“ಇಲ್ಲಾ ಆಂಟಿ ಹೊಟ್ಟೆ ಫುಲ್ ಆಗಿದೆ! ಸಾಕು, ಸಾಕು..”
“ಇದೇನು ನೀನು ಇಷ್ಟು ಕಮ್ಮಿ ತಿನ್ನೋದು, ಇನ್ನೊಂದ್ ಸ್ವಲ್ಪ ತಿನ್ನು. ನೀನು ಬರೋದೇ ಅಪರೂಪ ನಮ್ ಮನೆಗೆ.”
“ಇಲ್ಲ ಅಂಟಿ ಇನ್ನು ಸ್ವಲ್ಪ ತಿನ್ನೋಕು ಜಾಗ ಇಲ್ಲ ಹೊಟ್ಟೆಲಿ.” ಮಾಮೂಲಾಗಿ ಯಾರಾದರೂ ಅತಿಥಿಗಳು ಬಂದಾಗ ಅಥವಾ ನಾವು ಯಾರದ್ದಾದರೂ ಮನೆಗೆ ಹೋದಾಗ, ಈ ತರಹದ ಸಂಭಾಷಣೆಗಳು ಕೇಳ್ತಾನೆ ಇರ್ತೀವಿ.
ಅದೇ ರೀತಿ, “ಅಮ್ಮ ಊಟ ಮಾಡಿದೆ ಎರಡು ದಿನ ಆಯ್ತು ಏನಾದ್ರೂ ತಿನ್ನೋಕ್ ಇದ್ರೆ ಕೊಡಿ.”
“ಹೋಗಿ, ಹೋಗಿ ಮುಂದೆ ಹೋಗಿ.. ಏನು ಇಲ್ಲ”
“ಇಲ್ಲಮ್ಮ ಏನಾದ್ರೂ ಕೊಡಿ, ತಂಗಳು ಆದರೂ ಪರವಾಗಿಲ್ಲ ತುಂಬಾ ಹಸಿವು, ತಾಳಲಾರದ ಹಸಿವು” ಇದು ಕೂಡ ಕೇಳ್ತಾ ಇರ್ತೀವಿ ಅಲ್ವಾ?
ಈ ಎರಡು ಸನ್ನಿವೇಶದಲ್ಲಿ ನಾವು ನೋಡಬಹುದಾದ ಸಾಮಾನ್ಯ ಅಂಶ ಎಂದರೆ ಹೊಟ್ಟೆ. ಒಂದು ಕಡೆ ತುಂಬಿದ ಹೊಟ್ಟೆಗೆ ಇನ್ನು ತುಂಬಿಸಲು ಜಾಗದ ಕೊರತೆ. ಇನ್ನೊಂದೆಡೆ ಖಾಲಿ ಹೊಟ್ಟೆಗೆ ಚೂರು-ಪಾರಾದರೂ ಸೇರಿಸಿಕೊಳ್ಳುವ ಚಿಂತೆ. ನಾವು ಯಾವಾಗಲೂ ಹೊಟ್ಟೆ ತುಂಬಿದವರನ್ನೇ ಮತ್ತೆ ಮತ್ತೆ ತಿನ್ನಲು ಒತ್ತಾಯಿಸುವುದರಲ್ಲಿ ಏನು ಅರ್ಥವಿದೆ? ಅದರ ಬದಲು ಇನ್ನೆಲ್ಲೋ ಅವಶ್ಯಕತೆ ಇರುವವರಿಗೆ ನಾವು ನೀಡಲು ಯೋಚಿಸುವುದಿಲ್ಲ ಯಾಕೆ?
ಹೇಳ್ತಾರಲ್ಲ ಹಸಿದವರಿಗೆ ಗೊತ್ತು ಅನ್ನದ ಬೆಲೆ ಅಂತ. ಹೊಟ್ಟೆ ತುಂಬ ಊಟ ಆದ್ಮೇಲೂ, ಇನ್ನೂ ‘ಒಂದು ಸ್ವೀಟು, ಇಲ್ಲಾಂದ್ರೆ ಒಂದು ಸ್ವೀಟ್ ಬೀಡನೋ ತಿಂದಿದ್ರೆ ಚೆನ್ನಾಗಿರುತ್ತಿತ್ತು’ ಅಂತಾರಲ್ಲ! ಅದಲ್ಲ ಹಸಿವು. ಹಸಿವಾರಿಸಲು ಖಾಲಿ ಹೊಟ್ಟೆಯಲ್ಲಿ ತಣ್ಣಗಿನ ನೀರು ಕುಡಿದಾಗ, ನರನಾಡಿಯಲ್ಲಿ ನೀರು ಹರಿದುಹೋಗುವ ಅನುಭವ ಅರಿಯುತ್ತಲ್ಲ. ಅದು ಹಸಿವು. ಪಾಪ, ಹಸಿವಿನಲ್ಲಿ ಎಷ್ಟು ಅಂತ ನೀರು ಕುಡಿಯೋಕೆ ಆಗುತ್ತೆ. ನೀರು ನಿಲ್ಲಲ್ಲ. ಹರಿದು ಹೋಗ್ತಾ ಇರುತ್ತೆ. ಆಮೇಲೆ.. ಮತ್ತದೇ ಹಸಿವು ಕಾಡುತ್ತೆ.
