Category: Narratives

  • ಭರವಸೆಯ ಬೆನ್ನೇರಿ

    ಭರವಸೆಯ ಬೆನ್ನೇರಿ ಸಾಗಿ ಬಂದಿರುವೆ ನಾನು. ಲೋಕದ ಲೇವಡಿಗಳು ನನ್ನ ನೆಂದೂ ಕುಗ್ಗಿಸಲಿಲ್ಲ. ಬರಡು ಭೂಮಿಯಲ್ಲೂ ಬೆಳೆ ಬೆಳೆಯುವ ಛಲ ಒಂದಿಷ್ಟು ಕಡಿಮೆಯಾಗಿಲ್ಲ.

    ಪ್ರಸ್ತುತವನ್ನು ಪ್ರೀತಿಸಿ ಬದುಕುವ ನನಗೆ, ಭೂತಕಾಲವೆಂದೂ ಭಾರವೆನಿಸಲಿಲ್ಲ. ಭವಿಷ್ಯದ ಭಯ ಕಾಡಲಿಲ್ಲ. ಪ್ರತಿನಿತ್ಯ ಬದುಕು ಕಲಿಸುವ ಪಾಠ ನನ್ನ ಬಾಳ ದಾರಿಗೆ ನಕ್ಷೆ ಇದ್ದಂತೆ. ಕಷ್ಟಗಳ ಹೊರೆ ನನ್ನ ಬೆನ್ನ ಬಗ್ಗಿಸಿರಬಹುದು, ಗುರಿ ಸಾಧಿಸುವ ಭರವಸೆಯ ಸೆಲೆಯನ್ನಲ್ಲ.

  • ಕಾಂಚಾಣ

    ಮಣ್ಣಾಗುವುದು ಈ ದೇಹವಯ್ಯ..

    ಅದೆಷ್ಟು ಇನ್ನೂ ಮೋಹವಯ್ಯ?

    ತೀರದ ಬಯಕೆಯ ಹಂಬಲವೇಕೆ?

    ಸೋರುವ ಮಡಿಕೆಯು ತುಂಬುವುದೇನು?

    ಹರನೂ ಅರಿಯನು ನಿನ್ನಾಸೆಯ ಆಳ,

    ಅರೆ ನಿದ್ದೆಯಲೂ ನೀ ಹಾಕುವೆ ಗಾಳ.

    ಕಿತ್ತು ತಿನ್ನುವ ಕಡು ಬಡತನ ಒಂದು ಕಡೆ, ಕಿತ್ತೊಗೆಯುವ ದರ್ಪ ಇನ್ನೊಂದೆಡೆ. ಕಮರಿದ ಕನಸ್ಸು, ಕುಟುಕು ಕಾಯುತ್ತಿರುವ ಕೂಸು. ಕುರುಡು ಕಾಂಚಾಣದ ತುಳಿತಕ್ಕೆ ಕುಗ್ಗಿ ಕುಗ್ಗಿ ಒಂದೊತ್ತು ಕೂಳಿಗೂ ಕಷ್ಟ. ಬಡತನದ ಕಹಿ ಅರಗಿಸಲಾಗದ ಸ್ಥಿತಿ ಒಂದೆಡೆಯಾದರೆ, ಕಾಸಿನ ಕೇಕೆ ಇನ್ನೊಂದೆಡೆಗೆ. ಕಟ್ಟ ಕಡೆಯಲ್ಲಿ ಎಲ್ಲರೂ ಬದುಕುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ಕಠೋರ ಸತ್ಯ ಎಂದು ಅರ್ಥವಾಗುವುದೊ ಈ ಕೆಡವಿ ಬಾಳುವ ಕುಡಿಗಳಿಗೆ…

  • ಬೋಳು ಮರದ ಬುಡದಲ್ಲಿ

    ಒಂಟಿ ಬೋಳು ಮರದಡಿಯ ವಾಸ ನನ್ನದು. ಹೊಟ್ಟೆಯಲ್ಲಿ ಹಸಿವು, ಹಣೆಯ ಮೇಲೆ ಬಿಸಿಲು. ಹಸಿವು ನೀಗಿಸಲು ಹಣ್ಣುಗಳಿಲ್ಲ ಮರದಲ್ಲಿ, ಧಗೆಯ ತಣಿಸಲು ಎಲೆ ಹೂ ಹಂದರವಿಲ್ಲ. ಕಣ್ ತಂಪಾಗಿಸುವ ವಸಂತ ಋತು ಚಿಗುರಿನ ಸಿಂಗಾರದ ತೇರ ಕಾಣದೆ ವರ್ಷಗಳೇ ಕಳೆದಿದೆ. ಕಿವಿ ಇಂಪಾಗಿಸುವ ಗಿಜುಗುಡುವ ಗುಬ್ಬಿ ಗೀಜುಗಳ ಗೂಡುಗಳಿಲ್ಲ. ಮರೆಯಲ್ಲಿ ನಿಂತು ದಣಿವಾರಿಸಿಕೊಳ್ಳಲು ಬರುವ ಜಾನುವಾರುಗಳೂ ಇಲ್ಲ.

