪ್ರೀತಿ.

  • ಹಿಂತಿರುಗು

    ನಿಂತಲ್ಲೇ ಇರುವೆ ನೀ ನಡೆದ ಮೇಲೂ
    ಮನಸ್ಸಿಲ್ಲದ ಮನಸ್ಸಿಂದ ಬೀಳ್ಕೊಟ್ಟ ನಾನು.

    ಮುಳುಗುವ ರವಿಗೂ ಮುನಿಸಾದಂತಿದೆ
    ತಣ್ಣನೆ ಗಾಳಿ ತಿಳಿ ಹೇಳಿದೆ
    ತಡೆದು ನಿಲ್ಲಿಸು ತುಸು ಮಾತಿನ್ನೂ ಇದೆ
    ಉಷೆ ಉರುಳಿ ಶಶಿ ಏರುವ ಹೊತ್ತಾಗಿದೆ
    ತಿಳಿ ಬಾನಿನಾರಂಗಿಯ ರಸದೂಟವು ಬಾಕಿ ಇದೆ.

    ಬಾಯ್ ಮಾತಿನ ನಿನ್ನೀ ನಿರಾಕರಣೆ
    ನಿನ್ನೊಳಗಿನ ನಾಚಿಕೆಗೆ ಉದಾಹರಣೆ
    ನನ್ನಿ ವೇದನೆಗೆ ನೀನಷ್ಟೇ ಹೊಣೆ
    ಪ್ರತಿ ಉಸಿರು ಕಾದಿದೆ ನಿನ್ನಪ್ಪುಗೆಯ ನಿವಾರಣೆ.

  • ಅಮೃತ ಮಹೋತ್ಸವ

    ಬಂಧ ಮುಕ್ತರು ನಾವು,
    ಆದರಿನ್ನೂ ಆರಿಲ್ಲ ದಾಸ್ಯದ ಕಾವು.

    ಪರಕೀಯರ ಗುಲಾಮಗಿರಿಯಿಂದ ಸಿಕ್ಕಿತು ಗೆಲುವು,
    ನಮ್ಮವರದೇ ದರ್ಪದಲಿ ನಾವಿನ್ನೂ ನಲುಗುತ್ತಿರುವ ಹೂವು.

    ನಿಸ್ವಾರ್ಥ ನಿಷ್ಠೆಯ ನೆತ್ತರ ಹರಿವಿನ ಫಲವು
    ಅದಕ್ಕಿಂದು ಅಮೃತ ಮಹೋತ್ಸವ ಸಂಭ್ರಮದ ಚೆಲುವು.

    ಕುಟ್ಟಿ ಕೆಡವ ಬೇಕಿದೆ ನಮ್ಮೊಳಗಿನ ಜಡವು,
    ಗಟ್ಟಿಗೊಳ್ಳಬೇಕಿದೆ ಭರತ ಪುತ್ರರ ದಿಟ್ಟ ಕನಸಿನ ನಿಲುವು.

    ಕಾಡಬೇಕಿದೆ ನಮ್ಮವರ ತ್ಯಾಗ ಬಲಿದಾನದ ಕಾರಣವು,
    ಮೂಡಬೇಕಿದೆ ಪ್ರಜಾಪ್ರಭುತ್ವದ ಮೂಲ ಮಂತ್ರದ ಅರಿವು.