“ನೀನು ಅತಿಲೋಕ ಸುಂದರಿಯಲ್ಲ! ಹೊರಗೆ ಹೊರಟಾಗ ಶಾಲು ಸರಿಯಾಗಿ ಮೈ ತುಂಬಾ ಹೊದ್ದು ಹೋಗು.”
“ತಲೆಯೆತ್ತಿ ನಡಿಬೇಡ; ಕಣ್ಣು ನೆಲ ಬಿಟ್ಟು ಮೇಲೆ ನೋಡಿದ್ರೆ ನಾಳೆಯಿಂದ ಶಾಲೆಯ ಮೆಟ್ಟಿಲಲ್ಲ ಮನೆಯ ಹೊಸಲು ಕೂಡ ದಾಟೋಕಾಗಲ್ಲ ನೀನು ನೆನಪಿಟ್ಟುಕೋ.”
“ಮನೆಗೆ ಯಾರಾದ್ರೂ ಬಂದ್ರೆ ಅಮ್ಮ ಅವರಿಗೆ ಊಟ ಬಡಸ್ತಾರೆ. ನೀನು ಕೋಣೆಲೆ ಇರು.”
ಹೀಗೆ ಅಪ್ಪ ಅಣ್ಣನ ಗೀತೋಪದೇಶ ನನ್ನ ಕಿವಿಲಿ ನಿತ್ಯವೂ ಸುಪ್ರಭಾತದ ಹಾಗೆ ಮೊಳಗ್ತಾ ಇರೋವಾಗ, ನನ್ನ ಇವತ್ತಿನ ಬದುಕನ್ನ ಹೇಗೆ ಒಪ್ಪಿಕೊಳ್ಳಲಿ? ತಲೆ ಎತ್ತಲಾರೆ, ಕಣ್ಣು ಸೇರಿಸಲಾರೆ, ಸೆರಗು ಸರಿಸಲಾರೆ, ಅಪರಿಚಿತನೊಟ್ಟಿಗಿನ ಏಕಾಂತ ಸಹಿಸಲಾರೆ. ಹೌದು! ಅಣ್ಣಂದಿರು ಹೆಕ್ಕಿ ಆರಿಸಿ ತಂದ ಈ ಗಂಡಿನಲ್ಲಿ ನನಗೆ ಅಪರಿಚಿತನಿಗಿಂತ ಮೀರಿದ ಭಾವ ಹೇಗೆ ತಾನೆ ಮೂಡಿಯಾತು?
ನಿನ್ನೆ ನನ್ನ ಮದುವೆಯ ಸಂಭ್ರಮ. ಅಲ್ಲಿ ನನಗೆ ಅರ್ಥವಾಗದ ಮೊದಲ ವಿಷಯ ಸಂಭ್ರಮ ಯಾರದ್ದೆಂದು? ಮಗಳ ಜವಾಬ್ದಾರಿ ಮುಗೀತು ಅಂತ ನನ್ನ ತವರಿನವರ ಸಂಭ್ರಮವೋ? ಕುರಿ ಹಳ್ಳಕ್ಕೆ ಬಿತ್ತು ಎಂದು ಈ ಮನೆಯವರ ಸಂಭ್ರಮವೋ? ಅಥವಾ ಊಟವೇ ಕಂಡಿಲ್ಲವೇನೋ ಅನ್ನೋವಷ್ಟು ಮಟ್ಟಿಗೆ ನೂಕು ನುಗ್ಗಲಿನಲ್ಲಿ ಉಂಡು ತೇಗಿಹೋದ ನೆಂಟರ ಸಂಭ್ರಮವೋ? ಅರಿಯಲಿಲ್ಲ. ನನಗೆ ಅರ್ಥವಾದದ್ದು ಒಂದೇ ಅದು ನನ್ನ ಸಂಭ್ರಮದ ಸಮಾರಂಭವಂತೂ ಅಲ್ಲ. ಮತ್ತೊಂದು ಸಂಕೋಲೆಗೆ ಆಹ್ವಾನವಷ್ಟೇ.