    ಗೆದ್ದಲಹುಳುಗಳ ದಿಬ್ಬಣ ಇತ್ತಕಡೆ ಸಾಗಿ ಬರುತ್ತಿರುವಂತಿದೆ. ಆದರೂ ಬೋಳು ಮರದ ತಾಯಿ ಬೇರಿನಲ್ಲಿ ಒಂದು ತೊಟ್ಟು ಜೀವ ಜಲ ಇನ್ನೂ ಹರಿದಿದೆ. ಹಾಗಾಗಿ ಮರವಿನ್ನೂ ನಿಂತಿದೆ, ನಾನು ನಿಂತಿದ್ದೇನೆ.

    ಇಬ್ಬರೂ ಪ್ರತಿ ದಿನವೂ ಕಾಯುವುದು ಪೌರ್ಣಿಮೆಯ ಚಂದ್ರನ ಬೆಳದಿಂಗಳೂಟಕ್ಕೆ, ಆ ಚುಮು ಚುಮು ಗಾಳಿಯ ಚುಂಬನಕ್ಕೆ. ಇದೇ ನಮ್ಮಿಬ್ಬರಿಗೂ ರಸದೌತಣ ಹಾಗೂ ಮರುಹುಟ್ಟಿನ ಆಶಾಕಿರಣ.

  • ಅವತರಿಸು ತಾಯಿ

    ಅದೊಂದು ಪೌರ್ಣಿಮೆ ರಾತ್ರಿ, ದೂರದ ದೊಡ್ಡ ಬಯಲಲ್ಲಿ ದೇವಿ ಮಹಾತ್ಮೆ ಯಕ್ಷಗಾನ. ಮಧ್ಯರಾತ್ರಿ ಮೈಸಾಸುರನ ರಂಗ ಪ್ರವೇಶದ ಹೊತ್ತು. ಕೊಂಬು, ಚಂಡೆ, ಮದ್ದಳೆಗಳ ಸದ್ದು ಜೋರಾಗಿಯೇ ಇತ್ತು. ಜನರೆಲ್ಲ ಯಕ್ಷಗಾನದಲ್ಲಿ ತಲ್ಲೀನರಾಗಿದ್ದರು. ಪಂಜಿನ ಮಧ್ಯದಲ್ಲಿ ಮೈಸಾಸುರನು ರೌದ್ರಾವತಾರದಲ್ಲಿ ಆಗಮನ. ಅದೇ ಸಮಯದಲ್ಲಿ ಅಲ್ಲೇ ಸ್ವಲ್ಪದೂರದಲ್ಲಿ ಒಂದು ಪೊದೆಯ ಬಳಿ ನರರೂಪ ರಾಕ್ಷಸನೊಬ್ಬ ಅಮಾಯಕ ಹೆಣ್ಣನ್ನು ಅಟ್ಟಿಸಿಕೊಂಡು ಬಂದು, ತನ್ನ ರಕ್ಕಸ ಗುಣವನ್ನು ಪ್ರದರ್ಶಿಸ ತೊಡಗಿದ.

    ಅತ್ತ ಅಸುರನ ಅಟ್ಟಹಾಸ, ಇತ್ತ ಅಬಲೆಯ ಅಸಹಾಯಕತೆಯ ಅಶ್ರುಧಾರೆ. ಆಕೆ ಅದೆಷ್ಟೇ ಪ್ರಯತ್ನಿಸಿದರೂ ಅಷ್ಟಬಂಧನದಿಂದ ಹೊರಬರಲಾಗಲೇ ಇಲ್ಲ. ಇತ್ತ ಮಂದಿಯೆಲ್ಲಾ ಮೈಸಾಸುರನ ಕುಣಿತದ ಅಬ್ಬರದಲ್ಲಿ ಮೈ ಮರೆತಿದ್ದರು. ನಾರಿಯ ಕೂಗೂ ಅದಾರಿಗೂ ಕೇಳಿಸಲೇ ಇಲ್ಲ. ಅದಾಗಲೇ ರಂಗದಲ್ಲಿ ದೇವಿಯು ಅವತಾರವೆತ್ತಿ ಮೈಸಾಸುರನ ವಧೆಗೆ ಸಿದ್ದಳಾಗಿದ್ದಳು. ಆದರಿಲ್ಲಿ ಹುಣ್ಣಿಮೆ ಚಂದ್ರನೂ ಮೂಕ ಪ್ರೇಕ್ಷಕನಾಗಿದ್ದಾನೆ.