“ಯಾಕೋ ಇವತ್ತು ಬಾಕ್ಸ್ ಗೆ ಹಾಕಿದ್ದ ತಿಂಡಿ ತಿಂದಿಲ್ಲ.”
“ಇಲ್ಲಾ ಅಮ್ಮ, ನನ್ನ ಫ್ರೆಂಡ್ ಬರ್ತಡೇ ಪಾರ್ಟಿ ಇತ್ತು. ಹಾಗಾಗಿ ಅಲ್ಲೇ ಊಟ ಮಾಡಿದೆ. ನೀನು ಕೊಟ್ಟ ಬಾಕ್ಸ್ ಹಾಗೆ ಉಳಿದು ಹೋಯಿತು.”
“ಅಹಂಕಾರ ನಿನಗೆ. ಊಟ ವೇಸ್ಟ್ ಮಾಡ್ತೀಯಾ. ಊಟದ ಬೆಲೆ ಗೊತ್ತಿಲ್ಲ. ಮುಂಚೆನೇ ಹೇಳಿದ್ರೆ ಬಾಕ್ಸ್ ಕಳಿಸ್ತಾನೆ ಇರಲಿಲ್ಲ ನಾನು.”
“ಇರ್ಲಿ ಬಿಡು, ಒಂದು ಬಾಕ್ಸ್ ಹಳಸಿದ್ದಕ್ಕೆ ಯಾಕಿಷ್ಟು ಬೈತಿಯಾ?”
ಅಮ್ಮ ಕೊಟ್ಟ ಬಾಕ್ಸ್ ನ ಪಾರ್ಟಿಗೆ ಹೋಗೋ ಉತ್ಸಾಹದಲ್ಲಿ, ಹಾಗೆ ಉಳಿಸಿ, ಹಳಸಿ ಮನೆಗೆ ತರೋ ಬದಲು, ಅಲ್ಲಿ ಕಾಲೇಜ್ ಹತ್ತಿರ ಯಾರಾದ್ರೂ ಹಸಿದವರಿಗೆ ಕೊಡಬಹುದಲ್ಲಾ. ಆದರೆ ಎಷ್ಟೋ ಜನ ಕೊಡಲ್ಲ. ಯಾಕೆಂದರೆ ಯಾವಾಗಲೂ ಮೋಜು ಮಸ್ತಿಯ ಹುಮ್ಮಸ್ಸಿನಲ್ಲಿ ಇರುವವರಿಗೆ ಹಸಿವೆಯ ಬೆಲೆ ಹೇಗೆ ಅರಿಯುತ್ತದೆ?
ಹಲವು ಬಾರಿ ನಾವು ಸಮಾರಂಭಗಳಿಗೆ ಹೋದಾಗ, ತಮ್ಮ ಅಗತ್ಯಕ್ಕಿಂತ ಹೆಚ್ಚು ತಮ್ಮ ತಮ್ಮ ಎಲೆಗಳಿಗೆ ಬಡಿಸಿಕೊಂಡು, ಯಾವುದನ್ನೂ ಎರಡು ತುತ್ತಿಗಿಂತ ಹೆಚ್ಚು ತಿನ್ನದೆ ಹಾಗೆ ಎಸೆಯುವ ಎಷ್ಟೋ ಜನರನ್ನು ನೋಡಿರುತ್ತೇವೆ. ಅವರ ಹೊಟ್ಟೆಗೆ ಸೇರುವುದಕ್ಕಿಂತ ಹೆಚ್ಚಿನ ಭಾಗದಷ್ಟು ಊಟ ತಿಪ್ಪೆ ಸೇರುತ್ತದೆ. ಈ ರೀತಿ ಮಾಡುವುದು ನಾವು ಅನ್ನಪೂರ್ಣೇಶ್ವರಿ ಗೆ ಮಾಡುವ ಅವಮಾನ ಅಲ್ಲದೆ ಇನ್ನೇನು?
“ಬೇಗ ಮುಖ ತೊಳೆದು ಬಾ, ನಿನಗೆ ಇಷ್ಟವಾದ ಪಾಯಸ, ಒಬ್ಬಟ್ಟು ಎಲ್ಲಾ ಮಾಡಿದ್ದೆ.”