ಆಡುವ ವಯಸ್ಸಿನಲ್ಲಿ ನನ್ನ ಗೆಳೆಯರೊಟ್ಟಿಗೆ ಆಡಲಿಲ್ಲ. ಓದುವ ಬಹುದೊಡ್ಡ ಕನಸಿದ್ದರು ಮುಂದುವರಿಯಲು ಬಿಡಲಿಲ್ಲ. ಸಹಜವಾದ ಬದುಕು ಕಾಣಲೇ ಇಲ್ಲ. ಸಾಕಿದ ನಾಯಿಯನ್ನಾದರೂ ದಿನಕ್ಕೊಮ್ಮೆ ಕಾಲಾಡಿ ಬರಲು ಬಿಡುತ್ತಿದ್ದರು. ಆದರೆ ನಾನು ಕೋಟೆಯ ಕತ್ತಲಿನ ಕೋಣೆಗೆ ಒಡತಿಯಾದೆ. ಬೆಳಕೇ ಕಾಣದ ಈ ಕಣ್ಣುಗಳು ಒಮ್ಮೆಲೆ ಮಿಂಚಿನ ತೀಕ್ಷ್ಣತೆಗೆ ಹೇಗೆ ಒಗ್ಗಿಯಾತು?
ಬಣ್ಣ ಬೇಕಿತ್ತು. ನನಗೆ ಬಣ್ಣ ಬೇಕಿತ್ತು. ಬಟ್ಟೆಯಲ್ಲಿ ಬಣ್ಣ ಬೇಕಿತ್ತು. ಬದುಕಿನಲ್ಲಿ ಬಣ್ಣ ಬೇಕಿತ್ತು. ಆದರೆ ಕಂಡಿದ್ದು ಬರ. ಪ್ರೀತಿಯ ಬರ. ನಗುವಿನ ಬರ. ಬಾಲ್ಯದ ಸವಿನೆನಪುಗಳ ಬರ. ಅವಳ್ಯಾರೋ ಕೊನೆಯ ಮನೆಯ ಹುಡುಗಿ ಯಾವುದೋ ಹುಡುಗನೊಟ್ಟಿಗೆ ಓಡಿದ್ಲು. ಆ ಕಾರಣಕ್ಕೆ ಇಲ್ಲಿ ನನ್ನ ಓದು ನಿಂತಿತ್ತು. ಅವಳ್ಯಾರೋ ಓಡಿದ್ರೆ ನನಗ್ಯಾಕೆ ಶಿಕ್ಷೆ? ಅಷ್ಟಕ್ಕೂ ಸಿಗಬೇಕಾದ ಪ್ರೀತಿ ಅವಳ ಮನೆಯಲ್ಲಿ ಸಿಕ್ಕಿದ್ರೆ ತನ್ನೆಲ್ಲಾ ತಂತುಗಳನ್ನು ಕಳಚಿ ಯಾಕೆ ಓಡಿ ಹೋಗ್ತಾ ಇದ್ಲು?
ಪ್ರತಿ ಹೆಜ್ಜೆಯಲ್ಲೂ ಕೊರತೆಯನ್ನೇ ಎತ್ತಾಡುವವರ ಮಾತಿನ ಚಾಟಿಯ ಭಯ ಇಡೀ ದೇಹವನ್ನೇ ಆವರಿಸಿದೆ. ಭಯವೇ ತುಂಬಿರುವ ಈ ಬದುಕಲ್ಲಿ ಈಗ ಭಾವಕ್ಕೆಲ್ಲಿದೆ ಜಾಗ? ಪ್ರತಿ ಬಾರಿಯೂ ಭಯ ನನ್ನ ಕಣ್ಣುಗಳನ್ನು ಮುಚ್ಚಿಸುತ್ತಲೇ ಬಂತು. ಈಗ ಬದುಕಲ್ಲಿ ಹಿಂತಿರುಗಿ ನೋಡಿದರೆ ನನ್ನ ನೆನಪಿನ ಪಟದಲ್ಲಿ ಉಳಿದಿರುವುದು ಕೇವಲ ತಾಯಿಯ ಉದರದಿಂದಾಚೆ ಬಂದಾಕ್ಷಣ ನಾ ಕಂಡ ನನ್ನಮ್ಮನ ನಗುವಿನ ಮುಖದ ನೆನಪಷ್ಟೇ. ಅದನ್ನ ಮೀರಿದ ಪ್ರಪಂಚವನ್ನು ನಾನು ಒಪ್ಪಲಾರೆ. ಅಪ್ಪಿಕೊಳ್ಳಲಾರೆ. ಹಾಗಾಗಿ ಕೆಣಕಬೇಡಿ ನನ್ನನ್ನು.