    ಕೊನೆಗೂ ದೇವಿ ಮೈಸಾಸುರನ ಹತ್ಯೆ ಮಾಡಿ, ಜನರ ರಕ್ಷಣೆ ಮಾಡಿದಳು. ಆದರೆ ಇತ್ತ ಈ ಹೆಣ್ಣು ಮಗಳು ಪರಿಪರಿಯಾಗಿ ಬೇಡಿದರೂ ತಾಯಿ ಕೈ ಹಿಡಿಯಲಿಲ್ಲ, ಅವತಾರವೆತ್ತಲಿಲ್ಲ. ಒಂದು ಕಡೆ ರಾಕ್ಷಸನ ಸಂಹಾರ, ಇನ್ನೊಂದೆಡೆ ಅಮಾಯಕಿಯನ್ನು ಅದೇ ಮೈಸಾಸುರನ ಸ್ವಾಗತಿಸಿದ ಪಂಜಿನಿಂದ ದಹನ. ಆ ಬೆಂಕಿಯ ಜ್ವಾಲೆಯ ತಾಪಕ್ಕೆ ಮೈಯ ಕಾವು ಏರಿ ತಕ್ಷಣ ಎಚ್ಚರಗೊಂಡೆ. ಕಂಡಿದ್ದು ಘೋರ ಕನಸ್ಸು ಎಂದು ತಿಳಿಯಿತು. ಬೆಂಕಿ ಆರಿತ್ತು, ಬೆಳಕು ಹರಿದಿದ್ದು. “ಕಲಿಯುಗದಲ್ಲಿ ಅಸುರ ಸಂಹಾರಕ್ಕೆ ಆ ದೇವಿ ಅದೆಂದು ಅವತಾರವೆತ್ತಿ ಬರುವಳೋ?” ಎಂದು ಮನದೊಳಗೆ ಮರುಗುತ್ತ ಎದ್ದು ನಡೆದೆ.

  • ಬೆಳ್ಳಿ ತಂತಿಗಳು

    ಕಡು ಕಪ್ಪು ಮೋಡಗಳ ಮಧ್ಯದಲ್ಲಿ ಕೋಲ್ ಮಿಂಚಿನಂತೆ ಮಿರಮಿರನೆ ಮಿಂಚುತ್ತಿರುವ ಬಿಳಿಯ ಕೂದಲುಗಳು ವಯಸ್ಸಿನ ಓಟವನ್ನು ಒತ್ತಿ ಒತ್ತಿ ಹೇಳುತ್ತಿದೆ. ಆದರೆ ಮನಸ್ಸು… ಈಗಲೂ ತಾಯ ತೆಕ್ಕೆಯಲ್ಲಿ ತೊದಲು ನುಡಿಯುವ ಮಗುವಾಗಿರಲು ಬಯಸುತ್ತಿದೆ. ಏನನ್ನೆಲ್ಲಾ ಬದುಕಲ್ಲಿ ಒಪ್ಪಿಕೊಂಡ ಮನಸ್ಸಿಗೆ ಬಿಳಿಕೂದಲನ್ನು ಸ್ವೀಕರಿಸಲಾಗುತ್ತಿಲ್ಲ.

    ಕನ್ನಡಿಯ ಮುಂದೆ ನಿಂತು ನೋಡಿದಾಗಲೆಲ್ಲ ಇಣುಕಿಣುಕಿ ನೋಡಿ, ವ್ಯಂಗ್ಯ ನಗುವ ಬೀರಿ, ನನ್ನ ಕೆಣಕುವ ಯತ್ನ ಮಾಡುತ್ತಿವೆ ಈ ಬೆಳ್ಳಿ ತಂತಿಗಳು. ಬಾಲ್ಯದ ನೆನಪುಗಳು ಇನ್ನೂ ಹಸಿಯಾಗಿ ಇದ್ದಂತಿದೆ, ಆದರೆ ಆಗಲೇ ಮಧ್ಯವಯಸ್ಸು ದಾಟಿಯಾಗಿದೆ. ತಿರುಗಿ ನೋಡಿದರೆ ಸಾಧಿಸಿದ್ದು ಏನು ಇಲ್ಲ ಎಂದೆನಿಸುತ್ತದೆ. ಬೆಳ್ಳಿ ಕೂದಲುಗಳು ನನ್ನನ್ನು ಬಡಿದೆಬ್ಬಿಸಿದಂತಿದೆ.

    ಇಷ್ಟು ದಿನ ಬೆತ್ತಲ ಪ್ರಪಂಚದಲ್ಲಿ ಮುಖಕ್ಕೆ ಬಣ್ಣ ಹಚ್ಚಿ ಮಾರುವೇಷದಲ್ಲಿ ಬದುಕ್ಕಿದ್ದಾಯಿತು, ಇನ್ಮುಂದೆ ಕೂದಲಿಗೆ ಬಣ್ಣ. ಹೀಗೆ ಬಣ್ಣ ಬಳಿದುಕೊಂಡು, ಬಳಿಸಿಕೊಂಡು, ಮತ್ತೊಬ್ಬರಿಗೆ ಹಚ್ಚುವುದರಲ್ಲಿ ಜೀವನದ ಅಮೂಲ್ಯ ಸಮಯವನ್ನು ಕಳೆದಿದ್ದಾಯಿತು. ಬಾಹ್ಯಸೌಂದರ್ಯ ಸುಕ್ಕಾದರೂ, ಅಂತರಂಗ ತುಕ್ಕು ಹಿಡಿಯಲು ಎಂದೂ ಬಿಡಬಾರದು. ಇನ್ನಾದರು ಸಾರ್ಥಕತೆಯ ಸಂತಸದ, ಸತ್ವಭರಿತ ಸಮಯಕ್ಕಾಗಿ ಸೆಣೆಸಾಡುವೆ.