“ಏನಮ್ಮ! ಎಷ್ಟು ಸಲ ಹೇಳಿದೀನಿ ಸ್ವೀಟ್ ಎಲ್ಲಾ ಮಾಡಬೇಡ. ನಾನು ಡಯಟ್ ಅಲ್ಲಿದೀನಿ. ಅದನ್ನೆಲ್ಲ ತಿನ್ನಲ್ಲ. ನಿನಗೆ ಗೊತ್ತಿದೆ ತಾನೇ.”
“ಗೊತ್ತಿದೆ, ಆದರೆ ಮನಸ್ಸು ಕೇಳಬೇಕಲ್ವಾ. ಬೆಳೆಯೊ ಮಗಳು ಹೊಟ್ಟೆತುಂಬಾ ತಿನ್ನಲಿ, ದಷ್ಟಪುಷ್ಟವಾಗಿ ಇರಲಿ, ಅಂತ ಆಸೆ.” ಹೀಗೆ ತಾಯಿ ಮಗಳ ಸಂಭಾಷಣೆ ಅನೇಕ ಮನೆಗಳಲ್ಲಿ ನಡೆಯುತ್ತದೆ. ಇದು ಇನ್ನೊಂದಿಷ್ಟು ಜನರ ಪಾಡು. ತಿನ್ನೋಕೆ ಇದ್ದು, ತೂಕ ಹೆಚ್ಚಾಗುವ ಚಿಂತೆ. ಕೊಬ್ಬು ಕರಗಿಸುವವರ ಸಮೂಹ ಒಂದು ಕಡೆ. ಮೈಯಲ್ಲಿ ಮಾಂಸವೇ ಇಲ್ಲದೆ ಮೂಳೆಗಳದ್ದೇ ಸಾಮ್ರಾಜ್ಯ ಇನ್ನೊಂದು ಕಡೆ.
ಬಡತನದಲ್ಲಿ ಹೊಟ್ಟೆಯ ಹಸಿವು. ಸಿರಿತನದಲ್ಲಿ ಹಣ, ಮೋಜು-ಮಸ್ತಿ, ದೇಹ ಸೌಂದರ್ಯ ಕಾಪಾಡಿಕೊಳ್ಳೊದು ಇತ್ಯಾದಿಗಳ ಹಸಿವು. ಒಟ್ಟಿನಲ್ಲಿ ಈ ಪ್ರಪಂಚದಲ್ಲಿ ಎಲ್ಲರೂ ಒಂದಿಲ್ಲೊಂದು ತರಹದ ಹಸಿವಿನಲ್ಲಿ ಸದಾ ಒದ್ದಾಡುತ್ತಾ ಇರುತ್ತಾರೆ. ಆದರೆ ನನ್ನ ಮಟ್ಟಿಗೆ ಹೊಟ್ಟೆಯ ಹಸಿವು ಎಲ್ಲಕ್ಕಿಂತ ದೊಡ್ಡದು. ಹಸಿವಿನಿಂದ ಸಾಯುವುದು ದೊಡ್ಡ ಅನ್ಯಾಯ. ಅದ್ಯಾಕೆ ಆ ದೇವರು ಹುಟ್ಟಿಸಿದವನಿಗೆ ಹುಲ್ಲು ಹಾಕದೆ ಸಾಯಿಸುತ್ತಾನೋ ಎಂದುಕೊಳ್ಳುವ ಬದಲು, ನಾವು ನಮ್ಮ ಕೈಲಾದ ಮಟ್ಟಿಗೆ ಅವರ ಹಸಿವನ್ನು ಬರಿಸೋಣ. ಹಸಿದವರಿಗಾಗಿಯೇ ಅಡುಗೆ ಮಾಡಿ ಬಡಿಸುವವರು ಶ್ರೇಷ್ಠರು. ಪ್ರಪಂಚದಲ್ಲಿ ಈ ಶ್ರೇಷ್ಠ ಕೆಲಸ ಎಷ್ಟೋ ಜನರು ಮಾಡುತ್ತಿದ್ದಾರೆ. ಆ ಮಹಾನುಭಾವರಿಗೆ ನನ್ನದೊಂದು ನಮಸ್ಕಾರಗಳು. ನಮಗೆ ಅಷ್ಟೆಲ್ಲಾ ಮಾಡಲು ಸಾಧ್ಯವಾಗದಿದ್ದರೂ, ಕನಿಷ್ಠಪಕ್ಷ ನಾವು ಆಹಾರವನ್ನು ವೇಸ್ಟ್ ಮಾಡದೆ, ನಮ್ಮ ಕೈಲಾದಷ್ಟು ಹಸಿವನ್ನು ತಣಿಸೋಣ. ಒಂದೊಂದು ಅಗಳಿನ ಹಿಂದಿನ ಶ್ರಮಕ್ಕೆ ಬೆಲೆ ಕಟ್ಟೋಣ.
Leave a Reply