ಹೌದು ಹೆಣ್ಣು ಪ್ರಕೃತಿ. ಹೆಣ್ಣು ಭೂಮಿ. ಆದರೆ ಪ್ರೀತಿಯ ಬಿತ್ತಿ, ಭಾವವ ಬೆಳೆಸಬೇಕಲ್ವಾ? ಅದನ್ನ ಬಿಟ್ಟು ಪ್ರತಿ ಬಾರಿ ಮೋಟಕುಗೊಳಸಿ, ಬೆಳೆಯದಂತೆ ಮಾಡಿ, ಬರಡಾಗಿಸಿದ್ರಿ. ಈಗ ಬೇಡಿದ್ರೆ? ಈ ಬಂಜರು ಭೂಮಿಯಿಂದ ನಾನೇನು ಕೊಡಲಿ? ಎಲ್ಲವೂ ಮಡುಗಟ್ಟಿದ ಮೇಲೆ ಹರಿವು ಅಸಾಧ್ಯ. ಒಗ್ಗಿಕೊಳ್ಳಲಾರೆ. ಈ ಹೊಸ ಬದುಕ ಹೆಣೆಯಲಾರೆ.
ಜೇಡ ಬಲೆ ಕಟ್ಟಿದೆ. ಬಲವಂತಕ್ಕೆ ಬೇಟೆ ಬಲಿಯಾಗಲಿದೆ. ಸಾಧ್ಯವಿಲ್ಲ! ಇದು ನನ್ನಿಂದ ಖಂಡಿತ ಸಾಧ್ಯವಿಲ್ಲ. ನಾನು ಮೂಕಳಾಗುತ್ತೇನೆ. ಬುದ್ಧಿಗೆ ಮಂಪರು ಬರೆಸುತ್ತೇನೆ. ಬೇಡವಾದ ಬಾಹುಗಳಲ್ಲಿ ಸಿಲುಕುವ ಬದಲು ಹುಚ್ಚಿ, ಮೂಕಿ ಎಂಬ ಪಟ್ಟವೇ ಲೇಸು. ಇವರಾದರೂ ಎಷ್ಟು ದಿನ ಈ ಮೂಕಿಯನ್ನು ಸಹಿಸಿಯಾರು? ಹುಚ್ಚಿಯ ಹೊತ್ತು ನಡೆದಾರು? ಕಲ್ಲಾಗಿರುವ ಭಗವಂತನೇ! ಹಡೆದವ್ವನ ಹೊಟ್ಟೆಗೆ ಈ ಹೆಪ್ಪುಗಟ್ಟಿದ ಜೀವವ ಹೇಗಾದರೂ ಮತ್ತೆ ಮರಳಿಸು. ಹಾಲು ತುಪ್ಪ ಸಿಗದಿದ್ದರೂ ಬೆಚ್ಚಗಿನ ಭಾವದಲ್ಲಿ ಮುದುಡಿ ಮಲಗುವೆ.
ಸ್ವಾತಂತ್ರ್ಯವೇ ಇಲ್ಲದ, ಕಟ್ಟುನಿಟ್ಟಿನ ಕುರುಡು ನಂಬಿಕೆಗಳ ನಡುವಿನ ಕುಟುಂಬದಲ್ಲಿ ಬೆಳೆದ ಒಂದು ಮುಗ್ಧ ಹೆಣ್ಣಿನ ಕಾಲ್ಪನಿಕ ಕಥೆ.
Leave a Reply